ಜಿಲ್ಲೆಯಲ್ಲಿ ಸಾವಿರ ದಾಟಿದ ಸೋಂಕು

ದಾವಣಗೆರೆ, ಮೇ 16- ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ಕಂಡು ಬರುವ ಕೊರೊನಾ ಸೋಂಕಿತರ ಸಂಖ್ಯೆ ಸಹಸ್ರದ ಗಡಿ ದಾಟಿದೆ.

ಭಾನುವಾರ 1155 ಜನರಲ್ಲಿ ಸೋಂಕು ದೃಢಪಟ್ಟ ಬಗ್ಗೆ ವರದಿಯಾಗಿದ್ದು, ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3656 ಕ್ಕೆ ಏರಿಕೆಯಾಗಿದೆ. 312 ಜನ ಇಲ್ಲಿವರೆಗೆ ಮೃತಪಟ್ಟಿದ್ದಾರೆ.

ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿನೋಬನಗರದ 61 ವರ್ಷದ ಮಹಿಳೆ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. 

ದಾವಣಗೆರೆ ತಾಲ್ಲೂಕಿನಲ್ಲಿ 631, ಹರಿಹರ 150, ಜಗಳೂರು 45, ಚನ್ನಗಿರಿ 173, ಹೊನ್ನಾಳಿ 113 ಹಾಗೂ ಹೊರ ಜಿಲ್ಲೆಯ 43 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 

ಕಳೆದ ಮೇ 13ನೇ ತಾರೀಖು ಅತಿ ಹೆಚ್ಚು ಅಂದರೆ 753 ಜನರಲ್ಲಿ ಸೋಂಕು ಕಾಣಿಸಿಕೊಂಡ ಬಗ್ಗೆ ವರದಿಯಾಗಿತ್ತು. ನಿನ್ನೆಯವರೆಗೂ ಕಳೆದೊಂದು ವಾರದಲ್ಲಿ ಸರಾಸರಿ 370 ಜನರು ಸೋಂಕಿತರು ಕಂಡು ಬರುತ್ತಿದ್ದಾರೆ. 

ಕಳೆದ ವಾರ ಚೇತರಿಕೆ ಪ್ರಮಾಣವೂ ಸರಾಸರಿ 400ರಷ್ಟಿತ್ತು. ಮೇ 13 ರಂದು 753 ಜನ ಚೇತರಿಸಿಕೊಂಡಿದ್ದರು. ಆದರೆ ಕಳೆದ ಹಲವಾರು ದಿನಗಳಿಂದ ಸಾವಿನ ಸಂಖ್ಯೆ ಇಳಿಮುಖವಾಗಿದೆ. 

ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸಾಕಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದರೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ಬೆಳಿಗ್ಗೆ 6 ರಿಂದ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅನುಕೂಲ ಮಾಡಿಕೊಟ್ಟಿರುವುದರಿಂದ ಜನ ಕೊರೊನಾ ಇರುವುದನ್ನೇ ಮರೆತು ಅವೈಜ್ಞಾನಿಕವಾಗಿ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಳ್ಳದೇ ಖರೀದಿಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ.

ಸಂಚಾರ ನಿಯಂತ್ರಣಕ್ಕೆ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿದ್ದರೂ, ಸಂಜೆಯಾಗುತ್ತಲೇ ವಾಹನಗಳ ಸಂಚಾರ ಸಂಖ್ಯೆ ಹೆಚ್ಚಾಗುತ್ತಿದೆ. ಸಂಜೆ ಪೊಲೀಸರು ವಾಹನ ತಪಾಸಣೆ ಮಾಡುವುದಿಲ್ಲವೆಂಬ ವಿಶ್ವಾಸದಿಂದ ಜನತೆ ಅನಗತ್ಯವಾಗಿ ಓಡಾಡುವುದು ಕಂಡು ಬರುತ್ತಿದೆ.

ಇನ್ನು ಹಲವು ಕಡೆ ಕೋವಿಡ್ ಪಾಸಿಟಿವ್ ಬಂದು ಹೋಮ್ ಐಸೋಲೇಷನ್ ಇದ್ದವರ ಮನೆಗೆ ಸ್ಟಿಕ್ಕರ್ ಹಚ್ಚದ ಕಾರಣ ಅಕ್ಕ-ಪಕ್ಕದ ಮನೆಯಲ್ಲಿ ಸೋಂಕಿತ ವ್ಯಕ್ತಿ ಇದ್ದರೂ ಗೊತ್ತಾಗದ ಪರಿಸ್ಥಿತಿ ನಿರ್ಮಾಣವಾಗಿದೆ. 

error: Content is protected !!