ದಾವಣಗೆರೆ, ಜು.28- ನೂತನ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಅವರಿಗೆ ನಗರದ ಬಿಜೆಪಿ ಮುಖಂಡರು, ಕಾರ್ಯಕರ್ತರು ಸೇರಿದಂತೆ ಅಭಿಮಾನಿಗಳು, ಬೆಂಬಲಿಗರು, ಹಿತೈಷಿಗಳು ಸಂಭ್ರಮಾ ಚರಿಸುವ ಮುಖೇನ ಅದ್ದೂರಿಯಾಗಿ ಅಭಿನಂದಿಸಿ, ಶುಭ ಹಾರೈಸಿದರು.
ಜಿಲ್ಲಾ ಬಿಜೆಪಿ : ಶ್ರೀ ಜಯದೇವ ಮುರುಘಾ ರಾಜೇಂದ್ರ ವೃತ್ತದಲ್ಲಿ ಜಿಲ್ಲಾ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ ಮಾತನಾಡಿ, ಬಿಜೆಪಿಯ ಪಾಲಿಗೆ ಇಂದು ಶುಭ ದಿನ. ಕಳೆದ ಒಂದು ವಾರದಿಂದ ಪಕ್ಷದ ಕಾರ್ಯಕರ್ತರಲ್ಲಿದ್ದ ನಿರಾಸೆ ಇಂದು ದೂರವಾಗಿ ಅವರಲ್ಲಿ ಸಂಭ್ರಮದ ಮನೆ ಮಾಡಿದೆ. ಬಸವರಾಜ ಬೊಮ್ಮಾಯಿ ಅವರು ಉತ್ತಮ ಆಡಳಿತ ನೀಡುವುದರ ಮೂಲಕ ಮತ್ತೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನಗರ ಪಾಲಿಕೆ ಮಹಾಪೌರರಾದ ಎಸ್.ಟಿ.ವೀರೇಶ್ ಮಾತನಾಡಿ, ನಿರ್ಗಮಿತ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜನಪರ ಕಾರ್ಯಕ್ರಮಗಳನ್ನು ನೂತನ ಮುಖ್ಯ ಮಂತ್ರಿಗಳು ಮುಂದುವರೆಸಲಿದ್ದು, ಪಾಲಿಕೆಗಳ ಅಭಿವೃದ್ಧಿಗೆ ಅನೇಕ ಯೋಜನೆ ಜಾರಿ ಮಾಡು ತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, 1998ರಲ್ಲಿ ದಾವಣಗೆರೆ ನಗರಸಭೆಯಾಗಿದ್ದಾಗ ಬಿಜೆಪಿ-ಜೆಡಿಎಸ್ ಒಪ್ಪಂದ ಮಾಡಿಕೊಂಡು ಅಧಿಕಾರಕ್ಕೆ ಬರುವಲ್ಲಿ ಬಸವರಾಜ ಬೊಮ್ಮಾಯಿ ಬಹು ಮುಖ್ಯ ಪಾತ್ರ ವಹಿಸಿದ್ದರು. ಅಂದಿನಿಂದಲೂ ನನ್ನೊಂದಿಗೆ ಉತ್ತಮ ಒಡನಾಟವಿದೆ. ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸುತ್ತಾರೆ ಎಂದರು. ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿದರು.
ಪಾಲಿಕೆ ಸದಸ್ಯ ಸ್ವಾಗಿ ಶಾಂತಕುಮಾರ್, ಶಿವಪ್ರಕಾಶ್, ಮುಖಂಡರಾದ ದೇವರಮನಿ ಶಿವಕುಮಾರ್, ಬಿ.ಎಸ್. ಜಗದೀಶ್, ವೈ.ಮಲ್ಲೇಶ್, ಟಿಂಕರ್ ಮಂಜಣ್ಣ, ಹೆಚ್.ಎನ್.ಶಿವಕುಮಾರ್ ಸೇರಿದಂತೆ ಇತರರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು.
ತರಳಬಾಳು ಸೇವಾ ಸಮಿತಿ : ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ನೇಮಕಗೊಂಡ ಹಿನ್ನೆಲೆಯಲ್ಲಿ ತರಳಬಾಳು ಸೇವಾ ಸಮಿತಿ ಹಾಗೂ ಶಿವಸೈನ್ಯ ಯುವಕರ ಸಂಘದ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.
ಶ್ರೀ ಜಯದೇವ ಮುರುಘಾ ರಾಜೇಂದ್ರ ವೃತ್ತದಲ್ಲಿ ಸಂಜೆ ಶಿವಸೈನ್ಯ ಯುವಕರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮನಬೇತೂರು ನೇತೃತ್ವದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ಸಂಘಟನೆಗಳ ಕಾರ್ಯಕರ್ತರು, ಬಸವರಾಜ ಬೊಮ್ಮಾಯಿ ಪರ ಘೋಷಣೆ ಹಾಕಿ ಅಭಿನಂದಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎ.ಆರ್. ಉಜ್ಜಿನಪ್ಪ, ಕಸಾಪ ತಾಲ್ಲೂಕು ಅಧ್ಯಕ್ಷ ಬಿ. ವಾಮದೇವಪ್ಪ, ಸಂಘಟನೆಯ ಮುಖಂಡರಾದ ಶ್ರೀನಿವಾಸ್ ಮೆಳ್ಳೇಕಟ್ಟೆ, ಮಾಗನೂರು ಉಮೇಶ್ ಗೌಡ್ರು, ಲಿಂಗರಾಜು ಅಗಸನಕಟ್ಟೆ, ಪ್ರಭು ಕಾವಲಹಳ್ಳಿ, ಕುಮಾರ್ ಮೆಳ್ಳೇಕಟ್ಟೆ, ಕೊರಟಕೆರೆ ಶಿವಕುಮಾರ್, ರಾಮಗೊಂಡನಹಳ್ಳಿ ಜಯಣ್ಣ, ಶಂಕರ್ ಬನಶಂಕರಿ ಸೇರಿದಂತೆ ಇತರರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.