ರಾಣೇಬೆನ್ನೂರು, ಮಾ.7- ಹತ್ತಾರು ತರಹದ ರಾಸಾಯನಿಕ ಗೊಬ್ಬರ ಹಾಕಿ ವಿಷಯುಕ್ತ ಬೆಳೆ ಬೆಳೆದು ಅದನ್ನೇ ಊಟ ಮಾಡಿ ಆರೋಗ್ಯ ಹಾಳುಮಾಡಿಕೊಳ್ಳುವುದು ಬೇಡ ಎಂದು ನಗರಸಭೆ ಮಾಜಿ ಸದಸ್ಯ ಮಂಜುನಾಥ ಗೌಡಶಿವಣ್ಣನವರ ಹೇಳಿದರು.
ಅವರು ಇಂದು ತಮ್ಮ ತೋಟದಲ್ಲಿ ಏರ್ಪಡಿಸಿದ್ದ ಸಾವಯವ ಬೆಳೆ ಕುರಿತು ನಡೆದ ರೈತ ತಿಳಿವಳಿಕೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ದನಕರುಗಳು ಇಲ್ಲದ ರೈತರು ಆತಂಕ ಪಡಬೇಕಿಲ್ಲ. ತಪ್ಪಲು ಮಣ್ಣು ಮುಂತಾದವುಗಳಿಂದ ತಯಾರಿಸಿದ ಗೊಬ್ಬರ ಹಾಕಿ ಉತ್ತಮ ಆಹಾರ ಧಾನ್ಯಗಳನ್ನು ಬೆಳೆಯಬಹುದು. ಶ್ರಮ ಜೀವಿ ರೈತ ಎಂದೆಂದಿಗೂ ದೇಶದ ಬೆನ್ನೆಲುಬು. ಅವನು ಆರೋಗ್ಯವಂತನಾಗಿರಬೇಕಾದರೆ ಸಾವಯವ ಬೇಸಾಯ ಅವಶ್ಯವೆಂದು ಮಂಜುನಾಥ ಹೇಳಿದರು.
ಶಿವಮೊಗ್ಗದ ನೆಟ್‌ಸರ್ಫ್ ಕಮ್ಯೂನಿಕೇಶನ್ ಸದಸ್ಯರಾದ ನಾಗರಾಜ ಹೊನ್ನಾಳಿ, ಎಂ.ಎಸ್. ಮಂಜುನಾಥ, ಮಲ್ಲಿಕಾರ್ಜುನ ಸ್ವಾಮಿ ಹಾಗೂ ವಿಜಯಕುಮಾರ ಮಾತನಾಡಿ, ಪ್ರಾಯೋಗಿಕವಾಗಿ ಒಂದೆರಡು ವರ್ಷ ಸಾವಯವ ಬೇಸಾಯದಲ್ಲಿ ತೊಡಗಿಕೊಂಡರೆ ಅಲ್ಲಿಂದ ಹೊರಬರಲು ಸಾಧ್ಯವಾಗಲಾರದು ಎಂದು ಖಚಿತತೆ ವ್ಯಕ್ತಪಡಿಸಿದರು.