ದಾವಣಗೆರೆ, ಮೇ 5- ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಕೋವಿಡ್ ಕೇರ್ ಸೆಂಟರ್ ತೆರೆಯಲು ನಗರದ ಇಎಸ್ಐ ಆಸ್ಪತ್ರೆಯಲ್ಲಿ 80 ಬೆಡ್ ವ್ಯವಸ್ಥೆಯುಳ್ಳ ಕೋವಿಡ್ ಸೆಂಟರ್ ತೆರೆಯುವ ಬಗ್ಗೆ ಪರಿಶೀಲಿಸಿ, ವೈದ್ಯರುಗಳೊಂದಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಚರ್ಚೆ ನಡೆಸಿದರು.
ಬುಧವಾರ ಇಎಸ್ಐ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಇಎಸ್ಐ ಆಸ್ಪತ್ರೆಯಲ್ಲಿ 40 ಆಕ್ಸಿಜನ್ ಮತ್ತು 40 ಐಸೋಲೇಷನ್ ಬೆಡ್ಗಳು ಸೇರಿದಂತೆ ಒಟ್ಟು 80 ಬೆಡ್ಗಳ ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಲು ಬೇಕಾದ ಅಗತ್ಯತೆಗಳ ಬಗ್ಗೆ ಅಲ್ಲಿನ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿದರು.
ಈ ವೇಳೆ ಇಎಸ್ಐ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಬಸವನಗೌಡ ಮಾತನಾಡಿ, ಆಸ್ಪತ್ರೆಯಲ್ಲಿ ಆಕ್ಸಿಜನ್ ಮತ್ತು ವೆಂಟಿಲೇಟರ್ ವ್ಯವಸ್ಥೆಗೆ 19 ಪಾಯಿಂಟ್ಗಳು ಇದ್ದು, ಅದರಲ್ಲಿ 2 ಕಡೆ ಲೀಕೇಜ್ ಆಗುತ್ತಿದೆ. ಆಸ್ಪತ್ರೆಯಲ್ಲಿ ಒಬ್ಬ ಟೆಕ್ನೀಷಿಯನ್ ಇದ್ದು, ಇನ್ನೊಬ್ಬರ ಅಗತ್ಯವಿದೆ ಹಾಗೂ ಬೆಡ್, ಸಿಲಿಂಡರ್ ವ್ಯವಸ್ಥೆ, ಫ್ಯಾನ್ ಸೇರಿದಂತೆ ಮೂಲ ಸೌಕರ್ಯಗಳು ಮತ್ತು ಮಾನವ ಸಂಪನ್ಮೂಲ ಕೊರತೆ ಇದ್ದು, ಸಾಧ್ಯವಾದಷ್ಟು ಜಿಲ್ಲಾಡಳಿತಕ್ಕೆ ಸಹಾಯ ಮಾಡಲು ತಾವು ಬದ್ಧರಿದ್ದೇವೆ ಎಂದರು.
ಅರಿವಳಿಕೆ ತಜ್ಞೆ ಡಾ.ನಂದಿನಿ ಮಾತನಾಡಿ, ಆಸ್ಪತ್ರೆಯಲ್ಲಿ ಐಸಿಯು ಇಲ್ಲವಾದ್ದರಿಂದ ಇಲ್ಲಿರುವ ಸಿಬ್ಬಂದಿಗಳಿಗೆ ಐಸಿಯು ನಿರ್ವ ಹಣೆಯ ಅನುಭವ ಇಲ್ಲ. ಅವರಿಗೆ ಒಂದು ವಾರದ ಮಟ್ಟಿಗೆ ತರಬೇತಿ ಕೊಟ್ಟಲ್ಲಿ ಅನು ಕೂಲವಾಗುತ್ತದೆ. ಈಗಾಗಲೇ ಆಸ್ಪತ್ರೆಯಲ್ಲಿ 19 ಬೆಡ್ಗಳಿಗೆ ಆಕ್ಸಿಜನ್ ವ್ಯವಸ್ಥೆ ಇದೆ. 11 ಜಂಬೋ ಸಿಲಿಂಡರ್ಗಳು, 26 ಸಣ್ಣ ಸಿಲಿಂಡರ್ಗಳು ಹಾಗೂ 15 ಔಟ್ಲೆಟ್ಗಳು ಬೇಕಾಗುತ್ತದೆ ಎಂದು ತಿಳಿಸಿದರು.
ಎಸ್ಎಸ್ ಆಸ್ಪತ್ರೆಗೆ ಡಿಸಿ ಅನಿರೀಕ್ಷಿತ ಭೇಟಿ
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಇಎಸ್ಐ ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿದ ಬಳಿಕ ಅನಿರೀಕ್ಷಿತವಾಗಿ ಎಸ್.ಎಸ್.ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ನಂತರ ಆಸ್ಪತ್ರೆಯ ಎಂಐಸಿಯು, ಐಸೋಲೇಷನ್ ಹಾಗೂ ಐಸಿಯು ವಾರ್ಡ್ಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ಕುರಿತು ವೈದ್ಯರ ಬಳಿ ಮಾಹಿತಿ ಪಡೆದುಕೊಂಡರು.
ಎಸ್.ಎಸ್.ಆಸ್ಪತ್ರೆಯು ಕೋವಿಡ್ ಸೋಂಕಿತ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದು, ಹೆಚ್ಚು ಸೋಂಕಿತರು ಗುಣಮುಖರಾಗುತ್ತಿದ್ದಾರೆ. ಗುಣಮುಖರಾದ ರೋಗಿಗಳನ್ನು ಆದಷ್ಟು ಬೇಗ ಬಿಡುಗೊಡೆಗೊಳಿಸಿ, ಅಗತ್ಯವಿರುವ ಅಥವಾ ತುರ್ತು ಇರುವ ರೋಗಿಗಳಿಗೆ ಐಸಿಯು ಬೆಡ್ಗಳನ್ನು ನೀಡಬೇಕು. ಇಂದು ಐಸಿಎಂಆರ್ ಪೋರ್ಟಲ್ನಲ್ಲಿ 700 ಕ್ಕೂ ಹೆಚ್ಚು ಸೋಂಕಿತರು ಬರುವ ನಿರೀಕ್ಷೆ ಇದೆ. ಹಾಗಾಗಿ ಬೆಡ್ ವಿಸ್ತರಣೆ ಅನಿವಾರ್ಯವಾಗಿದ್ದು, ಆಸ್ಪತ್ರೆಯಲ್ಲಿ ಬೆಡ್, ಆಕ್ಸಿಜನ್ ಸೇರಿದಂತೆ ಎಲ್ಲಾ ಸವಲತ್ತುಗಳ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಎಸ್.ಎಸ್.ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಸಾದ್, ವೈದ್ಯಕೀಯ ಅಧೀಕ್ಷಕ ಡಾ.ಕಾಳಪ್ಪನವರ್ ಸೇರಿದಂತೆ ಮತ್ತಿತರರು ಇದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಆಸ್ಪತ್ರೆಗೆ 100 ಜಂಬೋ ಸಿಲಿಂಡರ್ ವ್ಯವಸ್ಥೆ ಮಾಡುವ ಜವಾಬ್ದಾರಿಯನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ವಹಿಸ ಲಾಗುವುದು. ಆಸ್ಪತ್ರೆಗೆ ಬೇಕಾದ 70 ಮಂಚಗಳನ್ನು ಹೊರಗಡೆಯಿಂದ ತರಿಸುತ್ತೇವೆ ಹಾಗೂ ಕಾಟನ್ ಬೆಡ್, ಫ್ಯಾನ್, ಐವಿ ಡ್ರಿಪ್, ಆಕ್ಸಿಜನ್ ಸಿಲಿಂಡರ್, ಬಿಪಿ ಆಪರೇಟರ್ಸ್ಗಳನ್ನು ದಾನಿಗಳಿಂದ ಪೂರೈಸುತ್ತೇವೆ. ಅಲ್ಲದೇ ಆಸ್ಪತ್ರೆಗೆ ಬೇಕಾದ ಟ್ರಾಲಿಗಳು, ವ್ಹೀಲ್ಚೇರ್ಗಳು, ಐವಿ ಸ್ಟ್ಯಾಂಡ್ ಇತರೆ ಸವಲತ್ತುಗಳ ಕುರಿತು ಮಾಹಿತಿ ನೀಡಿದರೆ ಜಿಲ್ಲಾಡಳಿತದಿಂದ ಪೂರೈಸುತ್ತೇವೆ ಎಂದರು.
ಸಿಜಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸಂಜಯ್ ಮಾತನಾಡಿ, ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ವ್ಯವಸ್ಥೆ ಇಲ್ಲ. ಎಕ್ಸ್ರೇ ಯೂನಿಟ್ ಇದೆ. ಆದರೆ, ಫಿಲ್ಮ್ಗಳು ಇಲ್ಲ. ಆದ್ದರಿಂದ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರನ್ನು ಮೊದಲ ಹಂತದ ಚಿಕಿತ್ಸೆ ಪೂರೈಸಿದ ಬಳಿಕ ಚೇತರಿಸಿಕೊಂಡ ರೋಗಿಗಳನ್ನು ಈ ಆಸ್ಪತ್ರೆಗೆ ವರ್ಗಾವಣೆ ಮಾಡಬಹುದು ಎಂದರು.
ನಂತರ ಜಿಲ್ಲಾಧಿಕಾರಿಗಳು ಮಾತನಾಡಿ, ಕೋವಿಡ್ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಮತ್ತು ಡಿ ಗ್ರೂಪ್ ನೌಕರ ವರ್ಗದವರು ಸೇರಿ ಒಟ್ಟು 3 ತಂಡಗಳನ್ನು ರಚಿಸಿಕೊಳ್ಳಬೇಕು. ಪ್ರತಿ ತಂಡಕ್ಕೂ 3 ವೈದ್ಯರು, 3 ಸ್ಟಾಫ್ ನರ್ಸ್, 3 ಡಿ-ಗ್ರೂಪ್ ಸೇರಿದಂತೆ 9 ಜನರ ತಂಡ ರಚಿಸಬೇಕೆಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಿಜಯ್ ಮಹಾಂತೇಶ್ ದಾನಮ್ಮನವರ್, ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ನಾಯಕ್, ಆರ್.ಎಂ.ಒ ಡಾ.ಸಂಧ್ಯಾರಾಣಿ, ಹಿರಿಯ ತಜ್ಞ ಡಾ.ಅಣ್ಣಪ್ಪಸ್ವಾಮಿ, ಉಪ ವೈದ್ಯಕೀಯ ಅಧೀಕ್ಷಕ ಡಾ.ಚಿದಾನಂದ್, ಡಾ.ನಂದಿನಿ, ಡಾ.ಚಂದನ್, ಡಾ.ಪ್ರಸನ್ನ, ಡಾ.ಅನಿತರಾಣಿ ಸೇರಿದಂತೆ ಹಿರಿಯ ತಜ್ಞರು ಉಪಸ್ಥಿತರಿದ್ದರು.