ಮಹಿಳೆಗೆ ಸಾಧನೆಯೊಂದಿಗೆ ಅಸಮಾನತೆ ನಿವಾರಿಸುವ ಸವಾಲಿದೆ : ಶಾಂತಕುಮಾರಿ

ದಾವಣಗೆರೆ, ಮಾ. 8 – ಮಹಿಳೆಯರು ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು, ಹೆಣ್ಣು ಅಬಲೆಯಲ್ಲ ಸಬಲೆ ಎಂದು ಸಾಬೀತುಪಡಿಸುತ್ತಿದ್ದಾಳೆ. ಮಹಿಳಾ ಸ್ವಾತಂತ್ರ್ಯವನ್ನು ಧನಾತ್ಮಕವಾಗಿ ಹಾಗೂ ಸಂಸ್ಕೃತಿಯ ನೆಲೆಗಟ್ಟಿನಲ್ಲಿ ಬಳಸಿಕೊಂಡು ಮುನ್ನಡೆಯ ಬೇಕಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ವಿ.ಶಾಂತಕುಮಾರಿ ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಇಲಾಖೆ ದಾವಣಗೆರೆ ತಾಲ್ಲೂಕು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಶಾಖೆ, ಒನ್ ಸ್ಟಾಪ್ ಸೆಂಟರ್ (ಸಖಿ), ಮಹಿಳಾ ಶಕ್ತಿ ಕೇಂದ್ರ, ಸ್ತ್ರೀಶಕ್ತಿ ಒಕ್ಕೂಟ, ಮಹಿಳಾ ಸಹಾಯ ವಾಣಿ ದಾವಣಗೆರೆ ಇವರ ಸಂಯುಕ್ತಾಶ್ರ ಯದಲ್ಲಿ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಏರ್ಪಡಿಸ ಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾ ಚರಣೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮೊದಲೆಲ್ಲ ಮಹಿಳೆಯನ್ನು ಮಕ್ಕಳನ್ನು ಹೆರುವ ಯಂತ್ರದಂತೆ, ಆಳಿನಂತೆ ಕೀಳಾಗಿ ಕಾಣಲಾಗುತ್ತಿತ್ತು. ಆದರೆ ಇತ್ತೀಚಿಗೆ ಸ್ವಲ್ಪ ಬದಲಾವಣೆ ಕಾಣುತ್ತಿದೆ. ಹೆಣ್ಣು ಇಂದು ಎಲ್ಲ ಕ್ಷೇತ್ರಗಳಲ್ಲಿ ಸಂಭ್ರಮಿಸುವಂತಹ ಸಾಧನೆ ಮಾಡಿದ್ದರೂ ಲಿಂಗ ಅಸಮಾನತೆ ಮತ್ತು ಪಕ್ಷಪಾತವನ್ನು ತೊಡೆದು ಹಾಕುವ ಸವಾಲುಗಳನ್ನು ಹೊಂದಿದ್ದು, ಇದನ್ನೂ ಕೂಡ ದಿಟ್ಟವಾಗಿ ಮೆಟ್ಟಿ ನಿಲ್ಲುವ ಶಕ್ತಿ ತೋರಬೇಕಿದೆ ಎಂದವರು ಹೇಳಿದ್ದಾರೆ.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಬೆಳಗಿನಿಂದ ರಾತ್ರಿವರೆಗೆ ಅವಿರತ ಶ್ರಮಿಸುವ ಈ ಹೆಣ್ಣು ಜೀವಗಳ ಕೆಲಸಕ್ಕೆ ಎಷ್ಟು ಸಂಬಳ ಕೊಟ್ಟರೂ ಸಾಲದು. ಸಂವಿಧಾನ ಹೆಣ್ಣುಮಕ್ಕಳಿಗೆ ಅನೇಕ ಅವಕಾಶ ನೀಡಿದೆ. ಈ ಅವಕಾಶಗಳನ್ನು ಬಳಸಿಕೊಂಡು ಮಹಿಳೆಯರು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

ಎಸ್ಪಿ ಹನುಮಂತರಾಯ, ನಿರುದ್ಯೋಗಿ ಮಹಿಳೆ ಇರುವುದಿಲ್ಲ. ಎಲ್ಲ ಮಹಿಳೆಯರೂ ಕೆಲಸದಲ್ಲಿ ನಿರತರಾಗಿರುತ್ತಾರೆ. ಆದರೆ, ಕೆಲವರಿಗೆ ಮಾತ್ರ ಸಂಬಳ ಬರುತ್ತದೆ. ಶಿಕ್ಷಣ ಮತ್ತು ಮಾಹಿತಿ ಹೆಣ್ಣಿನ ಸಬಲೀಕರಣಕ್ಕೆ ರಹದಾರಿಗಳಾಗಿವೆ ಎಂದರು.

ಮೇಯರ್‌ ಎಸ್.ಟಿ.ವೀರೇಶ್ ಮಾತನಾಡಿ, ಭಯದಿಂದಲೇ ಶೇ.90 ರಷ್ಟು ಮಹಿಳೆಯರು ತಮ್ಮ ಮೇಲಿನ ದೌರ್ಜನ್ಯ, ಅನ್ಯಾಯವನ್ನು ಹೇಳಿಕೊಳ್ಳುತ್ತಿಲ್ಲ. ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ನೀಡಿದ್ದು ಮಹಿಳೆಯರು ದೌರ್ಜನ್ಯ, ಅನ್ಯಾಯವನ್ನು ಸಹಿಸಬಾರದು. ಇದರ ವಿರುದ್ದ ಪ್ರತಿಭಟಿಸಬೇಕು ಎಂದರು.

    ಜಿ.ಪಂ. ಸಿಇಒ ಡಾ. ವಿಜಯ ಮಹಾಂತೇಶ್ ದಾನಮ್ಮನವರ,  ಜಿ.ಪಂ ಮಾಜಿ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ತಾ.ಪಂ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಜಿ.ಪಂ. ಸದಸ್ಯರಾದ ಮಂಜುಳ ಟಿ.ವಿ. ರಾಜು, ಶೈಲಜಾ ಬಸವರಾಜ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಾಲಾಕ್ಷಿ ಮಾತನಾಡಿದರು.

   ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರನಾಯ್ಕ, ಜಿ. ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಲೋಕೇಶ್ವರ, ಜಿ.ಪಂ. ಸದಸ್ಯರಾದ ಉಮಾ ವೆಂಕಟೇಶ್, ಅರ್ಚನಾ ಬಸವರಾಜ್, ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಜಿ.ಸಿ.ಮಂಗಳ, ತಾಲ್ಲೂಕು ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಶಕುಂತಲ, ಶಾರದಮ್ಮ ಮತ್ತಿತರರು ಉಪಸ್ಥಿತರಿದ್ದರು.

ವಕೀಲೆ ನೇತ್ರಾವತಿ ಹಾಗೂ ಐ.ಕೆ ಮಂಜುಳಾ ಉಪನ್ಯಾಸ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಕೆ.ಹೆಚ್.ವಿಜಯಕುಮಾರ್ ಸ್ವಾಗತಿಸಿದರು.

error: Content is protected !!