ಶ್ರೀಮತಿ ಆಶಾ ಕಲ್ಲನಗೌಡರ್ ಅವರ `ಅಂತರಂಗದ ಧ್ವನಿ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ಪತ್ನಿಗೆ ಪೆನ್ನು ನೀಡಿದ ಜಿಲ್ಲಾಧಿಕಾರಿ ಬೀಳಗಿ
ದಾವಣಗೆರೆ, ಮಾ. 9- ಮಹಿಳೆಯರ ಅಂತರಂಗದಲ್ಲಿನ ಮಿಡಿತಗಳು ಬರಹಗಳ ಮೂಲಕ ಹೊರಹೊಮ್ಮಬೇಕಿದೆ. ತಮಗೆ ತಿಳಿದಿದ್ದನ್ನು ಬರೆಯುವ ಮೂಲಕ ಮಹಿಳೆ ಯರು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿ ಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಕರೆ ನೀಡಿದರು.
ನಗರದ ಜಾಗೃತ ಮಹಿಳಾ ಸಂಘದಲ್ಲಿ ಮಂಗಳವಾರ ಶ್ರೀಮತಿ ಆಶಾ ಕಲ್ಲನಗೌಡರ್ ಅವರ `ಅಂತರಂಗದ ಧ್ವನಿ’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಾಹಿತ್ಯ ಸಮಾಜಕ್ಕೆ ಹಿಡಿದ ಕನ್ನಡಿ. ಎಲ್ಲರೂ ಒಂದೊಂದು ರೀತಿಯ ಲೋಕಾ ನು ಭವದ ದೃಷ್ಟಿಕೋನದಲ್ಲಿ ಸಮಾಜವನ್ನು ನೋಡುತ್ತೇವೆ. ಆದರೆ ಸಮಾಜ ಮಾತ್ರ ಒಂದೇ ರೀತಿ ಇರುತ್ತದೆ. ಆಶಾ ಕಲ್ಲನಗೌಡರ್ ಅವರು ಸಹ ತ ಮ್ಮದೇ ಆದ ದೃಷ್ಟಿಕೋನದಲ್ಲಿ ಸಮಾಜವನ್ನು ನೋಡಲು ಪ್ರಯತ್ನ ಪಟ್ಟಿದ್ದಾರೆ. ಅವರ ಬರವಣಿಗೆ ಗಳಲ್ಲಿ ಸಾಮಾಜಿಕ ಕಳಕಳಿ ಇದೆ ಎಂದರು.
ವಿರಳವಾದ ಧನಾತ್ಮಕ ವಾತಾವರಣ ವನ್ನೇ ಪೂರಕವಾಗಿ ಬಳಸಿಕೊಂಡು ಪ್ರತಿ ವರ್ಷವೂ ಒಂದೊಂದು ಪುಸ್ತಕಗಳನ್ನು ಬರೆಯುವಂತಾಗಲಿ ಎಂದು ಆಶಿಸಿದರು.
ಹೆಣ್ಣು ಜನಿಸುತ್ತಲೇ ಮಗಳಾಗಿ, ಅಕ್ಕ-ತಂಗಿಯಾಗಿ, ಪತ್ನಿಯಾಗಿ, ತಾಯಿಯಾಗಿ ನಂತರ ಅಜ್ಜಿಯಾಗಿ ವಿವಿಧ ಪಾತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಾಳೆ. ಆದರೆ ಆ ಹೆಣ್ಣು ತಾನಾಗುವುದು ಯಾವಾಗ? ಎಂದು ಪ್ರಶ್ನಿ ಸಿದ ಜಿಲ್ಲಾಧಿಕಾರಿ, ಹೆಣ್ಣಿನ ಅಂತರಂಗ ದೊ ಳಗೆ ಪ್ರತಿ ದಿನ ಅನೇಕ ವಿಚಾರಗಳು ಬರ ಹದ ಮೂಲಕ ಹೊರ ಬರಬೇಕು ಎಂದರು.
`ಅಂತರಂಗದ ಧ್ವನಿ’ ಪುಸ್ತಕದ ಕುರಿತು ಮಾತನಾಡಿದ ಶಿಕ್ಷಕರೂ, ಸಾಹಿತಿಗಳೂ ಆದ ನಾಗರಾಜ ಸಿರಿಗೆರೆ, ಕೃತಿಯಲ್ಲಿರುವ ಎಲ್ಲಾ ಲೇಖನಗಳೂ ಸಾಮಾಜಿಕ ಕಳಕಳಿಯನ್ನು ಒಳಗೊಂಡಿವೆ. ಲೇಖಕಿ ತನ್ನ ಒಡಲಾಳದ ಧ್ವನಿಯಿಂದ ಪ್ರತಿಯೊಬ್ಬರನ್ನೂ ಎಚ್ಚರಿಸುವ ಕೆಲಸ ಮಾಡಿದ್ದಾರೆ. ಪ್ರತಿಯೊಬ್ಬರೂ ಇದೇ ರೀತಿ ತಮ್ಮನ್ನು ಅವಲೋಕಿಸಿಕೊಂಡಾಗ ಸ್ವಸ್ಥ ಸಮಾಜ ನಿರ್ಮಿಸಲು ಸಾಧ್ಯವಿದೆ ಎಂದರು.
ತನಗನ್ನಿಸಿದ್ದನ್ನು ಬರೆಯುವಂತೆ ನಿನ್ನೆ ಪತ್ನಿಗೆ ಪೆನ್ನು ನೀಡಿದ್ದಾಗಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಮಹಿಳೆ ಮನಸ್ಸಿನಲ್ಲಿರುವ ವಿಚಾರಗಳನ್ನು ಬರೆಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಪತ್ನಿಗೆ ಪೆನ್ನು ನೀಡಿದ್ದೇನೆ. ಮುಂಜಾನೆ ನನ್ನ ಪತ್ನಿ ಪೆನ್ನು ಹಾಗೂ ಡೈರಿಯನ್ನು ಕೈಯ್ಯಲ್ಲಿಡಿದು ಕೊಂಡು ನೋಡುವುದನ್ನು ಕಂಡಾಗ, ಬರೆಯಲು ಮುಹೂರ್ತ ಕೂಡಿಬರಬಹುದು ಎಂದು ಮನಸ್ಸಿನಲ್ಲಿಯೇ ಅಂದು ಕೊಂಡೆ ಎಂದು ಜಿಲ್ಲಾಧಿಕಾರಿ ಸ್ವಾರಸ್ಯಕರವಾಗಿ ಹೇಳಿದರು. ತಮಗನ್ನಿಸಿದ್ದನ್ನು ಬರೆಯಲು ರೂಢಿ ಮಾಡಿಕೊಳ್ಳುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುವಂತೆ ಮಹಿಳೆಯರಿಗೆ ಸೂಚ್ಯವಾಗಿ ಹೇಳಿದರು.
ಮಹಿಳೆಯರು ಕೇವಲ ಅಡುಗೆ ಮನೆಯ ಸಾಹಿತ್ಯಕ್ಕೆ ಸೀಮಿತ ಎಂಬ ಚೌಕಟ್ಟನ್ನು ಮೀರಿ, ಸಾಮಾಜಿಕ ಕಳಕಳಿಯ ಪುಸ್ತಕಗಳನ್ನು ಪ್ರಕಟಿಸುವುದು ಶ್ಲ್ಯಾಘ ನೀಯ. ಎಲ್ಲರನ್ನೂ ಜಾಗೃತಗೊಳಿಸುವ ಈ ಕೃತಿ ಸಮಾಜದ ಆಸ್ತಿಯಾಗಿದ್ದು, ಎಲ್ಲರನ್ನೂ ತಲುಪುವ ಅಗತ್ಯವಿದೆ ಎಂದರು.
ಸಾಹಿತಿ ಹಾಗೂ ಆರೋಗ್ಯ ಇಲಾಖೆಯ ಸಹಾಯಕ ಆಡಳಿತ ಅಧಿಕಾರಿ ಡಾ.ಆನಂದ್ ಋಗ್ವೇದಿ ಸಹ ಪುಸ್ತಕದ ಕುರಿತು ಮಾತನಾಡಿದರು. ಜಾಗೃತ ಮಹಿಳಾ ಸಂಘದ ಅಧ್ಯಕ್ಷೆ ಪ್ರೊ.ಬಿ. ವಿಮಲಾದಾಸ್ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ಆಶಾ ಕಲ್ಲನಗೌಡರ್ ಇತರರು ಉಪಸ್ಥಿತರಿದ್ದರು.