ದಾವಣಗೆರೆ, ಜು.28- ಫುಟ್‍ಪಾತ್ ಆಕ್ರಮಿತ ಅಂಗಡಿಗಳನ್ನು ತೆರವುಗೊಳಿಸಲು ಮಹಾನಗರ ಪಾಲಿಕೆ ಸೂಚನೆ ಮೇರೆಗೆ ಜೆಸಿಬಿ ಯಂತ್ರಗಳು ಇಂದು ನಗರದಲ್ಲಿ ಘರ್ಜಿಸಿದವು.
ಫುಟ್‌ಪಾತ್ ಅಕ್ರಮಿಸಿಕೊಂಡು ವ್ಯಾಪಾರ – ವಹಿವಾಟು ನಡೆಯುತ್ತಿದ್ದ ಅಂಗಡಿಗಳನ್ನು ಬೆಳಂಬೆಳಗ್ಗೆ ನೆಲಸಮ ಗೊಳಿಸುವ ಮೂಲಕ ನಗರ ಪಾಲಿಕೆಯು ವ್ಯಾಪಾರಸ್ಥರಿಗೆ ಎಚ್ಚರಿಕೆಯೊಂದಿಗೆ ಬಿಸಿ ಮುಟ್ಟಿಸಿತು.
ಎಂಸಿಸಿ `ಬಿ’ ಬ್ಲಾಕ್‍ನಲ್ಲಿರುವ ಜೆಜೆಎಂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ನಿಲಯದ ಮುಂಭಾಗದಲ್ಲಿರುವ 6ನೇ ಮುಖ್ಯರಸ್ತೆಯ ರಾಜಋಷಿ ಭಗೀರಥ ರಸ್ತೆ ಮತ್ತು 7ನೇ ಮುಖ್ಯ ರಸ್ತೆಯಲ್ಲಿ ಫುಟ್‍ಪಾತ್ ಮೇಲೆ ನಿರ್ಮಾಣ ಮಾಡಿಕೊಂಡಿದ್ದ ಅಂಗಡಿಗಳ ಕಟ್ಟಡ ಸೇರಿದಂತೆ ಆಕ್ರಮಿತ ಜಾಗವನ್ನು ತೆರವುಗೊಳಿಸಲಾಯಿತು.
ಈ ವಿಚಾರವಾಗಿ ಕಳೆದ ಮೂರು ತಿಂಗಳ ಹಿಂದೆ ಮೇಯರ್, ಅಧಿಕಾರಿಗಳು ವೀಕ್ಷಣೆ ಮಾಡಿದಾಗ ನಾಗರಿಕರು ಫುಟ್‍ಪಾತ್ ಮೇಲೆ ತಿಂಡಿ ಅಂಗಡಿಗಳು ಇನ್ನಿತರೆ ವ್ಯಾಪಾರ ನಡೆಸುತ್ತಿರುವುದರಿಂದ ಈ ಭಾಗದಲ್ಲಿ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದ್ದು, ಅಂಗಡಿಗಳ ತೆರವಿಗೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡವು ಫುಟ್‍ಪಾತ್ ಮೇಲಿದ್ದ ಹಂಗ್ರಿ ಕ್ಯಾ, ರಾಕಿಂಗ್ ಎಕ್ಸ್‍ಪ್ರೆಸ್ ಸೇರಿದಂತೆ ಏಳು ಅಂಗಡಿಗಳು ಮತ್ತು ಮಳಿಗೆಗಳ ಮೇಲ್ಛಾವಣಿಗಳನ್ನು ತೆರವು ಮಾಡಿದೆ.
ಅಷ್ಟೇ ಅಲ್ಲದೇ, ಫುಟ್‍ಪಾತ್ ಜಾಗದಲ್ಲಿ ಒತ್ತುವರಿ ಮಾಡಿಕೊಂಡು ಸಿಮೆಂಟಿನಿಂದ ಮೆಟ್ಟಿಲು ಮಾಡಿಕೊಂಡಿದ್ದ ಸ್ಥಳವನ್ನೂ ತೆರವು ಗೊಳಿಸಲಾಯಿತು. ಎಂದು ಕಾರ್ಯಾಚರಣೆ ಯಲ್ಲಿದ್ದ ನಗರ ಪಾಲಿಕೆ ಇಂಜಿನಿಯರ್ ಮಧುಸೂದನ್ ತಿಳಿಸಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆಯೇ ಫುಟ್‍ಪಾತ್‌ನಲ್ಲಿದ್ದ ಮಳಿಗೆ ತೆರವುಗೊಳಿಸುವಂತೆ ವ್ಯಾಪಾರಿಗಳಿಗೆ ನೋಟೀಸ್ ನೀಡಲಾಗಿತ್ತು. ಅದಕ್ಕೆ ವ್ಯಾಪಾರಿಗಳು ಕಾಲಾವಕಾಶ ಕೇಳಿದ್ದರು. ನಂತರ ಕೋವಿಡ್ ಬಂದಿದ್ದರಿಂದ ತೆರವು ಕಾರ್ಯಾಚರಣೆಗಿಳಿದಿರಲಿಲ್ಲ. ಈಗ ಫುಟ್‍ಪಾತ್ ಮೇಲಿನ ಅಕ್ರಮ ಅಂಗಡಿಗಳನ್ನು ತೆರವು ಮಾಡಲಾಗಿದೆ ಎಂದು ಕಾರ್ಯಾಚರಣೆಯಲ್ಲಿದ್ದ ಪಾಲಿಕೆಯ ಇಇ ಹರ್ಷಿತಾ ಮಾಹಿತಿ ನೀಡಿದ್ದಾರೆ.
ಫುಟ್‍ಪಾತ್ ಆಕ್ರಮಿಸಿಕೊಂಡು ವ್ಯಾಪಾರ ಮಾಡುತ್ತಿದ್ದರಿಂದ ರಸ್ತೆ ಮಧ್ಯೆ ವಾಹನಗಳ ನಿಲುಗಡೆಯಾಗುತ್ತಿದ್ದುದನ್ನು ಇದರಿಂದ ರಸ್ತೆ ಸಂಚಾರಕ್ಕೆ ಅಡಚಣೆಯಾಗುತ್ತಿದ್ದಿದ್ದನ್ನು ಮನಗಂಡು ಈ ಕಾರ್ಯಾಚರಣೆಗೆ ಮುಂದಾಗಿದ್ದು, ಇದು ನಗರಾದ್ಯಂತ ಮತ್ತಷ್ಟು ಚುರುಕುಗೊಳ್ಳಲಿದೆ ಎಂದು ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಪಾಲಿಕೆ ಉಪ ಆಯುಕ್ತ ಡಿ.ಎಸ್. ಚಂದ್ರಶೇಖರ್, ಪಾಲಿಕೆ ಎಇಇ ಪ್ರದೀಪ್, ಎಆರ್‍ಓ ವಿನಯ್ ಕುಮಾರ್, ಬಿಲ್ ಕಲೆಕ್ಟರ್ ಮಂಜುನಾಥ ಸೇರಿದಂತೆ ಇತರರು ಇದ್ದರು.