ದಾವಣಗೆರೆ,ಮೇ 10- ಅಗತ್ಯ ವಸ್ತುಗಳನ್ನು ಮಾರಾಟ ಮಾಡಲು ಮತ್ತು ಆ ವಸ್ತುಗಳನ್ನು ಖರೀದಿ ಸುವುದಕ್ಕೆ ಮಾರುಕಟ್ಟೆಗೆ ಹೋಗಿ ಬರಲು ವಾಹನ ಬಳಕೆಗೆ ಅವಕಾಶ ನೀಡುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಜಿಲ್ಲಾಡಳಿತ ನಿಗದಿಪಡಿಸಿದ ಅವಧಿಯಲ್ಲಿ ಮಾರುಕಟ್ಟೆಗೆ ಮತ್ತು ಬ್ಯಾಂಕಿಗೆ ಹೋಗಿ ಬರಲು ಎಲ್ಲರಿಗೂ ಓಡಾಡಲು ಆಗುವುದಿಲ್ಲ. ಕಾರಣ, ವಾಹನ ಬಳಕೆಗೆ ಅವಕಾಶ ನೀಡಬೇಕು ಎಂದು ಸಂಸ್ಥೆಯ ಅಧ್ಯಕ್ಷರೂ ಆಗಿರುವ ಮಾಜಿ ಶಾಸಕ ಯಜಮಾನ್ ಮೋತಿ ವೀರಣ್ಣ ಕೇಳಿಕೊಂಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಬಹುತೇಕರು ಮಂಡಿ ನೋವು, ಕಾಲು ನೋವಿನಿಂದ ಬಳಲುತ್ತಿದ್ದಾರೆ. ಇನ್ನೂ ಕೆಲವರಿಗೆ ವಯೋಸಹಜತೆಯಿಂದ ಓಡಾಡಲು ಸಾಧ್ಯವಾಗುವುದಿಲ್ಲ. ಮತ್ತೆ ಕೆಲವರು ವಾಹನಗಳಲ್ಲೇ ಸಂಚರಿಸುತ್ತಿರುವುದರಿಂದ ಅವರಿಗೆ ರಸ್ತೆಯಲ್ಲಿ ಓಡಾಡಿ ಅಭ್ಯಾಸವೇ ಇಲ್ಲ ಎಂದು ವೀರಣ್ಣ ಅವರು ವಾಹನ ಬಳಕೆ ಬಗ್ಗೆ ಪ್ರತಿಪಾದಿಸಿದ್ದಾರೆ.
ಒಟ್ಟಿನಲ್ಲಿ ಬಹುತೇಕ ಸಂಖ್ಯೆಯ ಜನರಿಗೆ ವಾಹ ನದ ಅವಶ್ಯಕತೆ ಇದ್ದು, ಈ ಹಿನ್ನೆಲೆಯಲ್ಲಿ ಮಾರ್ಗ ಸೂಚಿಯಲ್ಲಿ ಮಾರ್ಪಾಡು ಮಾಡಿಕೊಂಡು ಜನರಿಗೆ ವಾಹನ ಬಳಕೆಗೆ ಅವಕಾಶ ನೀಡಬೇಕು ಎಂದು ಸಂಸ್ಥೆಯ ಉಪಾಧ್ಯಕ್ಷ ಮಾಗಾನಹಳ್ಳಿ ನಿಜಾನಂದಪ್ಪ, ಕಾರ್ಯದರ್ಶಿ ಅಜ್ಜಂಪುರ ಶೆಟ್ರು ಶಂಭುಲಿಂಗಪ್ಪ ಅವರುಗಳು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ನಾಗರಿಕರಲ್ಲಿ ಮನವಿ : ದಿನ ದಿನಕ್ಕೂ ಹೆಚ್ಚುತ್ತಿ ರುವ ಕೊರೊನಾ ವೈರಸ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರುಗಳ ನೇತೃತ್ವದ ಜಿಲ್ಲಾಡಳಿತದ ಶ್ರಮ ಶ್ಲ್ಯಾಘನೀಯ ಎಂದು ಛೇಂಬರ್ ಆಫ್ ಕಾಮರ್ಸ್ ಮೆಚ್ಚುಗೆ ವ್ಯಕ್ತಪಡಿಸಿದೆ.
ಜಿಲ್ಲಾಡಳಿತದ ಕ್ರಮಕ್ಕೆ ಸಹಕಾರ ನೀಡುವ ನಿಟ್ಟಿ ನಲ್ಲಿ ಸಾರ್ವಜನಿಕರು ನಿಗದಿತ ಅವಧಿಯಲ್ಲಿ ಅಗತ್ಯ ವಸ್ತುಗಳನ್ನು ಪಡೆದುಕೊಂಡು, ಉಳಿದ ಸಮಯದಲ್ಲಿ ಮನೆಯಲ್ಲೇ ಇದ್ದು, ಮುಂಜಾಗ್ರತಾ ಕ್ರಮಗಳನ್ನು ಅನು ಸರಿಸಬೇಕು. ಈ ಮೂಲಕ ಕೊರೊನಾ ನಿಯಂತ್ರಣಕ್ಕೆ ಪ್ರತಿಯೊಬ್ಬರ ಸಹಕಾರ – ಶ್ರಮ ಅತ್ಯಗತ್ಯ ಎಂದು ಛೇಂಬರ್ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.