ಲಸಿಕೆಯಿಂದ 700 ಗಂಭೀರ ಅಡ್ಡ ಪರಿಣಾಮ
ನವದೆಹಲಿ ಮೇ 17 – ಕೋವಿಶೀಲ್ಡ್ ಲಸಿಕೆಯಿಂದಾಗಿ ರಕ್ತ ಸೋರಿಕೆ ಹಾಗೂ ರಕ್ತ ಹೆಪ್ಪುಗಟ್ಟುವಿಕೆಯ 26 ಪ್ರಕರಣಗಳು ವರದಿಯಾಗಿವೆ ಎಂದು ಕೊರೊನಾ ಅಡ್ಡ ಪರಿಣಾಮಗಳ ಕುರಿತು ಸರ್ಕಾರ ರೂಪಿಸಿದ್ದ ಸಮಿತಿ ವರದಿ ನೀಡಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಈ ಬಗ್ಗೆ ಹೇಳಿಕೆ ನೀಡಿದ್ದು, ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಯಿಂದ 23 ಸಾವಿರ ಅಡ್ಡ ಪರಿಣಾಮಗಳು ವರದಿಯಾಗಿವೆ. ಇವುಗಳಲ್ಲಿ 700 ಪ್ರಕರಣಗಳು ಗಂಭೀರವಾದವು ಎಂದು ತಿಳಿಸಿದೆ. ಅಡ್ಡ ಪರಿಣಾಮಗಳ ಕುರಿತು ನೇಮಿಸಲಾದ ಎ.ಇ.ಎಫ್.ಐ. ಸಮಿತಿ 498 ಗಂಭೀರ ಪ್ರಕರಣಗಳ ಅಧ್ಯಯನ ಪೂರ್ಣಗೊಳಿಸಿದೆ. ಈ ಪೈಕಿ 26 ಪ್ರಕರಣಗಳಲ್ಲಿ ರಕ್ತ ಸೋರಿಕೆ ಹಾಗೂ ಹೆಪ್ಪುಗಟ್ಟುವಿಕೆಯ ಕುರಿತದ್ದಾಗಿವೆ. ಒಟ್ಟಾರೆ ಇಂತಹ ಪ್ರಕರಣಗಳು 20 ಲಕ್ಷಕ್ಕೆ ಒಂದರಷ್ಟಿದೆ ಎಂದು ತಿಳಿಸಲಾಗಿದೆ.
ಕೋವ್ಯಾಕ್ಸಿನ್ ಲಸಿಕೆ ನೀಡಿದ ಸಂದರ್ಭಗಳಲ್ಲಿ ಇಂತಹ ರಕ್ತ ಹೆಪ್ಪುಗಟ್ಟುವಿಕೆ ಇಲ್ಲವೇ ಸೋರಿಕೆಯ ಯಾವುದೇ ಪ್ರಕರಣ ವರದಿಯಾಗಿಲ್ಲ ಎಂದು ಸಚಿವಾಲಯ ಹೇಳಿದೆ. ಥ್ರೊಂಬೋಂಬಿಲಿಕ್ ಎಂಬ ಅಡ್ಡ ಪರಿಣಾಮ ಎದುರಾದಾಗ ರಕ್ತ ನಾಳಗಳು ಹೆಪ್ಪುಗಟ್ಟುತ್ತವೆ. ಇದರಿಂದಾಗಿ ರಕ್ತ ಬೇರೆ ನಾಳಕ್ಕೆ ಹರಿದು ಹೋಗುತ್ತದೆ.
ಕೋವಿಶೀಲ್ಡ್ ಲಸಿಕೆಯಿಂದಾಗಿ ಇಂತಹ ಘಟನೆಗಳು ನಡೆದಿರುವುದಾಗಿ ಕೆಲ ದೇಶಗಳಲ್ಲಿ ಎಚ್ಚರಿಕೆ ನೀಡಲಾಗಿತ್ತು. ಜಾಗತಿಕ ಕಳವಳಗಳ ಹಿನ್ನೆಲೆಯಲ್ಲಿ ಭಾರತದಲ್ಲೂ ಅಡ್ಡ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲಾಗಿತ್ತು ಎಂದು ಸಚಿವಾಲಯ ಹೇಳಿದೆ.
ಏಪ್ರಿಲ್ 3ರವರೆಗೆ 7.5 ಕೋಟಿ ಲಸಿಕೆಗಳನ್ನು ನೀಡಲಾಗಿತ್ತು. ಇದರಲ್ಲಿ 6.8 ಕೋಟಿ ಕೋವಿಶೀಲ್ಡ್ ಹಾಗೂ 6.7 ಕೋಟಿ ಕೊವ್ಯಾಕ್ಸಿನ್ ಲಸಿಕೆಯಾಗಿತ್ತು ಎಂದು ಸಮಿತಿಯ ಸದಸ್ಯರು ಹೇಳಿದ್ದಾರೆ.
ಕೋವಿಶೀಲ್ಡ್ ಲಸಿಕೆಯಿಂದ ರಕ್ತ ಸೋರುವ ಹಾಗೂ ಹೆಪ್ಪುಗಟ್ಟುವ ಸಮಸ್ಯೆಯ ಅತ್ಯಂತ ಕಡಿಮೆ ಸಾಧ್ಯತೆ ಇದೆ. ಇದು ಬ್ರಿಟನ್‌ಗೆ ಹೋಲಿಸಿದರೆ ಮತ್ತೂ ಕಡಿಮೆ. ಬ್ರಿಟನ್‌ನಲ್ಲಿ ಹತ್ತು ಲಕ್ಷಕ್ಕೆ ನಾಲ್ಕು ಇಂತಹ ಪ್ರಕರಣಗಳು ಕಂಡು ಬಂದಿದ್ದವು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಥ್ರೊಂಬೋಂಬಿಲಿಕ್ ಘಟನೆಗಳ ಅಪಾಯ ಯುರೋಪಿನವರಿಗೆ ಹೋಲಿಸಿದರೆ ದಕ್ಷಿಣ ಏಷಿಯಾದವರಿಗೆ ಶೇ.70ರಷ್ಟು ಕಡಿಮೆ ಎಂದು ತಿಳಿಸಲಾಗಿದೆ.
ಲಸಿಕೆ ಪಡೆದ 20 ದಿನಗಳಲ್ಲಿ ಉಸಿರಾಟದ ಸಮಸ್ಯೆ, ಎದೆನೋವು, ಕೈ – ಕಾಲು ನೋವು, ಊತ, ಚರ್ಮದಲ್ಲಿ ಕೆಂಪು ಗುಳ್ಳೆಗಳು ಬರುವುದು, ಹೊಟ್ಟೆ ನೋವು ಇಲ್ಲವೇ ವಾಂತಿ, ತೀವ್ರ ತಲೆ ನೋವಿನ ರೀತಿಯ ಲಕ್ಷಣಗಳು ಥ್ರೋಂಬೋಂಬಿಲಿಕ್‌ನಲ್ಲಿ ಕಂಡು ಬರುತ್ತಿದೆ.
ಈ ಅಡ್ಡ ಪರಿಣಾಮದ ಹೊರತಾಗಿಯೂ ಕೊರೊನಾ ಸೋಂಕು ಹಾಗೂ ಸಾವುಗಳನ್ನು ತಡೆಯುವಲ್ಲಿ ಭಾರತ ಹಾಗೂ ವಿಶ್ವದಾದ್ಯಂತ ಕೋವಿಶೀಲ್ಡ್ ಪರಿಣಾಮಕಾರಿಯಾಗಿದೆ ಎಂದು ಸಚಿವಾಲಯ ಹೇಳಿದೆ.