ಅಂಗನವಾಡಿಗಳಿಗೆ ಕಳಪೆ ಆಹಾರ ಪೂರೈಕೆ : ಆರೋಪ

ಎಲ್ಲಾ ಸರಿಯಾಗಿದೆ ಎಂದು ಜಾರಿಕೊಂಡ ಸಿಡಿಪಿಓ

ಕೂಡ್ಲಿಗಿ, ಮಾ.6- ತಾಲ್ಲೂಕಿನ ಅಂಗನ ವಾಡಿಗಳಿಗೆ ಪೂರೈಸುವ ಆಹಾರ ಕಳಪೆ ಆಗಿದ್ದು ಶೇಂಗಾ, ಬೇಳೆ ಮುಂತಾದ ಆಹಾರ ಧಾನ್ಯಗಳಲ್ಲಿ ಹುಳುಗಳು ಸಹ ಇರುತ್ತವೆ. ಇಂತಹ ಆಹಾರವನ್ನು ಮಕ್ಕಳಿಗೆ, ಬಾಣಂತಿಯರಿಗೆ ನೀಡಿದರೆ ಅವರು ಎಷ್ಟು ಆರೋಗ್ಯವಂತಾಗಿರಲು ಸಾಧ್ಯ ಎಂದು, ಸಭೆಯಲ್ಲಿ ಕಳಪೆ ಶೇಂಗಾ ಹಾಗೂ ಬೇಳೆಯ ಪ್ಯಾಕೆಟ್‌ಗಳನ್ನು  ಪ್ರದರ್ಶಿಸುವ ಮೂಲಕ  ಕೂಡ್ಲಿಗಿ ತಾ.ಪಂ. ಅಧ್ಯಕ್ಷೆ ಕೆ. ನಾಗರತ್ನಮ್ಮ ಲಿಂಗಪ್ಪ ಸಿಡಿಪಿಓ ಅವರನ್ನು ತರಾಟೆಗೆ ತೆಗೆದುಕೊಂಡರು. 

ಶನಿವಾರ ತಾ.ಪಂ. ಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲ್ಲೂಕಿನ ಹೊಸಹಳ್ಳಿಯ ಆಹಾರ ಗೋದಾಮಿಗೆ ಎರಡು ಮೂರು ಸಲ ಭೇಟಿ ನೀಡಿದ್ದೇನೆ. ಪ್ರತಿ ಬಾರಿಯೂ ಕಳಪೆ ಆಹಾರ ಇರುವುದು ಕಂಡು ಬಂದಿದೆ. ಆಹಾರ ಧಾನ್ಯಗಳನ್ನು ನೋಡಿಕೊಳ್ಳುವ ಮೇಲ್ವಿಚಾರಕರು ಸಹ ಇಲ್ಲಿ ಆಗಿಂದಾಗ್ಗೆ ಗೈರು ಆಗಿರುತ್ತಾರೆ, ಹುಳು, ಕ್ರಿಮಿ ಕೀಟಗಳಿರುವ ಆಹಾರ ಧಾನ್ಯಗಳನ್ನು ಬಾಣಂತಿಯರಿಗೆ, ಮಕ್ಕಳಿಗೆ ನೀಡಿದರೆ ಅವರಿಗೆ ಇರುವ ಆರೋಗ್ಯವೂ ಹದಗೆಡುತ್ತದೆ ಎಂದು ಸಿಡಿಪಿಓ ಗೆ ಬಿಸಿ ಮುಟ್ಟಿಸಿದರು. 

ಇದಕ್ಕೆ ಸಿಡಿಪಿಓ ನಾಗನಗೌಡ ಪ್ರತಿಕ್ರಿಯಿಸಿ ಅಂಗನವಾಡಿಗೆ ಪೂರೈಸುವ ಆಹಾರ ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಲಾಗುತ್ತಿದೆ. ತಾವು ಭೇಟಿ ನೀಡಿ ಆಹಾರ ಪೂರೈಸುವ ಸಂಸ್ಥೆಯವರಿಗೆ ಈ ಬಗ್ಗೆ ಗಮನಕ್ಕೆ ತರುವುದಾಗಿ ಅಧ್ಯಕ್ಷರಿಗೆ ಉತ್ತರ ನೀಡಿದರು. 

ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಮಾತನಾಡಿ ನಾನು ಹಾಗೂ ತಾ.ಪಂ. ಅಧ್ಯಕ್ಷರು ತೋಟಗಾರಿಕೆ ಇಲಾಖೆಗೆ ಹೋದಾಗ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಕನಿಷ್ಠ ಕೂರುವಂತೆ ಸಹ ಹೇಳಲಿಲ್ಲ. ನಮಗೆ ಈ ರೀತಿ ಆದರೆ ಜನಸಾಮಾನ್ಯ ರೈತರೊಂದಿಗೆ ನೀವು ಯಾವ ರೀತಿ ವರ್ತಿಸುತ್ತೀರಿ ಎಂದು ತೋಟಗಾರಿಕೆ ಅಧಿಕಾರಿ ನೀಲಪ್ಪ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ನಾನು ಕಚೇರಿಯಲ್ಲಿ ಇದ್ದಾಗ ಈ ರೀತಿ ಆಗುತ್ತಿರಲಿಲ್ಲ, ನಮ್ಮ ಸಿಬ್ಬಂದಿ ತಪ್ಪು ಮಾಡಿದ್ದಾರೆ ಎಂದು ಪ್ರತಿಕ್ರಿಯಿಸಿದರು. 

ಎರಡು ತಿಂಗಳು ಅರಣ್ಯ ಕಾಪಾಡಿ: 2 ತಿಂಗಳು ಬೇಸಿಗೆಯಲ್ಲಿ ಅರಣ್ಯವನ್ನು ಬೆಂಕಿಯಿಂದ ಅರಣ್ಯ ಇಲಾಖೆ ಸಿಬ್ಬಂದಿ ಕಾಪಾಡುವ ಮಹತ್ವದ ಜವಾಬ್ದಾರಿ ಇದೆ ಎಂದು ಅರಣ್ಯಾಧಿಕಾರಿಗಳಿಗೆ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಸಲಹೆ ನೀಡಿದರು. ಇದಕ್ಕೆ ಉತ್ತರಿಸಿದ ತಾಲ್ಲೂಕು ಅರಣ್ಯಾಧಿಕಾರಿಗಳು ಈಗಾಗಲೇ ತಂಡಗಳನ್ನಾಗಿ ರಚಿಸಿ ಹಗಲು, ರಾತ್ರಿ ಅಲರ್ಟ್ ಆಗಿದ್ದೇವೆ. ಅರಣ್ಯವನ್ನು ಬೆಂಕಿಯಿಂದ ಸಂರಕ್ಷಣೆ ಮಾಡಲು ನಮ್ಮ ಸಿಬ್ಬಂದಿ ಜೊತೆ, ಸಾರ್ವಜನಿಕರ ಸಹಕಾರ ಸಹ ಅಷ್ಟೇ ಮುಖ್ಯವಾಗಿರುತ್ತದೆ ಎಂದು ತಿಳಿಸಿದರು. ನಂತರ ವಿವಿಧ ಇಲಾಖೆಯ ಪ್ರಗತಿ ಪರಿಶೀಲನೆ ನಡೆಯಿತು. ತಾ.ಪಂ. ಇಓ ಬಸಣ್ಣ ಹಾಗೂ ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

error: Content is protected !!