ಕಳಚಿದ ಪ್ರೀತಿ ಲಕ್ಷ್ಮೀನಾರಾಯಣ ಭಟ್ಟರು

ಉತ್ತರ ಕರ್ನಾಟಕದ ರೊಟ್ಟಿ ತಿನ್ನಲು ಬಲು ಆಸೆ. ಆದರೆ ಹೊಟ್ಟೆಗೆ ತಡೆದುಕೊಳ್ಳುವ ಶಕ್ತಿ ಇಲ್ಲ. ಅದಾಗ್ಯೂ ಅಭ್ಯಾಸ ಮಾಡಿಕೊಳ್ಳ ಬೇಕು ಅಂತಾ ಧಾರವಾಡಕ್ಕೆ ಹೋದಾಗ ಖಾನಾವಳಿಯಲ್ಲಿ ರೊಟ್ಟಿ ತಿಂದೆ. ಆದರೆ ಪಲ್ಯ ಮತ್ತು ಸಾರಿನ ಖಾರಕ್ಕೆ ಮೂಗು ಸೋರಲು ಶುರುವಾಯ್ತು. ಮೈಯ್ಯಲ್ಲಿ ನೀರಿಳಿಯೋದನ್ನ ನೋಡಿ ನನಗೆ ನಾನೇ ಬೆಚ್ಚಿ ಬಿದ್ದಿದ್ದೆ. ಅದೇನೆ ಇರಲಿ, ರೊಟ್ಟಿಯಲ್ಲಿರುವ ಸ್ವಾದ, ರುಚಿ, ವಾಸನೆ ಮತ್ತು ಅದರ ಬಗ್ಗೆ ಉತ್ತರ ಕರ್ನಾಟಕ ಭಾಗದ ಜನರಿಗೆ ಇರುವ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಅದೇ ರೊಟ್ಟಿಯ ತಾಕತ್ತು. ಅದೇ ಉತ್ತರ ಕರ್ನಾಟಕ ಭಾಗದ ಜನರಿಗಿರುವ ಶಕ್ತಿ….

ಸುಮಾರು ಏಳೆಂಟು ವರ್ಷಗಳ ಹಿಂದೆ ಬೆಂ ಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮಾತಿಗೆ ಸಿಕ್ಕಿದ್ದ ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಹೇಳಿದ ಮಾತುಗಳಿವು. 

ಊಟದ ಪ್ರಮಾಣ ತೀರಾ ಕಮ್ಮಿ. ಆದರೆ, ಎಲ್ಲಾ ತಿನಿಸುಗಳ ಬಗ್ಗೆ, ಅವುಗಳ ರುಚಿ ತಿಳಿಯುವ ಬಗ್ಗೆ ಮತ್ತು ಅದರ ಹಿನ್ನೆಲೆಯ ಅರಿವಿನ ಬಗ್ಗೆ ತೀರಾ ಕುತೂಹಲ. ಅದರ ಮೂಲವನ್ನು ಹುಡುಕಿ ಅದಕ್ಕೊಂದು ಕತೆ ಕಟ್ಟಿ ಹೇಳುವ ಸ್ವಭಾವ ಭಟ್ಟರದು. 

ಕುತೂಹಲ ತಾಳಲಾರದೆ ಒಮ್ಮೆ ಈ ವಿಚಾ ರವಾಗಿ ಕೇಳಿದ್ದೆ. ಅದಕ್ಕವರು, ‘ಇಲ್ಲಿ ಉಂಡಿದ್ದು, ತಿಂದಿದ್ದು, ಹಣ ಕೊಟ್ಟಿದ್ದು ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಆದರೆ ಅದರ ರುಚಿ ನಮ್ಮನ್ನು ನೆನಪಿಡುವಂತೆ ಮಾಡುತ್ತದೆ. ಹೋಟೆಲ್ ಹೆಸರು ಹೇಳುತ್ತೇವೆ. ಆದರೆ ಅಲ್ಲಿ ಅಡುಗೆ ಮಾಡಿದವನನ್ನು ಯಾರೂ ನೆನಪಿಸಿಕೊಳ್ಳುವು ದಿಲ್ಲ. ಚೆನ್ನಾಗಿದೆ ಎಂದು ಹೇಳಿದರೆ ನಾವು ಕಳೆ ದುಕೊಳ್ಳುವುದಿಲ್ಲ. ಇದಕ್ಕಿಂತ ಹೆಚ್ಚಾಗಿ ನನ್ನ ಎಷ್ಟೋ ಕವಿತೆಗಳಿಗೆ ಅವರೇ ಪ್ರೇರಣೆಯಾಗಿ ದ್ದಾರೆ. ಅವರ ನಿರ್ಮಲವಾದ, ನಿಷ್ಕಲ್ಮಶ ಪ್ರೀತಿಯ ಒಂದೆರಡು ಮಾತುಗಳಲ್ಲಿರುವ ರುಚಿ ನನಗೆ ಪ್ರೇರಣೆಯಾಗಿದೆ. ಹಲವು ಬಾರಿ ಕವನ ಹುಟ್ಟಿದ್ದೇ ಅಲ್ಲಿ ಎಂದರೂ ತಪ್ಪಿಲ್ಲ’ ಎಂದಿದ್ದರು.

ಭಟ್ಟರು ಸ್ವಭಾವತಃ ಸರಳ ವ್ಯಕ್ತಿ. ಸಜ್ಜನಿಕೆ, ಪ್ರೀತಿ ತುಂಬಿದ ಮಾತುಗಳಿಗೆ ಅವರಲ್ಲಿ ಕೊರತೆ ಇಲ್ಲ. ಆಪ್ತರು, ಶಿಷ್ಯರಿಗೆ ಎನ್‍ಎಸ್‍ಎಲ್ ಎಂದೇ ಚಿರಪರಿಚಿತರು. ಶಿಷ್ಯರ ಮೇಲೆ ಅಪಾರ ಪ್ರೀತಿ, ಸ್ನೇಹಿತರ ಬಗ್ಗೆ ಒಲವು. ಓದುವುದು, ಆತ್ಮೀಯರ ಜೊತೆ ತಾಸುಗಟ್ಟಲೆ ಹರಟೆ ಅವರಲ್ಲಿದ್ದ ಗುಣ ಗಳು. ಯಾವುದೇ ವಿಚಾರವಿದ್ದರೂ ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸಿ, ಅವಲೋಕಿಸುವ ಗುಣ ಅವರಲ್ಲಿತ್ತು. ಯಾರನ್ನೂ ನೋಯಿಸದ, ಕಾಯಿಸದ, ಬೇಸರಿಸದ ಸ್ವಭಾವ ಅವರದು.

‘ನಾನು ಕೆಲವೊಂದು ವಿಚಾರದಲ್ಲಿ ಬಹಳ ಜುಗ್ಗ. ಖರ್ಚು ಮಾಡುವುದರಲ್ಲಿ ಅಷ್ಟೇ ಅಲ್ಲ, ಬರವಣಿಗೆಯಲ್ಲೂ ಅಷ್ಟೇ. ಅನಗತ್ಯ ಖರ್ಚು ಮಾಡಲು ಇಷ್ಟವಾಗಲ್ಲ. ಹೋಟೆಲ್ ದೊಡ್ಡದಿ ದ್ದರೂ, ಅಷ್ಟೇ ಚಿಕ್ಕದಿದ್ದರೂ ಅಷ್ಟೆ. ಒಂದು ದಿನದ ವಿಶ್ರಾಂತಿಗಷ್ಟೇ ತಾಣ. ಅದರಲ್ಲಿ ಪ್ರತಿಷ್ಠೆ ತೋರುವುದರಲ್ಲಿ ಅರ್ಥವಿರಲ್ಲ. ವ್ಯಕ್ತಿಗೆ ವ್ಯಕ್ತಿತ್ವವೇ ಘನತೆ, ಗೌರವ ತಂದು ಕೊಡುತ್ತದೆ ಹೊರತು ಪ್ರತಿಷ್ಠೆ ಅಲ್ಲ. ಪ್ರತಿಭೆಯನ್ನು ಯಾರೂ ಮುಚ್ಚಿಡ ಲಾಗಲೀ, ಹತ್ತಿಕ್ಕುವುದಕ್ಕಾಗಲೀ ಆಗಲ್ಲ. ಆದರೆ, ವ್ಯಕ್ತಿತ್ವ ರೂಪಿಸಿಕೊಳ್ಳುವುದು ಕಷ್ಟ. ಮಾನ ವೀಯ ಮೌಲ್ಯ, ಸಾಮಾಜಿಕ ಪ್ರಜ್ಞೆ, ಮನುಷ್ಯ ಸಹಜ ಪ್ರೀತಿಗಳಿದ್ದರೆ ಬರೆಯುವ ಸಾಹಿತ್ಯ, ಮಾಡುವ ಕೆಲಸ ಮನ್ನಣೆ ಪಡೆಯುತ್ತವೆ’ ಎನ್ನುತ್ತಿದ್ದ ಭಟ್ಟರು, ಎಂದಿಗೂ ಯಾವುದೇ ವಿಚಾರದಲ್ಲೂ ಖರ್ಚಿಗೆ ಹಿಂದೇಟು ಹಾಕುತ್ತಿ ದ್ದರು. ಬಟ್ಟೆ ಖರೀದಿಸುವಾಗಲೂ ತಮ್ಮ ನಿಯಮ ಬಿಟ್ಟು ಅಲುಗಾಡಲ್ಲ. ಖಾದಿ, ಹತ್ತಿ ಬಟ್ಟೆಯ ಜುಬ್ಬಾ, ಪ್ಯಾಂಟ್ ಅವರ ಆಯ್ಕೆಗಳಾಗಿದ್ದವು.

ಭಟ್ಟರು ಹುಟ್ಟಿದ್ದು (1936ರ ಅಕ್ಟೋಬರ್ 29ರಂದು), ಬೆಳೆದಿದ್ದು, ಇಂಟರ್‍ಮೀಡಿ ಯೇಟ್ ವರೆಗೆ ಓದಿದ್ದು ಶಿವಮೊಗ್ಗದಲ್ಲಿ. ಮುಂದೆ ಮೈಸೂರಿನಲ್ಲಿ ಪದವಿ, ಸ್ನಾತಕೋತ್ತರ ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಪಡೆದು, ಅಲ್ಲಿಯೇ ಪಿಎಚ್.ಡಿ. ಪದವಿ ಪಡೆದಿದ್ದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಆರಂಭಿಸಿ, ನಿವೃತ್ತರಾಗಿದ್ದಾರೆ. ತೀ.ನಂ. ಶ್ರೀಕಂಠಯ್ಯ, ಶ್ರೀಕಂಠಶಾಸ್ತ್ರಿ, ಡಿ.ಎಲ್.ಗುಂಡಪ್ಪ, ಕುವೆಂಪು ಅವರ ಒಡನಾಟದಲ್ಲಿ ಬೆಳೆದಿದ್ದಾರೆ. ಬೇಂದ್ರೆ ಅಜ್ಜನ ಬಗ್ಗೆ ವಿಶೇಷ ಗೌರವ.

ಭಾವಗೀತೆ ಅವರ ಅತ್ಯಂತ ಪ್ರಿಯವಾದ ಸಾಹಿತ್ಯ ಪ್ರಕಾರ. ಶಿಶು ಸಾಹಿತ್ಯ, ಅನುವಾದ ಕ್ಷೇ ದಲ್ಲೂ ಸಾಕಷ್ಟು ಕೆಲಸ ಮಾಡಿದ್ದಾರೆ. ಕನ್ನಡ ದಷ್ಟೇ ಇಂಗ್ಲಿಷ್, ಸಂಸ್ಕೃತದಲ್ಲೂ ಪಾಂಡಿತ್ಯ ಪಡೆದಿದ್ದರು. ಮುದ್ರಾಮಂಜೂಷ, ಜಗನ್ನಾಥ ವಿಜಯ ಕಾವ್ಯಗಳನ್ನು ಮಕ್ಕಳಿಗಾಗಿ ರಚಿಸಿದ್ದರೆ ಸುನೀತ, ಶೇಕ್ಸ್‍ಪಿಯರ್, ಈಲಿಯಟ್, ಮೃಚ್ಛಕಟಿಕ,.. ಅವರ ಅನುವಾದಿತ ಕೃತಿಗಳು. ಮಾಧುರಿ, ಮಂದಾರ, ಭಾವಸಂಗಮ, ಬಾರೋ ವಸಂತ, ಬಂದೇ ಬರತಾವ ಕಾಲ, ಅರುಣ ಗೀತೆ, ಕವಿತಾ,.. ಇವು ಅವರ ಭಾವಗೀತೆಗಳ ಜನಪ್ರಿಯ ಸಂಕಲನಗಳು. ಚಲನಚಿತ್ರ, ಆಕಾಶವಾಗಿ, ಟೆಲಿವಿಷನ್‍ಗಳಿಗೂ ಸಾಹಿತ್ಯ ರಚಿಸಿಕೊಟ್ಟಿದ್ದಾರೆ. ನೂರಾರು ರೇಡಿಯೋ ಭಾಷಣ ಮಾಡಿದ್ದಾರೆ.

ರಾಜ್ಯೋತ್ಸವ, ಮಾಸ್ತಿ, ವರ್ಧಮಾನ, ಅನಕೃ, ಸಾಹಿತ್ಯ ಅಕಾಡೆಮಿ, ಬಾಲವಿಕಾಸ ಅಕಾ ಡೆಮಿ, ಶಿವರಾಮ ಕಾರಂತ ಪ್ರಶಸ್ತಿಗಳು ಅವರ ಸಾಹಿತ್ಯ ಸಾಧನೆಗೆ ಸಂದಿರುವ ಪ್ರಮುಖ ಗೌರ ವಗಳು. ಇವಲ್ಲದೆ ವಿವಿಧ ಸಂಘ – ಸಂಸ್ಥೆಗಳು, ಸಂಘಟನೆಗಳು ನೀಡಿದ ಪುರಸ್ಕಾರ ಹಲವು.

ಲಕ್ಷ್ಮಿನಾರಾಯಣ ಭಟ್ಟರು ಈಗ ನಮ್ಮೊಂದಿಗಿಲ್ಲ. ಆದರೆ ಅವರ ಒಡನಾಟ, ಪ್ರೀತಿ, ಆತ್ಮೀಯತೆಗಳನ್ನು ಎಂದಿಗೂ ಮರೆಯಲಾಗದು. ಹಿರಿಯರಿರಲಿ, ಮಕ್ಕಳಿರಲಿ, ಪರಿಚಿತರಿರಲಿ, ಇರದಿರಲಿ ಎಲ್ಲರ ಜೊತೆಗೂ ಒಡನಾಡಿ, ಭಾವನಾತ್ಮಕವಾಗಿ ಸ್ಪಂದಿಸುವ ಅಪ್ಯಾಯ ಪ್ರೀತಿಯ ವ್ಯಕ್ತಿತ್ವ ಸದಾ ಕಾಡುತ್ತಲೇ ಇರುತ್ತದೆ. ಅವರು ಬರೆದ ‘ಎಲ್ಲಿ ಜಾರಿತೋ ಮನವು…’, ‘ನನ್ನ ಇನಿಯನ ನೆಲೆಯ…’, ‘ಯಾಕೆ ಕಾಡುತೀ ಸುಮ್ಮನೆ…’, ‘ನಿನ್ನ ನೀತಿ ಅದಾವ ದೇವರಿಗೆ…’, ‘ನೀ ಸಿಗದೆ ಬಾಳೊಂದು ಬಾಳೆ..’, ‘ಮಲಗೋ ಮಲಗೆನ್ನ ಮರಿಯೇ..’, ‘ಹೆಂಡತಿ ಅಂದರೆ ಖಂಡಿತಾ ಅಲ್ಲ..’, ‘ಕಾಗದದ ದೋಣಿಗಳು..’ ಮೊದಲಾದ ಹಾಡುಗಳ ಮತ್ತೆ ಮತ್ತೆ ಮೆಲುಕು ಹಾಕುವಂತೆ ಮಾಡುತ್ತಿರುತ್ತವೆ.


 ಶಿವಕುಮಾರ ಕಣಸೋಗಿ
ಅಧ್ಯಕ್ಷರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗ
ದಾವಣಗೆರೆ ವಿಶ್ವವಿದ್ಯಾನಿಲಯ, ದಾವಣಗೆರೆ.
[email protected]

 

error: Content is protected !!