ಗೌರವಯುತ ಬೀಳ್ಕೊಡುವ ವ್ಯವಸ್ಥೆ ಮಾಡಬೇಕಿತ್ತು

ಗೌರವಯುತ ಬೀಳ್ಕೊಡುವ ವ್ಯವಸ್ಥೆ ಮಾಡಬೇಕಿತ್ತು - Janathavaniಚಿತ್ರದುರ್ಗ, ಜು.27- ಮುಖ್ಯಮಂತ್ರಿ ಪದವಿ ಎಂಬುದು ಅದು ಪಕ್ಷಾತೀತವಾಗಿ ಜನರು ಗೌರವಿ ಸುವ ನಾಡಿನ ದೊರೆ ಸ್ಥಾನ ಆಗಿದೆ. ಅಂತಹ ಸ್ಥಾನ ದಲ್ಲಿರುವ ಯಾವುದೇ ವ್ಯಕ್ತಿಯನ್ನು ಗೌರವಯುತ ವಾಗಿ ಬೀಳ್ಕೊಡುಗೆ ನೀಡುವ ವ್ಯವಸ್ಥೆ ಮಾಡಬೇ ಕಾದ್ದು ಆ ವ್ಯಕ್ತಿ ಪ್ರತಿನಿಧಿಸುವ ಪಕ್ಷದ ಹೊಣೆಗಾರಿಕೆ ಆಗಿರುತ್ತದೆ. ಆದರೆ, ಬಿಜೆಪಿ ವರಿಷ್ಠರು ಬಿ.ಎಸ್‌.ಯಡಿಯೂರಪ್ಪ ವಿಷಯದಲ್ಲಿ ಕೆಟ್ಟದಾಗಿ ನಡೆದುಕೊಂಡಿದ್ದು ಮಾತ್ರ ರಾಜ್ಯದ ದುರಂತ ಎಂದು ಮಾಜಿ ಸಚಿವರೂ ಆದ ಕಾಂಗ್ರೆಸ್ ಧುರೀಣ ಹೆಚ್.ಆಂಜನೇಯ ವ್ಯಾಕ್ಯುಲತೆ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾಯಕತ್ವ ಬದಲಾವಣೆ ಎಂಬುದು ಒಂದು ಪಕ್ಷದ ಆಂತರಿಕ ವಿಷಯ. ಅಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹಿಸಿ, ವರಿಷ್ಠರು ನಿರ್ಧಾರ ಕೈಗೊಳ್ಳುತ್ತಾರೆ. ಆದರೆ, ಯಡಿಯೂರಪ್ಪ ವಿಷಯ ದಲ್ಲಿ ಮಾತ್ರ ಎಲ್ಲವೂ ತಿರುಗು – ಮುರುಗು ಆಗಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬರುವವರೆಗೂ ಯಡಿಯೂ ರಪ್ಪ, ಬಳಿಕ ಬೇರೆಯವರು ಎಂಬುದು ಬಿಜೆಪಿ ವರಿಷ್ಠರ ಸಿದ್ಧಾಂತವಾಗಿದೆ ಎಂದು ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಬಹುಮತ ಪಡೆಯದಿದ್ದರೂ ಹೆಚ್ಚು ಸ್ಥಾನ ಗಳಿಸಿದ್ದು, ಯಡಿಯೂರಪ್ಪ ನಾಯಕತ್ವದ ಕಾರಣಕ್ಕೆ. ಬಳಿಕ ಕಾಂಗ್ರೆಸ್‌ – ಜೆಡಿಎಸ್‌ 17 ಶಾಸಕರು ಕೂಡ ಯಡಿ ಯೂರಪ್ಪ ನಾಯಕತ್ವ ನಂಬಿಯೇ ಹೋಗಿ ವಾಮ ಮಾರ್ಗದ ಸರ್ಕಾರ ರಚನೆಗೆ ಕಾರಣರಾದರು. ವಾಮಮಾರ್ಗದ ಸರ್ಕಾರ ರಚನೆಯಾಗಲು ಮಾತ್ರ ಯಡಿಯೂರಪ್ಪ ಅವರನ್ನು ಬಳಸಿಕೊಂಡು, ಬಳಿಕ ವಯಸ್ಸಿನ ನೆಪವೊಡ್ಡಿ ಯಡಿಯೂರಪ್ಪ ಅವರನ್ನು ಅಮಾನವೀಯವಾಗಿ ಕೆಳಗಿಳಿಸಿದ್ದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲಿ ಪಕ್ಷವೇ ಇಲ್ಲದಿದ್ದ ವೇಳೆ ರಾಜ್ಯಾದ್ಯಂತ ಸುತ್ತಾಟ ನಡೆಸಿ, ಪಕ್ಷ ಬಲವರ್ಧನೆ ಮಾಡಿ ಅಧಿಕಾರಕ್ಕೆ ತಂದ ನಾಯಕನ ಮನವೊಲಿಸಿ ಅಧಿಕಾರದಿಂದ ಸಂತೋಷವಾಗಿ ಇಳಿಯುವ ವಾತಾವರಣ ಮಾಡಬೇಕಿತ್ತು. ಆದರೆ, ಹಿಟ್ಲರ್‌ ರೀತಿ ಬೆದರಿಕೆವೊಡ್ಡಿ ಯಡಿಯೂರಪ್ಪ ಅವರ ಕಣ್ಣಲ್ಲಿ ನೀರು ತರಿಸಿ ಅಧಿಕಾರದಿಂದ ಕೆಳೆಗಿಳಿಯುವಂತೆ ಮಾಡಿದ್ದು ನಾಡಿನ ದುರ್ದೈವ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಎರಡು ವರ್ಷ ಆಡಳಿತ ನಡೆಸಿದ ವೇಳೆ ಕೇಂದ್ರದಿಂದ ರಾಜ್ಯಕ್ಕೆ  ನ್ಯಾಯಯುತವಾಗಿ ಬರಬೇಕಾಗಿದ್ದ ತೆರಿಗೆ ಪಾಲು, ವಿವಿಧ ಯೋಜನೆಗಳಿಗೆ ಅನುಮತಿ ಸೇರಿದಂತೆ ಅನೇಕ ವಿಷಯಗಳಲ್ಲಿ ಅಡ್ಡಗಾಲು ಹಾಕಿ ಆರಂಭದಿಂದಲೂ ಸಮಸ್ಯೆ ನೀಡಲಾಯಿತು. ಇದರಿಂದ ರಾಜ್ಯದ ಆಡಳಿತ ಸಂಪೂರ್ಣ ಹದಗೆಡಲು ಬಿಜೆಪಿ ವರಿಷ್ಠರು ಕಾರಣರಾಗಿದ್ದಾರೆ ಎಂದು ಅವರು ದೂರಿದ್ದಾರೆ.

ಹಿರಿಯ ವ್ಯಕ್ತಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆಯೂ ರಾಜ್ಯದಲ್ಲಿ ಕೆಲ ಶಾಸಕರು ಬಹಿರಂಗವಾಗಿ ಭಿನ್ನಮತ ನಡೆಸುವಂತೆ ವರಿಷ್ಠರು ಪ್ರೋತ್ಸಾಹಿಸಿದ್ದು, ಹೆಜ್ಜೆ – ಹೆಜ್ಜೆಗೂ ಸ್ವತಂತ್ರವಾಗಿ ಆಡಳಿತ ನಡೆಸಲು ಸಹಕಾರ ನೀಡದೇ ಅಡ್ಡಿಪಡಿಸಿದ್ದು, ರಾಜ್ಯದ ಅಭಿವೃದ್ಧಿಗೆ ತೀವ್ರ ಹಿನ್ನಡೆಯಾಗಿದೆ. ಯಡಿಯೂರಪ್ಪ ಅವರ ವಿರುದ್ಧ ಕೆಲವು ಶಾಸಕರು ತಿರುಗಿಬಿದ್ದಿದ್ದರು ಎಂದು ಅವರು ಹೇಳಿದ್ದಾರೆ.

ಭ್ರಷ್ಟಾಚಾರ, ಕಿತ್ತಾಟ, ತಾರಕಕ್ಕೇರಿದ ಭಿನ್ನಮತ, ಅಭಿವೃದ್ಧಿಯಲ್ಲಿ ಹಿನ್ನಡೆ, ಆಡಳಿತದಲ್ಲಿ ವೈಫಲ್ಯ, ಬೆಲೆ ಏರಿಕೆ ತೀವ್ರತೆಯಿಂದ ಜನರ ಆಕ್ರೋಶಕ್ಕೆ ತುತ್ತಾಗಿ ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ರಾಜ್ಯ ಸರ್ಕಾರ ಶೀಘ್ರದಲ್ಲಿಯೇ ಪಥನವಾಗಿ, ಮಧ್ಯಂತರ ಚುನಾವಣೆ ಎದುರುಗೊಳ್ಳುವುದರಲ್ಲಿ ಸಂದೇಹವಿಲ್ಲ ಎಂದಿದ್ದಾರೆ.

ಕೇಂದ್ರ ಸರ್ಕಾರ ರಾಜ್ಯಕ್ಕೆ ತೋರಿದ ಅಸಹಕಾರ, ಅನುದಾನ ಬಿಡುಗಡೆ ಮಾಡದಿರುವುದು, ಕೋವಿಡ್‌ ನಿರ್ವಹಣೆಗೆ ಸಹಕಾರ ನೀಡದಿರುವುದರ ಕುರಿತು ರಾಜ್ಯದ ಜನ ರೊಚ್ಚಿಗೆದ್ದಿದ್ದಾರೆ. ಇದನ್ನು ಯಡಿಯೂರಪ್ಪ ಅವರ ತಲೆ ಮೇಲೆ ಹೋರಿಸಿ, ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಗಿದೆ. ಹೊಸದಾಗಿ ಮುಖ್ಯಮಂತ್ರಿಯಾಗುವ ವ್ಯಕ್ತಿ, ಆತನ ಸಂಪುಟದಿಂದ ರಾಜ್ಯದ ಅಭಿವೃದ್ಧಿ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಇನ್ನೇನಿದ್ದರೂ ರಾಜ್ಯದಲ್ಲಿ ಸರ್ಕಾರದ ವಿರುದ್ಧ ಜನ ನಿರಂತರ ಹೋರಾಟ ಮಾಡುವ ವಾತಾವರಣ ನಿರ್ಮಾಣವಾಗಲಿದೆ.

ಗೆದ್ದಲು ನಿರ್ಮಿಸಿದ ಹುತ್ತದಲ್ಲಿ ಹಾವು ಸೇರಿಕೊಳ್ಳುವುದು

ಹಿರಿಯರನ್ನು ಅಗೌರವಿಸುವುದು ಬಿಜೆಪಿಯ ಹುಟ್ಟು ಗುಣವಾಗಿದೆ. ಪಕ್ಷವನ್ನು ಗೆದ್ದಲು ರೀತಿ ಕಟ್ಟುವ ವ್ಯಕ್ತಿಯೇ ಬೇರೆ, ಅಧಿಕಾರವೆಂಬ ಹುತ್ತದಲ್ಲಿ ಹಾವಿನಂತೆ ಬಂದು ಸೇರುವ ವ್ಯಕ್ತಿಗಳೇ ಬೇರೆ ಎಂಬುದು ಬಿಜೆಪಿ ಸಿದ್ಧಾಂತವಾಗಿದೆ. ದೇಶದಾದ್ಯಂತ ಸಂಚರಿಸಿ ಪಕ್ಷ ಅಧಿಕಾರಕ್ಕೆ ಬರಲು ಕಾರಣಕರ್ತರಾದ ಲಾಲ್‌ಕೃಷ್ಣ ಅಡ್ವಾಣಿ ಕೊನೆ ಗಳಿಗೆಯಲ್ಲಿ ಸದಾ ಕಣ್ಣೀರು ಸುರಿಸುವಂತೆ ಮಾಡಲಾಯಿತು.

ರಾಜ್ಯದಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ವಿದಾಯ ಹೇಳುವಾಗಲೂ ಕಣ್ಣೀರು ತರಿಸುವ ಕೆಲಸವನ್ನು ಆ ಪಕ್ಷದ ವರಿಷ್ಠರು ಮಾಡಿ, ತಮ್ಮ ಸರ್ವಾಧಿಕಾರದ ಗುಣ ಪ್ರದರ್ಶಿಸಿದ್ದಾರೆ. ಕೇರಳದಲ್ಲಿ 89 ವರ್ಷದ ವ್ಯಕ್ತಿಗೆ ನಾಯಕತ್ವ ನೀಡುವ ಬಿಜೆಪಿ, ಕರ್ನಾಟಕ ರಾಜ್ಯದಲ್ಲಿ ಪಕ್ಷ ಕಟ್ಟಿ, ಅಧಿಕಾರಕ್ಕೆ ಬರಲು ಕಾರಣಕರ್ತರಾದ ಯಡಿಯೂರಪ್ಪ ಅವರನ್ನು ವಯಸ್ಸಿನ ಕಾರಣಕ್ಕೆ ಇಳಿಸಲಾಗುತ್ತಿದೆ ಎಂಬುದು ದ್ವಂದ್ವ ನೀತಿಯಾಗಿದೆ. ನಾಡಿನ ದೊರೆ ಸ್ಥಾನದಲ್ಲಿ ನಿಂತು ಯಡಿಯೂರಪ್ಪ ಕಣ್ಣೀರು ಸುರಿಸಿದ ಫಲವನ್ನು ಬರುವ ಚುನಾವಣೆಯಲ್ಲಿ ಅ ಪಕ್ಷ ಉಣ್ಣಲಿದೆ ಎಂದು ಆಂಜನೇಯ ಅವರು ಭವಿಷ್ಯ ನುಡಿದ್ದಾರೆ.

error: Content is protected !!