ಜಿ.ಎಸ್.ಟಿ. ಮಾಹಿತಿ ಕಾರ್ಯಕ್ರಮ
ದಾವಣಗೆರೆ, ಮಾ. 9 – ಸರ್ಕಾರ ಪೂರ್ವಸಿದ್ಧತೆ ಇಲ್ಲದೇ ಅವಸರದಿಂದ ಜಿ.ಎಸ್.ಟಿ. ಜಾರಿಗೆ ತಂದ ನಂತರ, ನಿರಂತರ ತಿದ್ದುಪಡಿಗಳನ್ನು ತಂದು ಅರ್ಥ ಮಾಡಿಕೊಳ್ಳುವುದೇ ಕಷ್ಟ ಮಾಡಿದೆ. ಇದರ ನಡುವೆ, ಕೊರೊನಾ ಸಂಕಷ್ಟದಲ್ಲೇ ತೆರಿಗೆಗೆ ಒತ್ತಡ ಹೇರುತ್ತಿದೆ ಎಂದು ಲೆಕ್ಕ ಪರಿಶೋಧಕ ಅಥಣಿ ವೀರಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ವತಿಯಿಂದ ನಗರದ ಬಾಪೂಜಿ ಎಂ.ಬಿ.ಎ. ಕಾಲೇಜಿನಲ್ಲಿ ಆಯೋಜಿಸಲಾಗಿದ್ದ §ಜಿ.ಎಸ್.ಟಿ. ಮಾಹಿತಿ ಕಾರ್ಯಕ್ರಮ¬ದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.
ಪ್ರತಿದಿನ ವಾಟ್ಸಾಪ್‌ಗೆ ಕಾಯ್ದೆ ತಿದ್ದುಪಡಿಯಾದ ವರದಿಗಳು ಬರುತ್ತಿವೆ. ಕೊರೊನಾ ಕಾರಣದಿಂದಾಗಿ ಜನರು ಮನೆಯಲ್ಲಿರುವ ಪರಿಸ್ಥಿತಿ ಬಂದಿರುವಾಗಲೇ, ಕೇಂದ್ರ ಸರ್ಕಾರ ಜಿ.ಎಸ್.ಟಿ. ಕಾಯ್ದೆಗೆ 30 ತಿದ್ದುಪಡಿಗಳನ್ನು ತಂದಿದೆ. ಲೆಕ್ಕ ಪರಿಶೋಧಕರು ಹಾಗೂ ತೆರಿಗೆ ಸಲಹೆಗಾರರಿಗೇ ತಿದ್ದುಪಡಿ ಅರ್ಥವಾಗದಿದ್ದರೆ ವ್ಯಾಪಾರಿಗಳಿಗೆ ತಿಳಿಸುವುದಾದರೂ ಹೇಗೆ? ಎಂದವರು ಪ್ರಶ್ನಿಸಿದರು.
ಆದಾಯ ತೆರಿಗೆ ಇಲಾಖೆ ಜಾರಿಗೆ ತಂದಿರುವ ಕರ ಸಮಾಧಾನ ವ್ಯವಸ್ಥೆ ಹೆಚ್ಚು ಉಪಯುಕ್ತವಾಗಿಲ್ಲ. ಕೊರೊನಾ ಸಂದರ್ಭದಲ್ಲಿ ಜನರು ಸಂಕಷ್ಟದಲ್ಲಿ ಸಿಲುಕಿರುವಾಗ, ನಾವು ಹೇಳಿದಂತೆ ಪೂರ್ಣ ತೆರಿಗೆ ಪಾವತಿಸಿ ವಿನಾಯಿತಿ ಪಡೆಯಿರಿ ಎಂದರೆ ಪ್ರಯೋಜನವಾಗದು ಎಂದು ವೀರಣ್ಣ ಹೇಳಿದರು.
ಜಿ.ಎಸ್.ಟಿ. ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಬೇಕಿತ್ತು. ಹಾಗೆ ಮಾಡದೇ ನೇರವಾಗಿ ಜಾರಿಗೆ ತರಲಾಗಿದೆ. ಇದರಿಂದಾಗಿ ತಪ್ಪುಗಳು ಬಹಳಷ್ಟಿವೆ. ಈ ತಪ್ಪುಗಳನ್ನು ಸವಾಲಾಗಿ ಸ್ವೀಕರಿಸಿ ಕಾರ್ಯ ನಿರ್ವಹಿಸಬೇಕಿದೆ ಎಂದವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ (ಆಡಳಿತ) ರಮೇಶ್ ಗೌಡ, ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಅಧಿಕಾರಿಗಳು ಸುಮ್ಮನೆ ಮನೆಯಲ್ಲಿರಬಾರದು ಎಂದು ಜಿ.ಎಸ್.ಟಿ. ಕಾಯ್ದೆಗೆ 30ಕ್ಕೂ ಹೆಚ್ಚು ತಿದ್ದುಪಡಿಗಳನ್ನು ತರಲಾಗಿದೆ ಎಂದು ತಮಾಷೆಯಾಗಿ ಹೇಳಿದರಲ್ಲದೇ, ಈ ತಿದ್ದುಪಡಿಗಳಲ್ಲಿ ಮತ್ತೆ ಬದಲಾವಣೆ ತರಬೇಕಾದರೆ ಜಿ.ಎಸ್.ಟಿ. ಮಂಡಳಿ ಕ್ರಮ ತೆಗೆದುಕೊಳ್ಳಬೇಕು. ಪ್ರಸಕ್ತ ಕಾಯ್ದೆ ಅರ್ಥ ಮಾಡಿಕೊಳ್ಳುವುದರಿಂದ ಪರಿಹಾರ ಸಾಧ್ಯ ಎಂದು ಹೇಳಿದರು.
ವೇದಿಕೆಯ ಮೇಲೆ ವಾಣಿಜ್ಯ ತೆರಿಗೆ ಇಲಾಖೆಯ ಇ-ಆಡಿಟ್ ಹೆಚ್ಚುವರಿ ಆಯುಕ್ತ ಮುರುಳಿ ಕೃಷ್ಣ, ಇಲಾಖೆಯ ಜಂಟಿ ಆಯುಕ್ತ (ಮೇಲ್ಮನವಿ) ಶ್ರೀನಿವಾಸ್, ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಗೌರವಾಧ್ಯಕ್ಷ ಬಿ.ಜಿ. ಬಸವರಾಜಪ್ಪ, ಉಪಾಧ್ಯಕ್ಷ ಹೆಚ್.ಎಸ್. ಮಂಜುನಾಥ್ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಜಂಬಗಿ ರಾಧೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಎಂ.ಡಿ. ರೇವಣಸಿದ್ದಯ್ಯ ಸ್ವಾಗತಿಸಿದರು. ನಿರ್ದೇಶಕ ಸಿ. ವಿನಯ್ ವಂದಿಸಿದರು.
ಸರ್ಕಾರ ಲೆಕ್ಕ ಪರಿಶೋಧಕರ §ಕಟ್¬ ಮಾಡಿದೆ
ತೆರಿಗೆ ಕಡಿಮೆ ಪಾವತಿಯಾಗಲೂ ಲೆಕ್ಕ ಪರಿಶೋಧಕರೇ ಕಾರಣ ಎಂದು ಭಾವಿಸಿರುವ ಕೇಂದ್ರ ಸರ್ಕಾರ, ನಮ್ಮನ್ನು §ಕಟ್¬ ಮಾಡಲು ಫೇಸ್‌ಲೆಸ್ (ಮುಖಾಮುಖಿ ರಹಿತ) ವ್ಯವಸ್ಥೆ ಜಾರಿಗೆ ತಂದಿದೆ. ಈಗ ಟ್ರಿಬ್ಯೂನಲ್ ಸಹ ಫೇಸ್‌ಲೆಸ್ ಆಗಿದೆ ಎಂದು ಲೆಕ್ಕ ಪರಿಶೋಧಕ ಅಥಣಿ ವೀರಣ್ಣ ಹೇಳಿದ್ದಾರೆ.
ಸರ್ಕಾರ ನೋಟುಗಳ ಅಮಾನ್ಯೀಕರಣ ಮಾಡಿದ ನಂತರ ಶೇ.98ರಷ್ಟು ನೋಟುಗಳು ಬ್ಯಾಂಕಿಗೆ ವಾಪಸ್ ಬಂದವು. ಸರ್ಕಾರ ನಿರೀಕ್ಷಿಸಿದಷ್ಟು ಕಪ್ಪು ಹಣ ಸಿಗಲಿಲ್ಲ. ಇದರ ಹಿಂದೆ ಗುಜರಾತ್‌ನ ಕೆಲ ಲೆಕ್ಕ ಪರಿಶೋಧಕರೇ ಕಾರಣ. ಲೆಕ್ಕ ಪರಿಶೋಧಕರು ಜನರಿಗೆ ತಪ್ಪು ಮಾರ್ಗದರ್ಶನ ಮಾಡಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ದೆಹಲಿಯಲ್ಲಿ ಸ್ವಚ್ಛವಾಗಿ ಹೇಳಿದ್ದರು ಎಂದೂ ವೀರಣ್ಣ ತಿಳಿಸಿದ್ದಾರೆ.