ಹರಿಹರ, ಮಾ. 12 – ಇಲ್ಲಿನ ನಗರಸಭೆ ಆಯುಕ್ತರ ಒಂದು ಹುದ್ದೆಗಾಗಿ ಇಬ್ಬರು ಅಧಿಕಾರಿಗಳು ಜಟಾಪಟಿ ನಡೆಸಿ, ಕೊನೆಗೆ ಇಬ್ಬರೂ ತಾವೇ ಆಯುಕ್ತರು ಎಂದು ಹೇಳಿಕೊಂಡು ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಘಟನೆ ಇಂದು ನಡೆದಿದೆ.
ಬೆಳಿಗ್ಗೆ ನಗರಸಭೆ ಆವರಣದ ಪೌರಾಯುಕ್ತರ ಕೊಠಡಿಗೆ ಪೌರಾಯುಕ್ತೆ ಎಸ್. ಲಕ್ಷ್ಮಿ ಆಗಮಿಸಿ ಸರ್ಕಾರ ನನಗೆ ಆದೇಶ ನೀಡಿದೆ ಎಂದು ನಗರಸಭೆಯ ಆಡಳಿತ ನಿರ್ವಹಿಸಲು ಮುಂದಾದರು. ನಂತರದಲ್ಲಿ ಲಕ್ಷ್ಮಿ ಕೆಲಸ ಇದೆ ಎಂದು ಹೊರಗಡೆ ತೆರಳಿದರು. ಸ್ವಲ್ಪ ಸಮಯದ ನಂತರ ಜನಸ್ಪಂದನ ಸಭೆ ನಡೆಸಲು ಶಾಸಕ ಎಸ್. ರಾಮಪ್ಪ ಆಗಮಿಸಿದರು, ಅದೇ ವೇಳೆಗೆ ಪೌರಾಯುಕ್ತ ಉದಯಕುಮಾರ್ ತಳವಾರ ಸಹ ಆಗಮಿಸಿ, ಪೌರಾಯುಕ್ತ ಕಚೇರಿಗೆ ಹೋದರು.
ನಂತರ ಪೌರಾಯುಕ್ತೆ ಎಸ್. ಲಕ್ಷ್ಮಿಯವರು ಶಾಸಕರ ಬಳಿ ಮಾತನಾಡಿ, ನನಗೆ ಸರ್ಕಾರ ಆದೇಶ ನೀಡಿದೆ. ನಮಗೆ ಅಧಿಕಾರ ವಹಿಸಿಕೊಂಡು ಕೆಲಸ ಮಾಡುವುದಕ್ಕೆ ಅವಕಾಶ ಕಲ್ಪಿಸುವಂತೆ ಮನವಿಯನ್ನು ಮಾಡಿಕೊಂಡರು. ಆದರೆ ಇದಕ್ಕೆ ಪೌರಾಯುಕ್ತ ಉದಯಕುಮಾರ್ ತಳವಾರ ಆಕ್ಷೇಪಣೆ ಎತ್ತಿದರು. ತಾವು ಈಗ ಅಧಿಕಾರ ಬಿಟ್ಟು ಕೊಡುವುದಿಲ್ಲ. ಐದು ದಿನಗಳ ನಂತರ ಸೋಮವಾರ ಸಂಜೆ ಅಧಿಕಾರ ಹಸ್ತಾಂತರ ಮಾಡುವುದಾಗಿ ಬಿಗಿ ಪಟ್ಟು ಹಿಡಿದರು.
ಈ ಹಿಂದೆ ವರ್ಗಾವಣೆಯಾಗಿದ್ದ ಎಸ್. ಲಕ್ಷ್ಮಿ ತಮ್ಮ ವರ್ಗಾವಣೆ ಆದೇಶ ಪ್ರಶ್ನಿಸಿ, ಕರ್ನಾಟಕ ಆಡಳಿತಾತ್ಮಕ ಟ್ರಿಬ್ಯೂನಲ್ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಟ್ರಿಬ್ಯೂನಲ್, ಮಾ.10 ರಂದು ಆದೇಶ ಹೊರಡಿಸಿ ಲಕ್ಷ್ಮಿ ಅವರ ವರ್ಗಾವಣೆಯನ್ನು ತಳ್ಳಿ ಹಾಕಿತ್ತು. ಆದೇಶದ ಪ್ರತಿಯೊಂದಿಗೆ ಆಗಮಿಸಿದ ಲಕ್ಷ್ಮಿ, ಹಾಲಿ ಆಯುಕ್ತರಾಗಿರುವ ಬಿ. ಉದಯಕುಮಾರ್ ಅಧಿಕಾರ ಬಿಟ್ಟುಕೊಡಬೇಕೆಂದು ಕೇಳಿದರು. ಆದೇಶದ ಪ್ರತಿಯಲ್ಲಿ §ಆದೇಶ ಹೊರಡಿಸಿದ ಐದು ದಿನಗಳ ಒಳಗಾಗಿ ಅಧಿಕಾರ ಬಿಟ್ಟು ಕೊಡಬೇಕು¬ ಎಂದು ಹೇಳಿರುವುದನ್ನು ಪ್ರಸ್ತಾಪಿಸಿದ ಉದಯ ಕುಮಾರ್, ಬರುವ ಸೋಮವಾರದಂದು ಅಧಿಕಾರ ಬಿಟ್ಟುಕೊಡುವುದಾಗಿ ಹೇಳಿದರು. ಇದಕ್ಕೆ ಒಪ್ಪದ ಲಕ್ಷ್ಮಿ, ಐದು ದಿನಗಳ ಗಡುವಿನಲ್ಲಿ ಯಾವಾಗ ಬಂದರೂ ಅಧಿಕಾರ ಬಿಟ್ಟುಕೊಡಬೇಕು. ಹೀಗಾಗಿ ಈಗಲೇ ಅಧಿಕಾರ ಕೊಡುವಂತೆ ಕೇಳಿದರು.
ಟ್ರಿಬ್ಯೂನಲ್ ಆದೇಶದಂತೆ ನಾವು ಬಂದಾಗ ಅಧಿಕಾರ ವಹಿಸಿಕೊಡಬೇಕು. ಐದು ದಿನಗಳ ನಂತರವೇ ಅಧಿಕಾರ ಕೊಡುತ್ತೇನೆ ಎನ್ನುವುದು ಉದ್ಧಟತನವಾಗುತ್ತದೆ.
– ಎಸ್. ಲಕ್ಷ್ಮಿ
ನ್ಯಾಯಾಲಯದ ಆದೇಶದಲ್ಲಿ ತಕ್ಷಣವೇ ಅಧಿಕಾರ ಬಿಟ್ಟುಕೊಡಬೇಕು ಎಂದಿದ್ದರೆ ನಾನು ಹಾಗೆಯೇ ಮಾಡಬೇಕಿತ್ತು. ನ್ಯಾಯಾಲಯವೇ ನನಗೆ ಐದು ದಿನಗಳ ಕಾಲಾವಕಾಶ ಕೊಟ್ಟಿದೆ.
– ಬಿ. ಉದಯ ಕುಮಾರ್
ಜಟಾಪಟಿಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ್ದ ಶಾಸಕ ಎಸ್. ರಾಮಪ್ಪ ಮತ್ತು ನಗರಸಭೆಯ ಹಿರಿಯ ಸದಸ್ಯ ಶಂಕರ್ ಖಟಾವ್ಕರ್ ಅವರು, ಕುರ್ಚಿ ಜಟಾಪಟಿಯನ್ನು ಬಗೆಹರಿಸುವ ಪ್ರಯತ್ನ ನಡೆಸಿದರು. ಆದರೆ ಯಾವುದೇ ಇತ್ಯರ್ಥಕ್ಕೆ ಬರಲು ಸಾಧ್ಯವಾಗಲಿಲ್ಲ. ಇಂದು ನಡೆಯುವ ಜನಸ್ಪಂದನ ಸಭೆಗೆ ನೀವು ಇಬ್ಬರು ಅಧಿಕಾರಿಗಳು ಬರುವುದು ಬೇಡ. ಇನ್ನು ಉಳಿದ ಅಧಿಕಾರಿಗಳನ್ನು ಇಟ್ಟುಕೊಂಡು ನಾವು ಸಭೆಯನ್ನು ಮಾಡುತ್ತೇವೆ ಎಂದು ಪೌರಾಯುಕ್ತರ ಕೊಠಡಿಯಿಂದ ಹೊರಗೆ ಬಂದು ಜನಸ್ಪಂದನ ಸಭೆ ಮಾಡುವುದಕ್ಕೆ ಮುಂದಾದರು.
ಲಕ್ಷ್ಮಿ ಹಾಗೂ ಉದಯ ಕುಮಾರ್ ಇಬ್ಬರೂ ಟ್ರಿಬ್ಯೂನಲ್ ಆದೇಶದಂತೆ ನಾವೇ ಹಾಲಿ ಆಯುಕ್ತರು ಎಂದು ಹೇಳಿಕೊಂಡರು. ನಂತರ ಉಭಯರು ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಜನರು ಸಲ್ಲಿಸಿದ ಮನವಿಗೆ ಇಬ್ಬರೂ ಉತ್ತರಿಸಿದರು. ಸದ್ಯಕ್ಕೀಗ ಹರಿಹರ ನಗರಸಭೆಯದು ಆಯುಕ್ತರ ಹುದ್ದೆಯೊಂದು, ಅಧಿಕಾರಿಗಳು ಇಬ್ಬರು ಎಂಬಂತಾಗಿದೆ.