ಬೆಂಗಳೂರು, ಮಾ. 10- ದಾವಣಗೆರೆ ದೃಶ್ಯಕಲಾ ಮಹಾವಿದ್ಯಾ ಲಯದ ಆವ ರಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ವಸತಿ ಗೃಹಗಳನ್ನು ನಿರ್ಮಿಸಲು 4.31 ಎಕರೆ ಪ್ರದೇಶವನ್ನು ಕಾಯ್ದಿರಿಸಿ ಅನುಮೋದನೆ ನೀಡಲಾಗಿದೆ. ಆದರೆ ಮಾನ್ಯ ಉಚ್ಛ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಪ್ರಕರಣವನ್ನು ಪುನರ್ ಪರಿಶೀಲಿಸಿ ನಿಯಮಾನು ಸಾರ ಅಗತ್ಯ ಕ್ರಮ ಕೈಗೊಳ್ಳಲಾಗು ವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ವಿಧಾನ ಪರಿಷತ್ ಸದಸ್ಯ ಮೋಹನ್ ಕುಮಾರ್ ಕೊಂಡಜ್ಜಿ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ವಿಧಾನಪರಿಷತ್ನಲ್ಲಿ ಉತ್ತರಿ ಸಿದ ಅಶೋಕ್, 2020ರ ಜುಲೈ 27ರಂದು ಜಿಲ್ಲಾಧಿಕಾರಿಗಳ ಪತ್ರ ದಂತೆ ದಾವಣಗೆರೆ ವಿಶ್ವವಿದ್ಯಾನಿಲ ಯಕ್ಕೆ ಸೇರಿದ ದೃಶ್ಯಕಲಾ ಮಹಾವಿದ್ಯಾಲಯದ ಆವರಣದ ಶಾಮನೂರು ಗ್ರಾಮದ ಸರ್ವೆ ನಂಬರ್ 97ರ 4.31 ಎಕರೆ ಜಮೀನನ್ನು ಜಿಲ್ಲಾ ಮಟ್ಟದ ಅಧಿಕಾರಿಗಳ ವಸತಿ ಗೃಹ ನಿರ್ಮಾಣಕ್ಕಾಗಿ ಕಾಯ್ದಿರಿಸಿ ಅನುಮೋದನೆ ನೀಡಲಾಗಿತ್ತು ಎಂದು ತಿಳಿಸಿದರು.
ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ವಿಧಾನಪರಿಷತ್ ಸದಸ್ಯ ಮೋಹನ್ ಕುಮಾರ್ ಕೊಂಡಜ್ಜಿ, ಶಿಕ್ಷಣ ಸಂಸ್ಥೆಗೆ ಸೇರಿದ ಆಸ್ತಿಯನ್ನು ವಸತಿ ಉದ್ದೇಶಕ್ಕೆ ನೀಡುವ ಸರ್ಕಾರದ ಕ್ರಮವನ್ನು ಖಂಡಿಸುತ್ತಾ, ಈಗಾಗಲೇ ದಾವಣಗೆರೆ ಜಿಲ್ಲೆಯ ಸಂಸದ ಜಿ.ಎಂ. ಸಿದ್ದೇಶ್ವರ್, ಹಿರಿಯ ಶಾಸಕರುಗಳಾದ ಡಾ|| ಶಾಮನೂರು ಶಿವಶಂಕರಪ್ಪ, ಎಸ್.ಎ. ರವೀಂದ್ರನಾಥ್ ಸೇರಿದಂತೆ ಎಲ್ಲಾ ಶಾಸಕರು ವಿರೋಧ ವ್ಯಕ್ತಪಡಿಸಿ ಪತ್ರ ನೀಡಿದ್ದರೂ ಸಹ ಸರ್ಕಾರ ಆಸ್ತಿಯನ್ನು ಏಕೆ ಪರಭಾರೆ ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಮೋಹನ್ ಕುಮಾರ್ ಕೊಂಡಜ್ಜಿ ಅವರ ಆಕ್ಷೇಪದ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ವಸತಿ ಗೃಹ ನಿರ್ಮಾಣಕ್ಕಾಗಿ ಅನುಮೋದನೆ ನೀಡಿರುವುದನ್ನು ಪುನರ್ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿ ಚರ್ಚೆಗೆ ಇತಿಶ್ರೀ ಹಾಡಿದರು.
ಈ ಬಗ್ಗೆ `ಜನತಾವಾಣಿ’ಯೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಮೋಹನ್ ಕುಮಾರ್ ಕೊಂಡಜ್ಜಿ, ವಿಧಾನ ಪರಿಷತ್ ನಲ್ಲಿ ಚುಕ್ಕೆ ಗುರುತಿನ ಪ್ರಶ್ನೆಯಡಿ ಫೈನ್ ಆರ್ಟ್ಸ್ ಕಾಲೇಜು ಆವರಣದಲ್ಲಿ ಅಧಿಕಾರಿಗಳ ವಸತಿ ನಿರ್ಮಾಣದ ಬಗ್ಗೆ ಪ್ರಶ್ನಿಸಿದ್ದೇನೆ.
ದೃಶ್ಯಕಲಾ ಮಹಾವಿದ್ಯಾಲಯ ರಾಜ್ಯದಲ್ಲಿಯೇ ನಂಬರ್ ಒನ್ ಸ್ಥಾನದಲ್ಲಿದ್ದು, ಈಗಾಗಲೇ ಅಲ್ಲಿ ಹಾಸ್ಟೆಲ್ಗಳನ್ನೂ ನಿರ್ಮಿಸಲಾಗಿದೆ. ಅಲ್ಲದೆ ಡಿಸಿ ಹಾಗೂ ಎಸ್ಪಿ ವಸತಿಗಳನ್ನು ಈಗಾಗಲೇ ಬೇರೆ ಕಡೆ ನಿರ್ಮಿಸಲಾಗಿರುವ ಬಗ್ಗೆಯೂ ಕಂದಾಯ ಸಚಿವರ ಗಮನಕ್ಕೆ ತಂದಿದ್ದೇನೆ.
ನಮಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯದ ಕಾರಣ ಅನುಮೋದನೆ ನೀಡಿದ್ದೆವು. ಆದರೆ ಇದೀಗ ಪುನರ್ ಪರಿಶೀಲನೆ ಮಾಡುವುದಾಗಿ ಕಂದಾಯ ಸಚಿವರು ಹೇಳಿದ್ದಾಗಿ ತಿಳಿಸಿದರು.