ಮೇ 10ರಿಂದ ಸಂಪೂರ್ಣ ಲಾಕ್‌ಡೌನ್‌

ಸೋಮವಾರದಿಂದ ಜನ ಸಂಚಾರ ಸ್ತಬ್ಧ, ಅಗತ್ಯ ವಸ್ತುಗಳ ಖರೀದಿಗೂ ವಾಹನ ಬಳಕೆ ನಿಷೇಧ

ಬೆಂಗಳೂರು, ಮೇ 7 – ಕೊರೊನಾ ಬಗ್ಗು ಬಡಿಯಲು ಮೇ 10ರಿಂದ ಬಿಗಿ ಲಾಕ್‌ಡೌನ್ ವಿಧಿಸಿರುವ ರಾಜ್ಯ ಸರ್ಕಾರ, ಜನ ಸಂಚಾರದ ಮೇಲೆ ಗರಿಷ್ಠ ನಿರ್ಬಂಧ ಹೇರಿದೆ. ಅಗತ್ಯ ವಸ್ತುಗಳ ಖರೀದಿಗೂ ಜನ ವಾಹನ ಬಳಸದಂತೆ ನಿಷೇಧಿಸಿದೆ.

ಸಂಪುಟ ಸಭೆ ಹಾಗೂ ಅಧಿಕಾರಿಗಳ ಜೊತೆಗಿನ ಚರ್ಚೆಯ ನಂತರ ಲಾಕ್‌ಡೌನ್ ಪ್ರಕಟಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸೋಮವಾರ ಬೆಳಿಗ್ಗೆ 6ರಿಂದ ಮೇ 24ರ ಬೆಳಿಗ್ಗೆ 6ರವರೆಗೆ ರಾಜ್ಯ ಸಂಪೂರ್ಣ ಲಾಕ್‌ಡೌನ್‌ನಲ್ಲಿರಲಿದೆ. ಅಗತ್ಯ ವಾದರೆ ಲಾಕ್‌ಡೌನ್ ವಿಸ್ತರಣೆಯಾಗಲಿದೆ ಎಂದಿದ್ದಾರೆ.

ಅಂಗಡಿ, ಮುಂಗಟ್ಟು, ಪಬ್, ಬಾರ್, ಹೋಟೆಲ್, ಕೈಗಾರಿಕಾ ಚಟುವಟಿಕೆ ನಿರ್ಬಂಧಿಸಲಾಗಿದೆ. ಆಹಾರ, ಹಾಲು, ಹಣ್ಣು, ಮಾಂಸ, ತರಕಾರಿ ಹಾಗೂ ಇತರೆ ಅಗತ್ಯ ಸಾಮಗ್ರಿಗಳ ಸರಬರಾಜು ಹಾಗೂ ಮಾರಾಟಕ್ಕೆ ಬೆಳಿಗ್ಗೆ 6ರಿಂದ 10ರವರೆಗೆ ಮಾತ್ರ ಅಂಗಡಿ ತೆರೆಯಲು ಅನುಮತಿ ಕೊಡಲಾಗಿದೆ ಎಂದವರು ಹೇಳಿದ್ದಾರೆ.

ಹಾಲಿನ ಬೂತ್‌ಗಳು ಹಾಗೂ ತರಕಾರಿ ತಳ್ಳುಗಾಡಿಗಳು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಕಾರ್ಯ ನಿರ್ವಹಿಸಲು ಅವಕಾಶ ಕೊಡಲಾಗಿದೆ. ಆಸ್ಪತ್ರೆ ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ ಮಾತ್ರ ಜನ ವಾಹನದಲ್ಲಿ ಸಂಚರಿಸಬಹುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಆಸ್ಪತ್ರೆ ಮತ್ತು ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದಂತೆ ಜನ ಹಾಗೂ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುವುದು. ರೈಲು ಹಾಗೂ ವಿಮಾನಗಳ ಪ್ರಯಾಣಕ್ಕೆ ಅವಕಾಶವಿದೆ ಎಂದೂ ಅವರು ಹೇಳಿದ್ದಾರೆ.

ಕಟ್ಟಡ ನಿರ್ಮಾಣ ಹಾಗೂ ಕೈಗಾರಿಕಾ ಸ್ಥಳದಲ್ಲೇ ಕಾರ್ಮಿಕರಿದ್ದರೆ ಮಾತ್ರ ಕಾರ್ಯನಿರ್ವಹಣೆಗೆ ಅವಕಾಶವಿದೆ. ಕಟ್ಟಡ ಹಾಗೂ ಕೈಗಾರಿಕೆಗಳಿಗೆ ಕಾರ್ಮಿಕರು ತೆರಳಲು ಅವಕಾಶವಿಲ್ಲ ಎಂದವರು ತಿಳಿಸಿದ್ದಾರೆ.

ಕಾರ್ಮಿಕರು ಬೆಂಗಳೂರು ತೊರೆದು ಹಳ್ಳಿಗಳಿಗೆ ಹೋಗದಂತೆ ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡಿರುವ ಯಡಿಯೂರಪ್ಪ, ಕಟ್ಟಡ ಕಾಮಗಾರಿ ಹಾಗೂ ಕೈಗಾರಿಕೆಗಳಿಗೆ ಅನುಮತಿ ನೀಡಲಾಗಿದೆ. ಕಾರ್ಮಿಕರು ಭಯಪಡುವ ಅಗತ್ಯವಿಲ್ಲ ಎಂದಿದ್ದಾರೆ.

ಲಾಕ್‌ಡೌನ್‌ಗಾಗಿ ಪರಿಹಾರ ನೀಡುವ ಬಗ್ಗೆ ಯಾವುದೇ ನಿರ್ಧಾರವನ್ನು ಇನ್ನೂ ತೆಗೆದುಕೊಂಡಿಲ್ಲ. ಈ ಬಗ್ಗೆ ಚರ್ಚೆ ಮಾಡು ತ್ತಿದ್ದೇವೆ ಎಂದವರು ತಿಳಿಸಿದ್ದಾರೆ.

ಪಾಸ್ ಇಲ್ಲ : ಲಾಕ್‌ಡೌನ್ ವೇಳೆ ಜನರ ಸಂಚಾರಕ್ಕೆ ಸರ್ಕಾರದಿಂದ ಪಾಸ್ ಕೊಡುವುದಿಲ್ಲ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದು, ಜನರು ಲಾಕ್‌ಡೌನ್ ವೇಳೆ ಹೊರ ಬಂದರೆ ತುರ್ತು ಸಂದರ್ಭ ಇತ್ತು ಎಂದು ಅವರೇ ಸಾಬೀತು ಪಡಿಸಿಕೊಳ್ಳಬೇಕು ಎಂದಿದ್ದಾರೆ.

ಪ್ರಸಕ್ತ ಸ್ವಲ್ಪ ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಲಾಕ್‌ಡೌನ್ ಅವಧಿಯಲ್ಲಿ ಅವುಗಳನ್ನೂ ಮುಚ್ಚಲಾಗುವುದು ಎಂದವರು ಹೇಳಿದ್ದಾರೆ.

error: Content is protected !!