ದಾವಣಗೆರೆ, ಮೇ 9- ಕೊರೊನಾ ಮಹಾಮಾರಿ ದಿನೇ ದಿನೇ ಹೆಚ್ಚಾಗುತ್ತಾ ಜನರನ್ನು ಕಾಡುವ ಜೊತೆಗೆ ಜೀವವನ್ನೇ ಬಲಿ ಪಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಜೀವ ಉಳಿದರೆ ಸಾಕು ಎಂದು ಜನ ಲಸಿಕೆ ಪಡೆಯಲು ಮುಗಿ ಬೀಳುತ್ತಿದ್ದಾರೆ. ಆದರೆ ಲಸಿಕೆ ಕೊರತೆ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಜನರು ಜಿಲ್ಲಾಸ್ಪತ್ರೆ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಲಸಿಕಾ ಕೇಂದ್ರಗಳ ಬಳಿ ಲಸಿಕೆ ಪಡೆಯಲು ಸರತಿ ಸಾಲಿನಲ್ಲಿ ನಿಂತು ಹರ ಸಾಹಸಪಡುತ್ತಿದ್ದಾರೆ. ಈ ಹಿಂದೆ ಕೊರೊನಾ ಸೋಂಕು ಎರಡನೇ ಅಲೆಯ ವೇಳೆ ಲಸಿಕೆಯತ್ತ ಮುಖ ಮಾಡದ ಜನರು, ಇದೀಗ ಹೆಚ್ಚು ಸೋಂಕು ಹರಡುವಿಕೆ, ಬಲಿ ಪಡೆಯುವ ಆರ್ಭ ಟಕ್ಕೆ ಭಯಭೀತರಾಗಿ ಎರಡೂ ಹಂತದ ಲಸಿಕೆ ಪಡೆಯಲು ಮನಸ್ಸು ಮಾಡಿದ್ದಾರೆ.
ಆದರೆ ಎಲ್ಲರಿಗೂ ಲಸಿಕೆ ನೀಡಲು ಲಸಿಕೆ ಕೊರತೆ ಕಾಡುತ್ತಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಮೊದಲ ಲಸಿಕೆ ಪಡೆದವರಿಗೆ 2ನೇ ಹಂತದ ಲಸಿಕೆ ನೀಡಲಾಗುತ್ತಿದ್ದು, ಕೇವಲ ಕೋವಿಶೀಲ್ಡ್ ಲಸಿಕೆ ಹಾಕಲಾಗುತ್ತಿದೆ. ಮೊದಲ ಲಸಿಕೆಯನ್ನೇ ಪಡೆಯದವರು ಹಾಗೂ ಕೊವ್ಯಾಕ್ಸಿನ್ ಮೊದಲ ಲಸಿಕೆ ಪಡೆದವರು 2ನೇ ಲಸಿಕೆಗಾಗಿ ಎದುರು ನೋಡುತ್ತಿದ್ದಾರೆ. ಕೊವ್ಯಾಕ್ಸಿನ್ ಮೊದಲ ಲಸಿಕೆ ಪಡೆದವರು 2ನೇ ಲಸಿಕೆಯಾಗಿ ಕೊವ್ಯಾಕ್ಸಿನ್ ಪಡೆಯಬೇಕಿದೆಯೇ ಹೊರತು ಕೋವಿಶೀಲ್ಡ್ ಹಾಕಿಸಿಕೊಳ್ಳಲು ಬರುವುದಿಲ್ಲ.
200 ಕೋವ್ಯಾಕ್ಸಿನ್ ಲಸಿಕೆ: 28 ದಿನಗಳ ನಂತರ ಹಾಗೂ ಮೊದಲ ಲಸಿಕೆ ಪಡೆದು ನಿಗದಿತ ದಿನಗಳಿಗಿಂತ ಮುನ್ನವೇ ಜನ ಲಸಿಕೆಗೆ ಮುಂದಾಗುತ್ತಿದ್ದಾರೆ. ಆದರೆ ಮೊದಲ ಲಸಿಕೆ ಪಡೆದು 45 ದಿನಗಳಾದವರಿಗೆ 2ನೇ ಹಂತದ ಲಸಿಕೆ ಹಾಕಲು ಆದೇಶಿಸಲಾಗಿದೆ. ಸದ್ಯಕ್ಕೆ ಸೋಮವಾರ 2ನೇ ಹಂತದ ಲಸಿಕೆ ಪಡೆಯಬೇಕಾದವರಿಗೆ ಸುಮಾರು 200 ಕೋವ್ಯಾಕ್ಸಿನ್ ಲಸಿಕೆ ಜಿಲ್ಲಾಸ್ಪತ್ರೆಯಲ್ಲಿ ಹಾಕಲಾಗುವುದು. ತಲಾ 100 ಲಸಿಕೆ ನಗರ ಪ್ರದೇಶದ 7 ಕೇಂದ್ರಗಳಲ್ಲಿ 2ನೇ ಹಂತದ ಲಸಿಕೆ ಪಡೆಯಬೇಕಾದವರಿಗೆ ಕೋವಿಶೀಲ್ಡ್ ಲಸಿಕೆ ಹಾಕಲಾಗುತ್ತದೆ. ಕೋವ್ಯಾಕ್ಸಿನ್ ಲಸಿಕೆಗೆ ಕಾಯಬೇಕಾಗಿದೆ ಎಂದು ಡಾ. ಮೀನಾಕ್ಷಿ ತಿಳಿಸಿದ್ದಾರೆ.
ಕಳೆದ ವಾರ 35 ಸಾವಿರ ಮಂದಿ 2ನೇ ಹಂತದ ಲಸಿಕೆ ಪಡೆಯಬೇಕಾದವರಿದ್ದರು. ಈ ವಾರ 10 ಸಾವಿರ ಮಂದಿ ಇದ್ದು, 10 ಸಾವಿರ ಕೋವಿಶೀಲ್ಡ್ ಲಸಿಕೆ ಸಿಕ್ಕಿದೆ. ಮುಂದಿನ ವಾರ ಜನಸಂಖ್ಯೆಗೆ ಅನುಗುಣವಾಗಿ ಲಸಿಕೆ ಸಿಗಲಿದೆ. ಮೊದಲ ಲಸಿಕೆ ಪಡೆಯಬೇಕಾದವರು 4 ಲಕ್ಷದ 34 ಸಾವಿರ ಮಂದಿ 45 ವರ್ಷ ಮೇಲ್ಪಟ್ಟವರಿದ್ದರು. 1 ಲಕ್ಷದ 80 ಸಾವಿರ ಮಂದಿಗೆ ಮೊದಲ ಲಸಿಕೆ ಹಾಕಲಾಗಿದ್ದು, ಇನ್ನೂ 2.50 ಲಕ್ಷ ಜನ 45 ವರ್ಷ ಮೇಲ್ಪಟ್ಟವರಿದ್ದಾರೆಂದು ಮಾಹಿತಿ ನೀಡಿದರು.