ಮಳೆ ಸಂತ್ರಸ್ತರಿಗೆ ದಿನಸಿ ಕಿಟ್ ವಿತರಣೆ

ಹರಪನಹಳ್ಳಿ, ಜು.24- ತಾಲ್ಲೂಕಿನಾದ್ಯಂತ  ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಳೆಯ ಕೆಲ ಮಣ್ಣಿನ ಮನೆಗಳ ಮೇಲ್ಛಾವಣಿ, ಗೋಡೆಗಳು ಒಂದೊಂದಾಗಿ ಕಳಚಿ ನೆಲಕ್ಕೆ ಅಪ್ಪಳಿಸುತ್ತಿವೆ. ಅದರ ಜತೆಯಲ್ಲಿ ಬದುಕಿನ ಬಂಡಿಯ ಹಳಿಯೂ ಸಹ ತಪ್ಪಿದೆ. ಕೂಲಿ ನಾಲಿ ಮಾಡುವ ಮೂಲಕ ಅಂದಿನ ದುಡಿಮೆಯನ್ನೇ ಹೊಟ್ಟೆಪಾಡಿಗಾಗಿ ನೆಚ್ಚಿಕೊಂಡ ಬಹುತೇಕ ಕುಟುಂಬಗಳಲ್ಲಿ ಚಡಪಡಿಕೆ ಶುರುವಾಗಿದೆ.

ಇಂತಹದೊಂದು ಚಿತ್ರಣ ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆ ಹಾಗೂ ಕಸಬಾ ಹೋಬಳಿಗಳ ಕೆಲ ಗ್ರಾಮಗಳಲ್ಲಿ ಮನೆ ಮಾಡಿದೆ. ನಿರಂತರವಾಗಿ ಜಿಟಿಜಿಟಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರೂ ಸಹ ಕೃಷಿ ಕೂಲಿಕಾರರನ್ನು ಕೆಲಸ ಮಾಡಲು ಕರೆಯುತ್ತಿಲ್ಲ. ಕೂಲಿ ಕೆಲಸ ದೊರೆಯದೇ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ ಎಂಬಂತಾಗಿದೆ. ನಿತ್ಯವೂ ಧನಿಕರ ಮನೆಯಲ್ಲಿ ಸಾಲಸೋಲ ಮಾಡಿ, ಮುಂಗಡ ಹಣವನ್ನು ಸಾಲದ ರೂಪದಲ್ಲಿ ಪಡೆಯುವ ಮೂಲಕ ಬದುಕು ಸಾಗಿಸುತ್ತಿದ್ದೇವೆ ಎಂದು ಸಂಕಟ ತೋಡಿಕೊಳ್ಳು ತ್ತಾರೆ ಹಾರಕನಾಳು ತಾಂಡಾದ ಸಕ್ರಿಬಾಯಿ.

ಈ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿ ಸಿಲುಕಿಕೊಂಡು ಚಡಪಡಿಸುತ್ತಿದ್ದ ಸಂತ್ರಸ್ತರ ನೆರವಿಗೆ ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂ.ಪಿ. ವೀಣಾ ಮಹಾಂತೇಶ ಸಹಾಯಹಸ್ತ ಚಾಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ. 

ಹಾರಕನಾಳು, ಹಾರಕನಾಳು ದೊಡ್ಡತಾಂಡಾ, ಹಾರಕನಾಳು ಸಣ್ಣತಾಂಡಾ ಸೇರಿದಂತೆ ವಿವಿಧೆಡೆ ಭೇಟಿ ನೀಡುವ ಮೂಲಕ ಜಿಟಿಜಿಟಿ ಸುರಿಯುವ ಮಳೆಯನ್ನು ಲೆಕ್ಕಿಸದೆ ನೆರವಿಗೆ ಧಾವಿಸಿದ್ದಾರೆ. ಮನೆಗಳ ಸಂತ್ರಸ್ತ ಪ್ರತಿ ಕುಟುಂಬಗಳಿಗೆ ತಾಡಪಾಲು, ಆಹಾರದ ಕಿಟ್ ಹಾಗೂ ಗಡಿಯಾರ ನೀಡಿದ್ದಾರೆ.

error: Content is protected !!