ಲಸಿಕಾ ಕೇಂದ್ರಗಳಲ್ಲಿ ರಶ್ಶೋ ರಶ್…

ದಾವಣಗೆರೆ, ಮೇ 5 – ಶುಕ್ರವಾರ ಸ್ಥಗಿತಗೊಂಡಿದ್ದ ಕೊರೊನಾ ಲಸಿಕೆ ವಿತರಣೆ ಬುಧವಾರ ಆರಂಭವಾಗಿತ್ತು. ಏರುತ್ತಿರುವ ಕೊರೊನಾ ಸೋಂಕುಗಳ ನಡುವೆ, ಲಸಿಕೆಗೆ ಇನ್ನಿಲ್ಲದ ಬೇಡಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಜನರು, ಅದರಲ್ಲೂ ವಯೋವೃದ್ಧರು ದೊಡ್ಡ ಸಂಖ್ಯೆಯಲ್ಲಿ ಲಸಿಕಾ ಕೇಂದ್ರಗಳ ಎದುರು ಜಮಾಯಿಸಿದ್ದರು.

ನಗರದ ಎಂಸಿಸಿ ಎ ಬ್ಲಾಕ್‌ನಲ್ಲಿರುವ ಸೂಪರ್‌ಮಾರ್ಕೆಟ್‌ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನರು ಬೆಳಿಗ್ಗೆ 6-7 ಗಂಟೆಯಿಂದಲೇ ಸರದಿಯಲ್ಲಿ ನಿಂತಿದ್ದರು.  ಎರಡನೇ ಕಂತಿನ ಡೋಸ್‌ ಪಡೆಯುವವರಿಗೆ ಮಾತ್ರ ಇಂದು ಲಸಿಕೆ ನೀಡಲಾಗುವುದು ಎಂದು ತಿಳಿಸಲಾಗಿತ್ತು. ಆದರೂ, ಮೊದಲ ಬಾರಿಗೆ ಲಸಿಕೆ ಪಡೆಯುವವರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಆರೋಗ್ಯ ಕೇಂದ್ರದ ವೈದ್ಯರಾದ ಡಾ. ನಟರಾಜ್, ಸರ್ಕಾರದ ಸೂಚನೆಯಿಂದ 45 ವರ್ಷ ಮೀರಿದ ಹಾಗೂ ಎರಡನೇ ಕಂತಿನ ಲಸಿಕೆಯವರಿಗೆ ಮಾತ್ರ ಕೊಡಲಾಗುವುದು. ಉಳಿದರೆ ಮಾತ್ರ ಮೊದಲ ಕಂತಿನವರಿಗೆ ಕೊಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಪಾಲಿಕೆ ಪ್ರತಿಪಕ್ಷದ ನಾಯಕ ಎ. ನಾಗರಾಜ್, ಆರೋಗ್ಯ ಕೇಂದ್ರಕ್ಕೆ 100 ಲಸಿಕೆಗಳನ್ನು ನೀಡಲಾಗಿತ್ತು. ಜಿಲ್ಲಾ ಆರೋಗ್ಯಾಧಿಕಾರಿಗಳ ಜೊತೆ ಮಾತನಾಡಿದ ನಂತರ 200 ಲಸಿಕೆಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಕಾಣದ ಕೊರೊನಾ ಮುನ್ನೆಚ್ಚರಿಕೆ : ಲಸಿಕಾ ಕೇಂದ್ರದ ಮುಂದೆ ನೂರಾರು ಜನರು ಗುಂಪಾಗಿ ನಿಂತಿದ್ದರು. ಪೊಲೀಸರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದ್ದೂ ಪ್ರಯೋಜನಕ್ಕೆ ಬರಲಿಲ್ಲ. 

ಆನ್‌ಲೈನ್‌ಗೆ ಆದ್ಯತೆ ಇಲ್ಲ : ಗುಂಪು ಸೇರುವಿಕೆ ತಪ್ಪಿಸಲು ಆನ್‌ಲೈನ್‌ ಮೂಲಕ ಲಸಿಕೆಗಾಗಿ ನೋಂದಣಿ ಮಾಡಬೇಕೆಂದು ತಿಳಿಸಲಾಗಿತ್ತು. ಆದರೆ, ಆನ್‌ಲೈನ್‌ನಲ್ಲಿ ನೋಂದಣಿ ಮಾಡಿದವರನ್ನು ಗುರುತಿಸಲು ಸಾಧ್ಯವಾಗದಷ್ಟು ಜನಜಂಗುಳಿ ಸೇರಿತ್ತು. ಇದರಿಂದಾಗಿ ವೈದ್ಯಕೀಯ ಸಿಬ್ಬಂದಿ ಅಸಹಾಯಕರಾಗಿದ್ದರು.

ಕೂಪನ್ ವಿತರಣೆ : ಸಿ.ಜಿ. ಆಸ್ಪತ್ರೆಯಲ್ಲಿನ ಲಸಿಕಾ ಕೇಂದ್ರದಲ್ಲಿ ಮಾತ್ರ ಗುಂಪುಗೂಡುವಿಕೆಯನ್ನು ತಪ್ಪಿಸಲಾಗಿತ್ತು. ಇಲ್ಲಿನ ವೈದ್ಯ ಡಾ. ಸಿದ್ದರಾಮೇಶ್ವರ ಅವರು ಮೊದಲನೆ ಡೋಸ್ ಲಸಿಕೆ ಪಡೆಯುವವರಿಗೆ ಅವಕಾಶವಿಲ್ಲ ಎಂದು ಅಂಥವರನ್ನು ವಾಪಸ್ ಕಳಿಸಿದ್ದರು.

ಕೂಪನ್ ವಿತರಿಸುವ ಮೂಲಕ ಲಸಿಕೆ ಇರುವಷ್ಟು ಜನರು ಮಾತ್ರ ಸರದಿಯಲ್ಲಿರುವಂತೆ ತಿಳಿಸಿದ್ದರು. ಈ ಕೇಂದ್ರದಲ್ಲಿ 20 ಮುಂಚೂಣಿ ಕಾರ್ಯಕರ್ತರು ಹಾಗೂ 280 ಸಾರ್ವಜನಿಕರಿಗೆ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿತ್ತು.

ಬೆಳಿಗ್ಗೆ 8 ಗಂಟೆಯಿಂದಲೇ ಜನರು ಇಲ್ಲಿ ಸೇರಿದ್ದರು. ನಾವು 9 ಗಂಟೆಗೆ ಬಂದು ಜನರಿಗೆ ಕೂಪನ್‌ಗಳನ್ನು ವಿತರಿಸಿದ್ದೆವು. ಇದರಿಂದಾಗಿ ಜನಸಂದಣಿ ಕಡಿಮೆಯಾಗಿದೆ. ಜಿಲ್ಲೆಯಲ್ಲಿ 15 ಸಾವಿರಕ್ಕೂ  ಹೆಚ್ಚು ಜನರಿಗೆ ಎರಡನೇ ಡೋಸ್ ಲಸಿಕೆ ಬೇಕಾಗಿದೆ. ಹೀಗಾಗಿ ಎರಡನೇ ಡೋಸ್‌ನವರಿಗೆ ಮಾತ್ರ ಲಸಿಕೆ ಕೊಡಲಾಗುತ್ತಿದೆ ಎಂದು ಡಾ. ಸಿದ್ದರಾಮೇಶ್ವರ್ ತಿಳಿಸಿದ್ದಾರೆ.

error: Content is protected !!