ಜಗಳೂರು, ಮೇ 10- ರಾಜ್ಯದಲ್ಲಿ ಕಟ್ಟು ನಿಟ್ಟಿನ 2 ವಾರಗಳ ಕಾಲ ಸರ್ಕಾರ ಲಾಕ್‍ಡೌನ್ ವಿಧಿಸಿದ ಹಿನ್ನೆಲೆ ಯಲ್ಲಿ ಜಗಳೂರು ಪಟ್ಟಣದಲ್ಲಿ 10 ಗಂಟೆಯ ಮೇಲೆ ಅನವಶ್ಯಕವಾಗಿ ಹೊರಗೆ ಬೈಕ್ ಸೇರಿದಂತೆ ಇತರೆ ವಾಹ ನಗಳಲ್ಲಿ ಬರುತ್ತಿರುವ ಜನರಿಗೆ ಸಿಪಿಐ ಮಂಜುನಾಥ್ ಪಂಡಿತ್ ನೇತೃತ್ವದಲ್ಲಿ ಪಿಎಸ್‍ಐ, ಪೊಲೀಸ್ ಸಿಬ್ಬಂದಿ ಎಚ್ಚರಿಕೆ ನೀಡಿದರಲ್ಲದೇ ಅನವಶ್ಯವಾಗಿ ತಿರುಗಾಡಿದ ಬೈಕ್ ಸವಾರರಿಗೆ ಬೆತ್ತದ ರುಚಿ ತೋರಿಸಿದರು.
ಪಟ್ಟಣದಲ್ಲಿ ಸಾರ್ವಜನಿಕ ಆಸ್ಪತ್ರೆ, ಪಟ್ಟಣದ ಖಾಸಗಿ ಆಸ್ಪತ್ರೆ ಮುಂಭಾಗ ಬೈಕ್, ವಾಹನಗಳೊಂದಿಗೆ ವೈದ್ಯರ ಹತ್ತಿರ ಮಹಿಳೆಯರು, ಪುರುಷರು ಹಾಗೂ ಸಣ್ಣ ಮಕ್ಕಳನ್ನು ತೋರಿಸಲು ಸಾಲು ಸಾಲಾಗಿ ನಿಂತು ತೋರಿಸುತ್ತಿದ್ದ ದೃಶ್ಯ ಕಂಡು ಬಂದಿತು. ಪೊಲೀಸರು ಅನವಶ್ಯಕವಾಗಿ ತಿರುಗಾಡುವವರ ವಾಹನ ಸೀಜ್ ಮಾಡುವ ಜೊತಗೆ ಆಸ್ಪತ್ರೆಗೆ ಹೋಗುವವರಿಗೆ ಎಚ್ಚರಿಕೆ ನೀಡಿ ಕಳಿಸುತ್ತಿದ್ದರು.
ಪಟ್ಟಣದ ಬೆಸ್ಕಾಂ ಇಲಾಖೆ, ಚಳ್ಳಕೆರೆ ರಸ್ತೆ, ಕೊಟ್ಟೂರು ಕಡೆ ಹೋಗುವ ರಸ್ತೆ, ಹಳೆಯ ಮಹಾತ್ಮ ಗಾಂಧಿ ಬಸ್ ನಿಲ್ದಾಣದ ಹತ್ತಿರ ಪೊಲೀಸರು ಅಡ್ಡಲಾಗಿ ಬ್ಯಾರಿಕೇಡ್ ಹಾಕಿ ತಪಾಸಣೆ ಮಾಡಿ, ಅನವಶ್ಯಕವಾಗಿ ತಿರುಗಾಡುವವರಿಗೆ ಬಿಸಿ ಮುಟ್ಟಿಸುತ್ತಿದ್ದರು. ಕಂದಾಯ ಇಲಾಖೆಯ ಕೆಲವು ನೌಕರರು ಬ್ಯಾಡ್ಜ್ ಇಲ್ಲದೇ ಹೋಗುತ್ತಿರುವಾಗ ಗೊತ್ತಾಗದೆ ಪೊಲೀಸರು ಲಾಟಿ ಏಟಿನ ಬಿಸಿ ತೋರಿಸಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಮೆಡಿಕಲ್ ಶಾಪ್‍ಗಳು, ಬ್ಯಾಂಕುಗಳು, ಸಾರ್ವಜನಿಕ ಕಚೇರಿಗಳು ಎಂದಿನಂತೆ ತೆರೆದಿದ್ದವು.
ಸ್ಯಾನಿಟೈಜರ್ ಮಾಡದೇ ಪ.ಪಂ ನಿರ್ಲಕ್ಷ್ಯ : ಪಟ್ಟಣದಲ್ಲಿ ಕೊರೊನಾ ಸಂಖ್ಯೆ ಜಾಸ್ತಿಯಾಗುತ್ತಿದೆ. ಅಲ್ಲದೇ ಸಾವಿನ ಸಂಖ್ಯೆ ಹೆಚ್ಚಾದರೂ ಪಟ್ಟಣ ಪಂಚಾಯಿತಿ ಹಾಗೂ ತಾಲ್ಲೂಕು ಆಡಳಿತ ಸ್ಯಾನಿಟೈಜರ್ ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ನಾಗರಿಕರು ದೂರಿದ್ದಾರೆ.
ಕಳೆದ ವರ್ಷ ಪಟ್ಟಣದಲ್ಲಿ ಕೊರೊನಾ ಉಲ್ಬಣಗೊಂಡಾಗ 2 ಬಾರಿ ಫೈರ್ ಇಂಜಿನ್ ಟ್ಯಾಂಕರ್ ಮೂಲಕ ವಿವಿಧ ಬಡಾವಣೆಗಳಲ್ಲಿ ಸ್ಯಾನಿಟೈಜರ್ ಸಿಂಪಡಿಸಿ, ರೋಗ ಹರಡದಂತೆ ತಡೆಗಟ್ಟಲಾಗಿತ್ತು. ಆದರೆ, 2021 ರಲ್ಲಿ ಪಟ್ಟಣದಲ್ಲಿ ಸಾವಿನ ಸಂಖ್ಯೆ, ಕೊರೊನಾ ಹೆಚ್ಚಾಗಿ ಹರಡುತ್ತಿದ್ದರೂ ಇದುವರೆಗೆ ಯಾವುದೇ ಮುಂಜಾಗೃತಾ ಕ್ರಮಕೈಗೊಳ್ಳುತ್ತಿಲ್ಲ ಎಂದು ಪಟ್ಟಣದ ನಾಗರಿಕರು ಅಳಲು ತೋಡಿಕೊಂಡಿದ್ದಾರೆ.
ಎಣ್ಣೆ ಖರೀದಿಗೆ ಮುಗಿ ಬಿದ್ದ ಜನರು : ಕಳೆದ ಬಾರಿ ಎಣ್ಣೆ ಸಿಗದೇ ಭಾರೀ ಪರದಾಡಿದ್ದರು. ಈಗ ಇಂದಿನಿಂದಲೇ 14 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಆಗುತ್ತಂತೆ ಎಣ್ಣೆ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಈಗಾಗಲೇ ಸ್ಟಾಕ್ ಮಾಡಿಕೊಂಡು ಬಿಡೋಣ ಎಂದು ಮದ್ಯ ಪ್ರಿಯರು ಬೆಳಿಗ್ಗೆಯಿಂದಲೇ ಮದ್ಯದಂಗಡಿಗಳ ಮುಂದೆ ನಿಂತು ಮದ್ಯ ಖರೀದಿಸುತ್ತಿದ್ದ ದೃಶ್ಯಗಳು ಪಟ್ಟಣದಲ್ಲಿ ಸಾಮಾನ್ಯವಾಗಿದ್ದವು.
ಬೆಳಿಗ್ಗೆ ಅಗತ್ಯ ವಸ್ತುಗಳಿಗೆ ಎಂದು ಕೆಲವರು ಪಟ್ಟಣಕ್ಕೆ ಬಂದರೆ, ಇನ್ನು ಕೆಲವರು ಎಣ್ಣೆ ಬಾಟಲಿಗಳನ್ನು ಖರೀದಿಸಿ ಕೊಂಡೊಯ್ಯುತ್ತಿದ್ದ ದೃಶ್ಯ ನಗರದ ವಿವಿಧೆಡೆ ಕಂಡುಬಂದವು. ಕಳೆದ ಬಾರಿ ಮದ್ಯವೂ ಸಹ ಬಂದ್ ಆಗಿದ್ದು, ಕೆಲವರಂತೂ ಪರದಾಡಿದ ಘಟನೆಗಳು ಮದ್ಯಪ್ರಿಯರ ಕಣ್ಮುಂದಿವೆ. ಈ ಬಾರಿ ಇಂತಹ ಅನಾಹುತಗಳು ಆಗಬಾರದೆಂದು ಮುಂಜಾಗ್ರತಾ ಕ್ರಮವಾಗಿ ಮದ್ಯ ಶೇಖರಿಸಿಟ್ಟು ಕೊಳ್ಳುತ್ತಿದ್ದಾರೆ.