ಲಸಿಕೆಯಲ್ಲಿ ಶೇ.1ಕ್ಕೂ ಕಡಿಮೆ ಗುರಿ ಸಾಧನೆ

ಯುದ್ಧೋಪಾದಿಯಲ್ಲಿ ಲಸಿಕಾ ಅಭಿಯಾನ ಕೈಗೊಳ್ಳಲು ನಿರ್ಧಾರ : ಡಿಸಿ

ದಾವಣಗೆರೆ, ಮಾ. 10 – 45 ವರ್ಷ ಮೇಲ್ಪಟ್ಟ ಸಹ ಅಸ್ವಸ್ಥತೆ ಉಳ್ಳವರು ಹಾಗೂ 60 ವರ್ಷ ಮೀರಿದವರಿಗೆ ಮಾರ್ಚ್ 1ರಿಂದ ಲಸಿಕೆ ನೀಡಲಾಗುತ್ತಿದ್ದರೂ ಸಹ, ಜಿಲ್ಲೆಯಲ್ಲಿ ಇದುವರೆಗೂ ಶೇ.1ರಷ್ಟೂ ಜನ ಲಸಿಕೆ ಪಡೆದಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ಎರಡೂ ಗುಂಪಿಗೆ ಸೇರಿದ 1.60 ಲಕ್ಷ ಜನರಿದ್ದಾರೆ. ಆದರೆ, ಇದುವರೆಗೂ 1,315 ಜನ ಮಾತ್ರ ಲಸಿಕೆ ಪಡೆದಿದ್ದಾರೆ ಎಂದು ಹೇಳಿದ್ದಾರೆ.

 ರಾಜ್ಯ ಅಪರ ಮುಖ್ಯ ಕಾರ್ಯದರ್ಶಿ ಆರೋಗ್ಯ ಇಲಾಖೆ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಬುಧವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಲಸಿಕೆ ಪ್ರಗತಿಯ ಕುರಿತು ವಿವರ ಪಡೆದಿದ್ದಾರೆ. ಯುದ್ಧೋಪಾದಿಯಲ್ಲಿ ಲಸಿಕಾ ಅಭಿಯಾನ ನಡೆಸಲು ಸೂಚನೆ ನೀಡಿದ್ದಾರೆ ಎಂದು ಬೀಳಗಿ ಹೇಳಿದ್ದಾರೆ.

ಕಳೆದ ವರ್ಷ ಮಾರ್ಚ್‌ ನಂತರ ಕೊರೊನಾ ತಡೆಯಲು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಲಾಗಿತ್ತು. ಈಗ ಲಸಿಕೆಗೂ ಸಹ ಅದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಲಸಿಕೆ ಕುರಿತು ಅಭಿಯಾನ ನಡೆಸಲಾಗುವುದು. ವಿಶೇಷವಾಗಿ ದಾವಣಗೆರೆಯ ಹಳೆ ಭಾಗದ ಕಡೆ ಗಮನ ಹರಿಸಲಾಗುವುದು ಎಂದವರು ಹೇಳಿದ್ದಾರೆ.

ಮುಂದಿನ ಹದಿನೈದು ದಿನಗಳಲ್ಲಿ ಸರ್ಕಾರ ನೀಡಿರುವ ಗುರಿಯನ್ನೂ ಮೀರಿ ಲಸಿಕೆಯಲ್ಲಿ ಸಾಧನೆ ಮಾಡುವ ವಿಶ್ವಾಸವಿದೆ ಎಂದವರು ಹೇಳಿದ್ದಾರೆ.

ಹಿರಿಯ ನಾಗರಿಕರು ಹಾಗೂ 45 ವರ್ಷ ಮೇಲ್ಪಟ್ಟ ಸಹ ಅಸ್ವಸ್ಥತೆಯಿಂದ ಬಳಲುತ್ತಿರುವವರು ಲಸಿಕೆ ಪಡೆಯಲು ಆಧಾರ್ ಕಾರ್ಡ್‌ನೊಂದಿಗೆ ನೇರವಾಗಿ ಹತ್ತಿರದ ಸರ್ಕಾರಿ ಕೊರೊನಾ ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆಯಬಹುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.

ಆನ್‌ಲೈನ್ ಮೂಲಕ ನೋಂದಣಿ ಮಾಡಿಸಲು ಹಿರಿಯ ನಾಗರಿಕರಿಗೆ ತೊಡಕುಗಳು ಎದುರಾಗುತ್ತಿರುವ ಕುರಿತ ಪ್ರಶ್ನೆಗಳಿಗೆ ಉತ್ತರಿಸಿರುವ ಜಿಲ್ಲಾಧಿಕಾರಿ, ನಿಗದಿತ ದಿನಗಳಂದು ಸರ್ಕಾರಿ ಲಸಿಕಾ ಕೇಂದ್ರಗಳಿಗೆ ಆಧಾರ್ ಕಾರ್ಡ್ ಜೊತೆ ತೆರಳಿ ಲಸಿಕೆ ಪಡೆಯಬಹುದು ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಸಿಇಒ ಡಾ. ವಿಜಯ ಮಹಾಂತೇಶ ದಾನಮ್ಮನವರ್, ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ  ಬಂದವರು, ಜ್ವರ ಮತ್ತು ಉಸಿರಾಟದ ಸಮಸ್ಯೆಯಿಂದ  ಬಳಲುತ್ತಿರುವವರ ಪರೀಕ್ಷೆಗಾಗಿ ಆರೋಗ್ಯ ಕೇಂದ್ರಗಳಿಗೆ ಸೂಚನೆ ನೀಡಲಾಗಿದೆ. ಜನನಿಬಿಡ ಪ್ರದೇಶಗಳು ಹಾಗೂ ಜನರ ಸಂಪರ್ಕಕ್ಕೆ ಬರುವವರನ್ನು ಹೆಚ್ಚಾಗಿ ಗುರುತಿಸಿ ಪರೀಕ್ಷೆ ನಡೆಸಲಾಗುವುದು ಎಂದವರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗರಾಜ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ರಾಘವನ್, ಆರ್.ಸಿ.ಹೆಚ್. ಅಧಿಕಾರಿ ಡಾ.ಮೀನಾಕ್ಷಿ, ನಗರಾಭಿವೃದ್ಧಿ ಕೋಶದ ಅಧಿಕಾರಿ ನಜ್ಮಾ, ಜಿಲ್ಲಾ ಸರ್ಜನ್ ಡಾ. ಜಯಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!