ಹರಿಹರದ ಶ್ರೀ ರಾಮಕೃಷ್ಣಾಶ್ರಮದ ಶ್ರೀ ಶಾರದೇಶಾನಂದಜೀ
ಮಲೇಬೆನ್ನೂರು, ಜು.26-ದೀನದೇವೋ ಭವ, ದಲಿತದೇವೋಭವ ಮತ್ತು ರೋಗಿದೇವೋ ಭವ ಎಂಬುದು ಸ್ವಾಮಿ ವಿವೇಕಾನಂದರ ಹೊಸ ವೇದಗಳಾಗಿವೆ ಎಂದು ಹರಿಹರ ರಾಮಕೃಷ್ಣ ವಿವೇಕಾ ನಂದ ಆಶ್ರಮದ ಅಧ್ಯಕ್ಷರಾದ ಶ್ರೀ ಶಾರದೇಶಾ ನಂದಜೀ ಮಹಾರಾಜ್ ಅಭಿಪ್ರಾಯಪಟ್ಟರು.
ಸಮೀಪದ ಕುಂಬಳೂರಿನಲ್ಲಿ ಇಂದು ಆಯೋಜಿಸಿದ್ದ 20 ಬಡ ತಾಯಂದಿರಿಗೆ ದಾನಿಗಳ ನೆರವಿಂದ ಪಡೆದ ಆಹಾರ ಪದಾರ್ಥಗಳನ್ನು ವಿತರಿಸಿ, ಶ್ರೀಗಳು ಆಶೀರ್ವಚನ ನೀಡಿದರು.
ಜಾತಿ ಹೊಡೆದೋಡಿಸಿ ಭಜನೆಯತ್ತ ಗಮನ ಹರಿಸಿದರೆ ಅದು ಆತ್ಮಶಕ್ತಿ ಕೊಡುತ್ತೆ. ಭಕ್ತರ ಜವಾಬ್ದಾರಿಯನ್ನು ಸನ್ಯಾಸಿಗಳು ಹೊರಬೇಕು ಎಂದು ಆಶಯ ವ್ಯಕ್ತಪಡಿಸಿದರು.
ರಾಜ್ಯದಾದ್ಯಂತ ಅತಿವೃಷ್ಟಿ ಸಂತ್ರಸ್ತರಿಗೆ ಮತ್ತು ಬಡ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ 10 ಲಕ್ಷ ರೂ. ಮೊತ್ತದ ಸಾಮಗ್ರಿಗಳನ್ನು ವಿತರಣೆ ಮಾಡಲಾಗಿದೆ. ಆ ಮೂಲಕ ಸೇವೆ ಮಾಡಿ ಆನಂದ ಕಾಣಬೇಕು ಎಂದು ಕರೆ ನೀಡಿದರು.
ಗಿರಿಯಮ್ಮ ಪಿಯು ಕಾಲೇಜು ಪ್ರಾಚಾರ್ಯ ರಾದ ಸುಜಾತ ಸುಬ್ರಹ್ಮಣ್ಯ ಮಾತನಾಡಿ, ಅಹಂಕಾರ ರಹಿತ ಜೀವನ ಸಾರ್ಥಕತೆ ಪಡೆಯುತ್ತದೆ. ನೆಮ್ಮದಿ ಕಾಣುತ್ತೇವೆ ಎಂದು ತಿಳಿಸಿ ಬಡ ವಿದ್ಯಾರ್ಥಿನಿ ರಕ್ಷಿತಾಗೆ ಪಿಯು ವಿದ್ಯಾಭ್ಯಾಸದ ಖರ್ಚು ಭರಿಸುವ ಭರವಸೆ ನೀಡಿದರು.
ಆಹಾರ ಪದಾರ್ಥ ಸ್ವೀಕರಿಸಿದ ಫಲಾನುಭವಿಗಳಾದ, ಮಂಜುಳಾ, ಶ್ವೇತಾ ರೇಣುಕಮ್ಮ, ಕೊಮಾರನಹಳ್ಳಿ ಪ್ರವೀಣ್ ಅನಿಸಿಕೆ ಹಂಚಿಕೊಂಡರು. ದಾನಿಗಳಾದ ಲಕ್ಷ್ಮಿದೇವಿ ಸಿ. ಪಾಲಂಕರ್, ಕೆ. ಕುಬೇರಪ್ಪ, ಬಿ. ಹನುಮಂತಪ್ಪ, ಕೆ.ಎಚ್.ಲಿಂಗರಾಜ್, ವರದಿಗಾರ ಎಚ್.ಎಂ. ಸದಾನಂದ ಮತ್ತಿತರರು ಮಾತನಾಡಿದರು.
ಹೆಚ್.ಎಸ್. ವೈಷ್ಣವಿ ಸ್ವಾಮಿ ವಿವೇಕಾನಂದರ ಕುರಿತು ಭಾಷಣ ಮಾಡಿದರು. ಆರಂಭದಲ್ಲಿ, ಇತ್ತೀಚೆಗೆ ನಿಧನರಾದ ಸಾಮಾಜಿಕ ಕಾರ್ಯಕರ್ತ ಕೆ.ಎನ್.ಹನುಮಂತಪ್ಪ ಹಾಗೂ ಗಡಿಯಲ್ಲಿನ ಮೃತ ಯೋಧರ ಸ್ಮರಣೆಗೆ ಮೌನಾಚರಣೆ ಸಲ್ಲಿಸಲಾಯಿತು.