ಸಹಕಾರ ಬ್ಯಾಂಕುಗಳಿಂದ ಆಕ್ಸಿಜನ್ ಘಟಕ

ದಾವಣಗೆರೆ,ಮೇ 16- ಕರುಣೆ ಇಲ್ಲದ ಮಹಾಮಾರಿ ಕೊರೊನಾದ ಕ್ರೂರತೆಗೆ ಹೆಚ್ಚುತ್ತಿರುವ ಸೋಂಕು ನಿಯಂತ್ರಣಕ್ಕೆ ಆಗಿರುವ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಆಕ್ಸಿಜನ್ ಉತ್ಪಾದಕ ಘಟಕ ಸ್ಥಾಪಿಸಲು ಜಿಲ್ಲಾ ಸಹಕಾರ ಬ್ಯಾಂಕುಗಳ ಒಕ್ಕೂಟ ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಸಹಕಾರಿ ಬ್ಯಾಂಕುಗಳ ಆಡಳಿತ ಮಂಡಳಿ ಮುಖ್ಯಸ್ಥರ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಯಿತು ಎಂದು ಒಕ್ಕೂಟದ ಕಾರ್ಯದರ್ಶಿಯೂ ಆಗಿರುವ ದಾವಣಗೆರೆ – ಹರಿಹರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎನ್.ಎ. ಮುರುಗೇಶ್ ತಿಳಿಸಿದ್ದಾರೆ.

ಜಿಲ್ಲಾ ಸಹಕಾರ ಬ್ಯಾಂಕುಗಳ ಒಕ್ಕೂಟದ ಸದಸ್ಯ ಬ್ಯಾಂಕುಗಳು ನೀಡುವ ಧನ ಸಹಾಯದಿಂದ ಸುಮಾರು 30 ಲಕ್ಷಕ್ಕೂ ಹೆಚ್ಚು ರೂ.ಗಳ ವೆಚ್ಚದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಆಕ್ಸಿಜನ್ ಉತ್ಪಾದಿಸುವ ಯಂತ್ರದ ಖರೀದಿಗೆ ಸರ್ಕಾರದಿಂದ ಸಬ್ಸಿಡಿ ಕೊಡಿಸುವ ಭರವಸೆಯನ್ನು ಸಭೆಯಲ್ಲಿ ಉಪಸ್ಥಿತರಿದ್ದ ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ ಅವರು ನೀಡಿದ್ದಾರೆ. ಈ ಕಾರ್ಯಕ್ಕೆ ಒಕ್ಕೂಟದ ಅಧ್ಯಕ್ಷರೂ ಆದ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ಬೆಂಬಲ ನೀಡಿದ್ದಾರೆ ಎಂದು ಮುರುಗೇಶ್ ವಿವರಿಸಿದ್ದಾರೆ.

ಕೊರೊನಾದ 1ನೇ ಅಲೆ ಸಂದರ್ಭದಲ್ಲಿ ಜಿಲ್ಲಾ ಸಹಕಾರ ಬ್ಯಾಂಕುಗಳ ಒಕ್ಕೂಟದಿಂದ 7.5 ಲಕ್ಷ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗಿತ್ತು. ಅಲ್ಲದೇ, ಆಶಾ ಕಾರ್ಯಕರ್ತೆಯರಿಗೆ 3 ಲಕ್ಷ ರೂ.ಗಳ ಪರಿಹಾರ ಕೊಡಲಾಗಿತ್ತು ಎಂದು ಮುರುಗೇಶ್ ಅವರು ಒಕ್ಕೂಟದ ಸೇವಾ ಕಾರ್ಯದ ಮಾಹಿತಿ ನೀಡಿದ್ದಾರೆ.

ಒಕ್ಕೂಟದ ಪ್ರಮುಖರುಗಳಾದ ಬಿ.ಸಿ. ಉಮಾಪತಿ, ರಮಣಲಾಲ್ ಪಿ. ಸಂಘವಿ, ಆರ್. ಜಿ.ಶ್ರೀನಿವಾಸಮೂರ್ತಿ, ಕರಾವಳಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಸಿಎ ಉಮೇಶ್ ಶೆಟ್ಟಿ, ವೈದ್ಯ ಡಾ. ಶಿವಕುಮಾರ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

error: Content is protected !!