ದಾವಣಗೆರೆ, ಮೇ 9- ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಆಗಿರುವ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟ ಪರಿಸ್ಥಿತಿಯಲ್ಲಿರುವ ಸೋಂಕಿತರು ಮತ್ತು ಬಡವರಿಗೆ ಉಚಿತವಾಗಿ ಅನ್ನ ದಾಸೋಹ ಮಾಡುತ್ತಿರುವ ತರಳಬಾಳು ಸೇವಾ ಸಮಿತಿ, ಶಿವಸೈನ್ಯ ಯುವಕರ ಸಂಘ ಹಾಗೂ ದಾನಿಗಳ ಸೇವೆ ಶ್ಲ್ಯಾಘನೀಯ ಎಂದು ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ ಅವರು ಹೇಳಿದರು.
ಇಲ್ಲಿನ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಮುದಾಯ ಭವನಕ್ಕೆ ಇಂದು ಸಂಜೆ ಭೇಟಿ ನೀಡಿದ ಅವರು, ದಾಸೋಹದ ಸಿದ್ಧತೆಯನ್ನು ವೀಕ್ಷಿಸಿ, ದಾನಿಗಳ ಮತ್ತು ಸ್ವಯಂ ಸೇವಕರ ಸೇವೆಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರಲ್ಲದೇ, ಈ ಸತ್ಕಾರ್ಯಕ್ಕೆ ತಾವೂ ಕೂಡಾ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು. ದಾನಿಗಳು ಮುಂದೆ ಬಂದು ಈ ಕಾರ್ಯದಲ್ಲಿ ಭಾಗಿಯಾಗುವಂತೆ ಸಂಸದರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಹಾಪೌರ ಎಸ್.ಟಿ.ವೀರೇಶ್, ಆಯುಕ್ತ ವಿಶ್ವನಾಥ್ ಮುದಜ್ಜಿ, ಶಶಿಧರ್ ಹೆಮ್ಮನಬೇತೂರು, ಮಾಗನೂರು ಉಮೇಶ್ ಗೌಡ್ರು, ಲಿಂಗರಾಜ್ ಅಗಸನಕಟ್ಟೆ, ಶ್ರೀನಿವಾಸ್ ಮೆಳ್ಳೇಕಟ್ಟೆ, ಕೊರಟಿಕೆರೆ ಶಿವಕುಮಾರ್, ಪ್ರಭು ಕಾವಲಹಳ್ಳಿ, ಹಾಲೇಶ್, ಸಿ.ಹೆಚ್. ದೇವರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.