ಮೈದುಂಬಿದ ತುಂಗಭದ್ರೆ ಹರಿದುಬಂದ ಜನಸಾಗರ

ಹರಿಹರ, ಜು.25- ನಗರದ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ  ನದಿಯನ್ನು ನೋಡಲು ಜನಸಾಗರ ಹರಿದುಬರುತ್ತಿದೆ. 

ಕಳೆದ ಒಂದು ವಾರದಿಂದ ಮಲೆನಾಡಿನ ಶೃಂಗೇರಿ, ಕೊಪ್ಪ, ಆಗುಂಬೆ, ಶಿವಮೊಗ್ಗ, ತೀರ್ಥಹಳ್ಳಿ ಸೇರಿದಂತೆ ಹಲವು ಭಾಗಗಳಲ್ಲಿ ಎಡಬಿಡದೆ ಸುರಿದ ಮಳೆಯಿಂದಾಗಿ ನಗರದ ತುಂಗಭದ್ರಾ ನದಿಯು ಮೈದುಂಬಿಕೊಂಡು ಹರಿಯುತ್ತಿದೆ. ಇದನ್ನು ನೋಡಿ ಕಣ್ಣುತುಂಬಿಕೊಳ್ಳಲು ದಾವಣಗೆರೆ, ರಾಣೇಬೆನ್ನೂರು, ಹರಪನಹಳ್ಳಿ ಸೇರಿದಂತೆ ವಿವಿಧ ತಾಲ್ಲೂಕುಗಳ ಜನರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿ, ನದಿಯಲ್ಲಿ ಹರಿಯುತ್ತಿರುವ ನೀರನ್ನು ನೋಡಿ ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ.

ಸಾರ್ವಜನಿಕರು ನದಿಯ ದಂಡೆಯಲ್ಲಿ ಶೇಂಗಾಕಾಯಿ, ಪೇರಲ ಹಣ್ಣು, ಅನಾನಸ್ ಹಣ್ಣು, ಬಿಸಿ ಮೆಣಸಿನ ಕಾಯಿ, ಕಾರಾ-ಮಂಡಕ್ಕಿ, ಪೀಪಿ ಸೇರಿದಂತೆ ಹಲವು ವ್ಯಾಪಾರದ ಅಂಗಡಿಗಳಲ್ಲಿ ದೊರೆಯುವ ವಸ್ತುಗಳನ್ನು ಕೊಂಡುಕೊಂಡು ಕುಟುಂಬದ ಸದಸ್ಯರ ಜೊತೆಯಲ್ಲಿ ಸೇವನೆ ಮಾಡಿದರು.

ನದಿಯ ಎರಡೂ ಸೇತುವೆಯ ಮೇಲೆ ಕುಟುಂಬದ ಸದಸ್ಯರು, ಮಕ್ಕಳು, ವೃದ್ಧರು ಮೊಬೈಲ್‌ನಲ್ಲಿ ಫೋಟೋ ತೆಗೆದುಕೊಂಡು ಮತ್ತು ಸೆಲ್ಫಿ ತೆಗೆದುಕೊಂಡರು. ನದಿಯ ದಂಡೆಯ ಮೇಲೆ ಇರುವ ಶ್ರೀ ಅಯಪ್ಪ ಸ್ವಾಮಿ, ಶ್ರೀ ರಾಘವೇಂದ್ರ ಸ್ವಾಮಿ, ಶ್ರೀ ಆಂಜನೇಯ ಸ್ವಾಮಿ ಹಾಗೂ ನಾಡಬಂದ್ ಷಾ ವಲಿ ದರ್ಗಾ ದರ್ಶನ ಮಾಡಿ ದೇವರ ಆಶೀರ್ವಾದ ಪಡೆದರು.

ಪ್ರತಿವರ್ಷವೂ ಸಹ ಮಳೆಗಾಲದಲ್ಲಿ ನಗರದಲ್ಲಿನ ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಹರಿಯುತ್ತಿದೆ. ಆದರೆ ನಗರದ ಜನತೆಗೆ ಬೇಸಿಗೆಯ ಕಾಲದಲ್ಲಿ ನದಿಯಲ್ಲಿ ನೀರಿನ ಪ್ರಮಾಣ ಸಂಪೂರ್ಣವಾಗಿ ಕಡಿಮೆಯಾಗಿ ಕುಡಿಯಲಿಕ್ಕೆ ನೀರು ಇಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದರೆ ಇಷ್ಟೊಂದು ನೀರು ಕಣ್ಣಮುಂದೆ ಹಾದು ಡ್ಯಾಮ್ ಸೇರುತ್ತಿದ್ದರೂ ಬೇಸಿಗೆ ಸಮಯದಲ್ಲಿ ಕುಡಿಯಲಿಕ್ಕಾದರು ಶೇಖರಣೆ ಮಾಡಿಕೊಳ್ಳಲು ಏನಾದರೂ ಒಂದು ವ್ಯವಸ್ಥೆ ಮಾಡಲಿಕ್ಕೆ ಆಗದೇ ಇರುವುದು  ದುರ್ದೈವದ ಸಂಗತಿ. ಇಲ್ಲಿನ ನೀರನ್ನು ದಾವಣಗೆರೆ ಜಿಲ್ಲೆಯ ಹಲವಾರು ನಗರಗಳಿಗೆ ಸರಬರಾಜು ಮಾಡಲಾಗುತ್ತದೆ. ಆದರೆ, ಇಲ್ಲಿನ ಕೆಲವೊಂದು ಬಡಾವಣೆಯ ಜನರಿಗೆ ಇನ್ನೂ ಸರಿಯಾದ ರೀತಿಯಲ್ಲಿ ಕುಡಿಯಲಿಕ್ಕೆ ಸಿಗುತ್ತಿಲ್ಲ. ಆದ್ದರಿಂದ ಇಲ್ಲಿನ ಜನರಿಗೆ ಬೇಸಿಗೆಯಲ್ಲಿ ನೀರಿನ ತೊಂದರೆ ಬರದಂತೆ ಮುಂಜಾಗ್ರತಾ ಕ್ರಮವಾಗಿ ನದಿಯ ನೀರನ್ನು ಶೇಖರಣೆ ಮಾಡಿಕೊಳ್ಳಲು ಇಲ್ಲಿನ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಒಮ್ಮತದ ತೀರ್ಮಾನವನ್ನು ಮಾಡಿ, ಅದನ್ನು ಕಾರ್ಯರೂಪಕ್ಕೆ ತರುವುದಕ್ಕೆ ಮುಂದಾಗುವಂತೆ, ಸಾರ್ವಜನಿಕರಿಂದ ಮಾತುಗಳು ವ್ಯಕ್ತವಾದವು.

error: Content is protected !!