ದಾವಣಗೆರೆ, ಮಾ.8- ಹೆಣ್ಣಾಗಲಿ, ಗಂಡಾಗಲಿ ಮಕ್ಕಳೇ. ಅವರನ್ನೇ ಅಭಿಮಾನದಿಂದ ಬೆಳೆಸಿ, ಅವರಲ್ಲೇ ಎಲ್ಲವನ್ನೂ ಕಾಣಬೇಕು. ಆದರೆ, ಗಂಡೇ ಬೇಕೆಂಬ ಅಂಧ ವಿಶ್ವಾಸಕ್ಕೆ ಒಳಗಾಗಬಾರದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.
ಅವರು, ಇಂದು ಸಂಜೆ ನಗರದ ವನಿತಾ ಸಮಾಜದ ಆವರಣದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ವನಿತಾ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವ್ಯಕ್ತಿಯೋರ್ವನ ಪತ್ನಿಗೆ ಹೆಣ್ಣುಮಕ್ಕಳೇ ಆದವು. 14ನೇ ಡೆಲಿವರಿ ವೇಳೆಯೂ ಹೆಣ್ಣಾಯಿತು. ಆದರೆ, ಆ ಮಹಿಳೆ ಸಾವನ್ನಪ್ಪಿದಳು. ಈತ ಪುನಃ ವಿವಾಹವಾದ. ನಿನಗೆ ಗಂಡು ಮಗು ಆಗುವುದೆಂದು ಈತನಿಗೆ ಯಾರೋ ತಿಳಿಸಿದ್ದರಂತೆ. ಹಾಗಾಗಿ ಆತ ಗಂಡು ಮಗುವಿನ ಆಸೆ ಹೊಂದಿದ್ದ. ಇಂತಹ ಅಂಧ ವಿಶ್ವಾಸಕ್ಕೆ ಒಳಗಾಗಬಾರದು. ಯಾಕೆ ಹೆಣ್ಣುಮಕ್ಕಳು ಮಕ್ಕಳಲ್ಲವೇ ? ಯಾವ ವಿಷಯದಲ್ಲಿ ಕಡಿಮೆ ಇದ್ದಾರೆ. ಕೆಲವರಿಗೆ ಮಕ್ಕಳ ಸೌಭಾಗ್ಯವೇ ಇರುವುದಿಲ್ಲ. ವಿಶೇಷವಾಗಿ ಮಕ್ಕಳಿಲ್ಲದ ಸಾಕಷ್ಟು ಐಎಎಸ್ ಅಧಿಕಾರಿಗಳು ದತ್ತು ಪಡೆಯುವುದು ಹೆಣ್ಣುಮಕ್ಕಳನ್ನೇ ಎಂದು ಹೇಳಿದರು.
ಹೆಣ್ಣುಮಕ್ಕಳಲ್ಲಿರುವ ಅದ್ಬುತ ಶಕ್ತಿ ಬೇರೆ ಯಾರಲ್ಲೂ ಇಲ್ಲ. ಹೆಣ್ಣುಮಕ್ಕಳು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯವಿದೆ. ಕುಟುಂಬವನ್ನಾಗಲೀ, ಸಮಾಜವನ್ನಾಗಲೀ ಉನ್ನತ ಮಟ್ಟಕ್ಕೆ ಏರಿಸಬಲ್ಲರು. ಅಂತಹ ಅಗಾಧ ಶಕ್ತಿ ಇದೆ. ಪುರುಷ ಪ್ರಧಾನ ಸಮಾಜದಲ್ಲಿ ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಹೆಣ್ಣುಮಕ್ಕಳ ಪಾತ್ರ ಬಹು ಮುಖ್ಯವಾಗಿರುತ್ತದೆ. ನನ್ನ ಜೀವನದ ಯಶಸ್ಸಿನಲ್ಲೂ ಸಹ ಮೊದಲಿಗೆ ಅವ್ವ, ಹೆಂಡತಿಯ ಪಾತ್ರವೂ ಇದೆ. ಹೆಣ್ಣುಮಕ್ಕಳಲ್ಲಿ ಸಾಕಷ್ಟು ಸಕಾರಾತ್ಮಕ ಶಕ್ತಿ ಇದೆ. ಅವರನ್ನು ನಾವು ಗೌರವದಿಂದ ಕಾಣಬೇಕು. ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಯಾವುದೂ ಅಸಾಧ್ಯವಲ್ಲ, ಎಲ್ಲವೂ ಸಾಧ್ಯವಿದೆ ಎಂಬುದನ್ನು ತೋರಿಸಬಲ್ಲರು ಎಂದರು.
ಹೆಣ್ಣುಮಗಳ ತಂದೆಯೆಂಬ ಹೆಮ್ಮೆ ನನಗಿದೆ : ಡಿಸಿ
ನನ್ನೂರಿಗೆ ಯೋಗಕ್ಷೇಮ ವಿಚಾರಿಸಲೆಂದು ಹೋದಾಗ ಕುಟುಂಬದ ಹಿರಿಯೋರ್ವರು ನನಗೆ ಪುತ್ರನಾಗಲೆಂದು ಹರಸಿದರು. ಆದರೆ ನನಗೆ ಓರ್ವ ಪುತ್ರಿ ಇರುವುದು ಖುಷಿ ತಂದಿದೆ. ಅಲ್ಲದೇ ಹೆಣ್ಣುಮಗಳ ತಂದೆ ಎಂಬ ಹೆಮ್ಮೆ ನನಗಿದೆ. ಹತ್ತು ಮಂದಿಯ ಸಾಮರ್ಥ್ಯ, ಶಕ್ತಿ ಒಬ್ಬಳಲ್ಲೇ ಇದೆ. ನನ್ನ ಮಗಳು ನನ್ನಯ ಮನಸ್ಥಿತಿ ಅರಿತು ಬಳಿ ಬಂದು ಯೋಗಕ್ಷೇಮ ವಿಚಾರಿಸುವಳು. ಅದೇ ಕೆಲ ಗಂಡು ಮಕ್ಕಳು ರೊಕ್ಕದ ಅವಶ್ಯವಿದ್ದಾಗ ಮಾತ್ರ ಬಳಿ ಬರುತ್ತಾರೆ. ಕರುಳ ಪ್ರೇಮವುಳ್ಳ, ಮನ ಮಿಡಿಯುವವರೇ ಹೆಣ್ಣುಮಕ್ಕಳು. ಅನಾವಶ್ಯಕವಾಗಿ ಹೆಚ್ಚಿನ ಮಕ್ಕಳು ಹೊಂದುವ ದುಸ್ಸಾಹಸಕ್ಕೆ ಕೈ ಹಾಕದೇ ಒಂದು ಅಥವಾ ಎರಡು ಮಕ್ಕಳನ್ನು ಹೊಂದಬೇಕು.
ಯಾರ ಮನೆ ತಣ್ಣಗಿರುವುದೋ ಅವರ ಕಚೇರಿಯೂ ತಣ್ಣಗಿರಲಿದೆ. ಸಮಾಜದಲ್ಲಿ ಸಕ್ರಿಯವಾಗಿ ಓಡಾಡಿ ಕೆಲಸ ಮಾಡಲು ಸಾಧ್ಯವಾಗಲಿದೆ. ನಾವು ಸಹ ಸಕ್ರಿಯವಾಗಿ ಓಡಾಡಿ ಕೆಲಸ ಮಾಡುತ್ತೇವೆಂದರೆ ಅದಕ್ಕೆ ಧರ್ಮಪತ್ನಿ, ಮಾತೃಶ್ರೀ ಅವರ ಪ್ರೋತ್ಸಾಹವೇ ಕಾರಣವೆಂದರು.
ಅಂತರರಾಷ್ಟ್ರೀಯ ಪುರುಷರ ದಿನಾಚರಣೆ ಯಾಕಿಲ್ಲ. ಒಮ್ಮೆಯಾದರೂ ಯಾರೂ ಮಾಡಲ್ಲ. ಆದರೆ, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹುಮ್ಮಸ್ಸು, ಹುರುಪಿನಿಂದ ನಾನಾ ಚಟುವಟಿಕೆಗಳಿಂದ ಆಚರಿಸಲಾಗುತ್ತಿದೆ. ಇಡೀ ಜಗತ್ತಿನ ಸಮತೋಲನಕ್ಕೆ ಕಾರಣ ಮಹಿಳೆಯರು. ಹುಮ್ಮಸ್ಸಿನಿಂದ ನಿಮ್ಮ ಬದುಕಿನ ರೀತಿ ಮೆಲುಕು ಹಾಕಿ ಕೃತಜತೆ ಹೇಳುವುದೇ ಮಹಿಳಾ ದಿನವೆಂದರು. ನಾವು ಬೇರೆಯವರಿಗೆ ಜೈ ಎನ್ನುವುದಕ್ಕೂ ಮುನ್ನ ನಮಗೆ ನಾವು ಜೈ ಎಂದಾಗ ಸಮಾಜ ನಮ್ಮನ್ನು ಬಹಳಷ್ಟು ಗುರುತಿಸಲಿದೆಯಲ್ಲದೇ, ಸತ್ಕಾರ್ಯಗಳ ಮಾಡಲು ದಾರಿಯಾಗಲಿದೆ ಎಂದರು.
ವನಿತಾ ಸಮಾಜದ ಅಧ್ಯಕ್ಷೆ ನಾಗರತ್ನ ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ವೇಳೆ ಉಮಾ ನಾಗರಾಜ್ ಅವರಿಗೆ ವನಿತಾ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಾಂತಕುಮಾರಿ ಶಶಿಧರ್, ಕಾರ್ಯದರ್ಶಿ ಪದ್ಮಾ ಪ್ರಕಾಶ್ ಸೇರಿದಂತೆ ಇತರರು ಇದ್ದರು.