ಕೊಟ್ಟೂರು, ಮಾ.6- ದಲಿತ ಮಹಿಳೆ ದುರುಗಮ್ಮನಿಂದ ಕಳಸದಾರತಿ ಬೆಳಗುವಿಕೆ, ಅಶುಭವೆಂದೇ ಪರಿಗಣಿಸಲಾಗಿರುವ ಮೂಲಾ ನಕ್ಷತ್ರದಲ್ಲಿ ರಥೋತ್ಸವಕ್ಕೆ ಚಾಲನೆ ಪಡೆಯುವುದು ಸೇರಿದಂತೆ, ರಾಜ್ಯದ ಅತೀ ಎತ್ತರದ ರಥ ಎಂಬಿತ್ಯಾದಿ ವಿಶೇಷತೆಗಳನ್ನು ಹೊಂದಿರುವ ಕೊಟ್ಟೂರು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವವು ನಾಳೆ ದಿನಾಂಕ 7 ರ ಭಾನುವಾರ ನಡೆಯಲಿದೆ.
16ನೇ ಶತಮಾನದ ಮಹಾನ್ ಶರಣ ಕೊಟ್ಟೂರು ಶ್ರೀ ಗುರು ಕೊಟ್ಟೂರೇಶ್ವರ ರಥೋತ್ಸವ ಈ ಕಾರಣಕ್ಕಾಗಿ ಜಾತ್ಯತೀತ, ವರ್ಣಾತೀತ ಎಂದೇ ಹೆಸರು ಪಡೆದಿದ್ದು, ರಥೋತ್ಸವಕ್ಕೆ ಪ್ರತಿವರ್ಷ ಈ ಕಾರಣಕ್ಕಾಗಿ ಲಕ್ಷಾಂತರ ಭಕ್ತರು ಪಾದಯಾತ್ರೆ ಮೂಲಕ ಬರುತ್ತಿದ್ದು, ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಹೊರಗಿನ ಭಕ್ತರ ನಿಷೇಧದ ಕಾರಣಕ್ಕಾಗಿ ಭಕ್ತರ ಸಂಖ್ಯೆ ದಿಢೀರ್ ಇಳಿಮುಖವಾಗಿದೆ.
ಈ ಮಹಾಮಹಿಮನ ಭವ್ಯ ರಥೋತ್ಸವ ಗುರುವಾರ ಸಂಜೆ ನಡೆಯಲಿದೆ. ಹಿಂದೂಗಳು ಅಶುಭವೆಂದೇ ಪರಿಗಣಿಸಿರುವ ಮೂಲಾ ನಕ್ಷತ್ರದಲ್ಲಿ ಶ್ರೀ ಸ್ವಾಮಿಯ ರಥೋತ್ಸವ ಜರುಗುವುದಲ್ಲದೇ ಹರಿಜನ ಮುತ್ತೈದೆಯರು ಶ್ರೀ ಸ್ವಾಮಿಗೆ ಕಳಸದಾರತಿ ಬೆಳಗಿದ ನಂತರವೇ ರಥೋತ್ಸವಕ್ಕೆ ಚಾಲನೆ ದೊರಕುವುದು ಜಾತ್ಯತೀತ ನಿಲುವಿಗೆ ಹಿಡಿದ ಕೈಗನ್ನಡಿ.
ಈ ಬಾರಿ ಶ್ರೀ ಸ್ವಾಮಿಯ ರಥೋತ್ಸವ ಸರಳವಾಗಿ ನೆರವೇರಲಿದೆ. ಮೂಲಾ ನಕ್ಷತ್ರದ ಸಮಯ ಸಂಜೆ 4.28ಕ್ಕೆ ಸರಿಯಾಗಿ ರಥೋತ್ಸವ ಸಾಗಲಿದೆ.
– ಸಿ.ಎಚ್.ಎಂ.ಗಂಗಾಧರಯ್ಯ , ಪ್ರಧಾನ ಧರ್ಮಕರ್ತ, ಕೊಟ್ಟೂರು
ರಥೋತ್ಸವದ ಹಿನ್ನೆಲೆಯಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ನಿಯೋಜನೆಗೊಳಿಸಲಾಗಿದೆ. ಹೊರಗಿನ ಭಕ್ತರು ಕೊಟ್ಟೂರು ಪಟ್ಟಣ ಪ್ರವೇಶಿಸದಂತೆ ಎಲ್ಲಾ ರಸ್ತೆಗಳನ್ನು ನಿರ್ಬಂಧಗೊಳಿಸಲಾಗಿದೆ. ಕೋವಿಡ್ ನಿಯಾಮಾವಳಿಗಳನ್ನು ಗಮನದಲ್ಲಿರಿಸ ಬೇಕೆಂಬುದು ಪ್ರತಿಯೊಬ್ಬರ ಜವಾಬ್ದಾರಿ.
– ಪೊಲೀಸ್ ಅಧಿಕಾರಿ, ಕೊಟ್ಟೂರು.
ಕೊಟ್ಟೂರು ಗುರುಬಸವೇಶ್ವರ ಸ್ವಾಮಿಯ ರಥೋತ್ಸವಕ್ಕೆಂದೇ ಕೊಟ್ಟೂರು ಪಟ್ಟಣ ಸಡಗರ ಸಂಭ್ರಮಗಳಿಂದ ಸಜ್ಜುಗೊಂಡಿದ್ದು, ಇಷ್ಟಾರ್ಥಗಳನ್ನು ಸದಾಕಾಲ ಈಡೇರಿಸುತ್ತಿರುವ ಸ್ವಾಮಿಯ ಈ ಮಹೋ ತ್ಸವದಲ್ಲಿ ಪಾಲ್ಗೊಳ್ಳುವುದು ನಮ್ಮೆಲ್ಲರ ಪುಣ್ಯ ಎಂಬ ಭಾವದೊಂದಿಗೆ ರಥೋತ್ಸವದ ಘಳಿಗೆಗಾಗಿ ಅನೇಕರು ಕಾಯುತ್ತಿದ್ದಾರೆ. ಸಾಮಾಜಿಕ ಸಮಾನತೆಯನ್ನು ಪ್ರತಿ ಹಂತದಲ್ಲೂ ಸಾಕಾರಗೊಳಿಸಿದ ಕೊಟ್ಟೂರೇಶ್ವರರು ಎಲ್ಲಾ ಜನಾಂಗದ ಅಧಿದೇವರು ಸಹ ಹೌದು. ರಥೋತ್ಸವದ ಕಾರಣಕ್ಕಾಗಿ ಪಟ್ಟಣದಲ್ಲಿನ ಕೆಲ ಮುಸ್ಲಿಂ ಬಾಂಧವರು ಸಹ ಉಪವಾಸವಿದ್ದು, ಸ್ವಾಮಿಯ ಕೃಪೆಗೆ ಪಾತ್ರರಾಗುವ ಅದಮ್ಯತೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಕೊಟ್ಟೂರು ಪೂರ್ವದಿಂದಲೂ ಭಕ್ತಿಯ ತವರೂರು. ಇಲ್ಲಿನ ಅನೇಕ ಮಠಗಳು ತಮ್ಮದೇ ಆದ ವೈಶಿಷ್ಟ್ಯತೆ ಹೊಂದಿವೆ. ಸ್ವಾಮಿಗೆ ಹಿರೇಮಠ, ಗಚ್ಚಿನಮಠ, ತೊಟ್ಟಿಲು ಮಠವೆಂಬ ಮೂರು ಮಠಗಳು ಇರುವುದು ವಿಶೇಷ. ದಯವೇ ಧರ್ಮದ ಮೂಲ ಎಂಬ ವಚನದಂತೆ ಸಕಲರ ಲೇಸು ಬಯಸುವಾತ ಕೊಟ್ಟೂರು ಕೊಟ್ಟೂರೇಶ್ವರರು. ಈ ಕಾರಣದಿಂದ ಪ್ರತಿ ವರ್ಷ ನಡೆಯುವ ರಥೋತ್ಸವಕ್ಕೆ ಎಲ್ಲಾ ಧರ್ಮಗಳ ಭಕ್ತರು ಪಾಲ್ಗೊಂಡು ಭಕ್ತಿ ಸಮರ್ಪಿಸುತ್ತಾರೆ. ಶರಣ ಕೊಟ್ಟೂರೇಶ್ವರ ತ್ರಿಕಾಲ ಜ್ಞಾನಿ, ಶಿವಯೋಗಿ, ಪವಾಡ ಪುರುಷರಾಗಿದ್ದು ಇಂತಹ ಮಹಾಮಹಿಮರ ಕೃಪಾಶೀರ್ವಾದ ಇಂದಿಗೂ ಭಕ್ತರ ಮೇಲೆ ಇದೆ.