ಹರಿಹರ, ಮೇ 4- ಕೊರೊನಾ ತಡೆಗೆ ಸರ್ಕಾರ ಸಂತೆ, ಜಾತ್ರೆ, ಸೇರಿದಂತೆ ಹೆಚ್ಚಾಗಿ ಜನರು ಸೇರುವಂತಹ ಸ್ಥಳಗಳಿಗೆ ನಿರ್ಬಂಧಗಳನ್ನು ಹಾಕಿದ್ದು, ಇದ್ಯಾವುದೂ ಲೆಕ್ಕಕ್ಕೇ ಇಲ್ಲ ಎನ್ನುವಂತೆ ವ್ಯಾಪಾರಿಗಳು ಎಂದಿನಂತೆ ಶಿವಮೊಗ್ಗ ರಸ್ತೆಯ ಸಂತೆ ಆವರಣದಲ್ಲಿ ವ್ಯಾಪಾರ, ವಹಿವಾಟು ಆರಂಭಿಸಿದ್ದು, ಸಾರ್ವಜನಿಕರು ಖರೀದಿಗೆ ಮುಂದಾದ ಸನ್ನಿವೇಶ ಹರಿಹರ ನಗರದಲ್ಲಿ ಇಂದು ಕಂಡು ಬಂತು.
ಕೊರೊನಾ ನಿಯಂತ್ರಿಸಲು ಸರ್ಕಾರದ ಆದೇಶವನ್ನು ಸಾರ್ವಜನಿಕರು ಮತ್ತು ಅಧಿಕಾರಿ ವರ್ಗದವರು ಚಾಚೂ ತಪ್ಪದೇ ಪಾಲನೆ ಮಾಡಿದಾಗ ಮಾತ್ರ ರೋಗವನ್ನು ಹಿಮ್ಮೆಟ್ಟಿಸಲು ಸಾಧ್ಯವಾಗು ತ್ತದೆ. ಒಂದು ಕಡೆ ಸರ್ಕಾರ ದಿನಕ್ಕೊಂದು ಕಾನೂನು ಜಾರಿಗೆ ತರುತ್ತಿದ್ದು, ಸಾರ್ವಜನಿ ಕರ ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ಪಾಲನೆಗೆ ಆದೇಶಿಸುತ್ತಿದೆ. ಆದರೆ ನಗರದಲ್ಲಿ ಇಂದು ಅಧಿಕಾರಿಗಳ ಹಾಗೂ ಸಾರ್ವಜನಿಕರ ನಿರ್ಲಕ್ಷ್ಯದ ಫಲವಾಗಿ ಕೊರೊನಾ ಕರ್ಫ್ಯೂ ನಿಯಮಗಳನ್ನು ಗಾಳಿಗೆ ತೂರಿದ ವ್ಯಾಪಾರಸ್ಥರು ಹಾಗೂ ಜನರು, ಸಂತೆಯ ಆವರಣದಲ್ಲಿ ಯಾವುದೇ ನಿಯಮ ಪಾಲಿಸಿದೆ ವ್ಯಾಪಾರ, ವಹಿವಾಟು ನಡೆಸಿದ ಘಟನೆ ನಡೆಯಿತು.
ಗಾಂಧಿ ವೃತ್ತ, ರಾಣಿ ಚೆನ್ನಮ್ಮ ವೃತ್ತ, ಶಿವಮೊಗ್ಗ ರಸ್ತೆ, ಹೆಚ್. ಶಿವಪ್ಪ ವೃತ್ತ, ದೇವಸ್ಥಾನ ರಸ್ತೆ, ಹರಪನಹಳ್ಳಿ ರಸ್ತೆಯಲ್ಲಿ ಸಾರ್ವಜನಿಕರು ವ್ಯಾಪಾರ ಮಾಡುವುದಕ್ಕೆ ಮುಂದಾದರು. ಇದರಲ್ಲಿ ಕೆಲವರು ಮಾಸ್ಕ್ ಧರಿಸಿಕೊಂಡಿದ್ದರೆ, ಕೆಲವರು ಧರಿಸಿರಲಿಲ್ಲ. ಕೆಲವು ಅಂಗಡಿಗಳಲ್ಲಿ ಯಾವುದೇ ಅಂತರವನ್ನು ಸಹ ಕಾಯ್ದುಕೊಂಡಿರಲಿಲ್ಲ. ಇದನ್ನು ತಡೆಯಲು ನಗರಸಭೆಯ ಅಧಿಕಾರಿಗಳಾಗಲೀ, ಮತ್ತು ತಾಲ್ಲೂಕು ಆಡಳಿತ ಅಧಿಕಾರಿಗಳ ತಂಡವಾಗಲೀ ಮುಂದಾಗದೆ ಇರುವುದನ್ನು ಗಮನಿಸಿ, ಪತ್ರಕರ್ತರು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಮತ್ತು ನಗರಸಭೆ ಪೌರಾಯುಕ್ತೆ ಎಸ್. ಲಕ್ಷ್ಮಿ ಅವರ ಗಮನಕ್ಕೆ ತಂದರು. ನಂತರ ನಗರಸಭೆ, ತಾಲ್ಲೂಕು ಆಡಳಿತ ಹಾಗೂ ಪೊಲೀಸ್ ಅಧಿಕಾರಿಗಳ ತಂಡವು ಬಂದ್ ಮಾಡಿಸಲು ಮುಂದಾದರು. ಮಧ್ಯಾಹ್ನ ಮತ್ತೆ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟವು.
ಕಳೆದ ಕೊರೊನಾ ವೇಳೆ ಸ್ವತಃ ಜಿಲ್ಲಾಧಿಕಾರಿಗಳೇ ವಾರದಲ್ಲಿ 2-3 ಬಾರಿ ಆಗಮಿಸಿ, ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು. ಆದರೆ ಈ ಬಾರಿ ಯಾವುದೇ ಸಭೆ ಆಯೋಜನೆ ಮಾಡದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ ಎನಿಸುತ್ತದೆ.
ಸಾರ್ವಜನಿಕರ ಅಭಿಪ್ರಾಯ : ಇಂದು ಸಂತೆಯ ಆವರಣದಲ್ಲಿ ಒಮ್ಮಿಂದೊಮ್ಮೆಲೆ ಹೆಚ್ಚು ಅಂಗಡಿಗಳನ್ನು ತೆರೆದುಕೊಂಡು ವ್ಯಾಪಾರ ವಹಿವಾಟು ಆರಂಭಿಸಿದರು. ಇದರಿಂದಾಗಿ ಜನದಟ್ಟಣೆಯ ಪ್ರಮಾಣ ಹೆಚ್ಚಾಗಿದೆ. ವ್ಯಾಪಾರಸ್ಥರ ತಕಡಿಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಇಲ್ಲಿಯವರೆಗೆ ಸುಮಾರು 40 ಸಾವಿರ ರೂಪಾಯಿಗೂ ಹೆಚ್ಚು ದಂಡವನ್ನು ಹಾಕಲಾಗಿದೆ. ನಂತರದಲ್ಲಿ ನಗರಸಭೆ, ತಾಲ್ಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ತಂಡ ಸೇರಿ ಸಂತೆಯ ಆವರಣದಲ್ಲಿ ಇದ್ದ ಅಂಗಡಿಗಳನ್ನು ತೆರವು ಮಾಡಲಾಗಿದೆ.
– ಎಸ್. ಲಕ್ಷ್ಮೀ, ಪೌರಾಯುಕ್ತರು, ನಗರಸಭೆ, ಹರಿಹರ.
ಸಂತೆಯ ಆವರಣದಲ್ಲಿನ ಅಂಗಡಿ ಮುಂಗಟ್ಟುಗಳನ್ನು ತೆರವು ಮಾಡಿಸಲು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಪೌರಾಯುಕ್ತೆ ಎಸ್ ಲಕ್ಷ್ಮಿ, ಸಿಪಿಐ ಸತೀಶ್ ಕುಮಾರ್, ಪಿಎಸ್ಐ ಸುನಿಲ್ ಬಸವರಾಜ್ ತೆಲಿ, ನಗರಸಭೆ ಸಿಬ್ಬಂದಿಗಳಾದ ಮಂಜುನಾಥ್, ವಸಂತ್, ಕಿರಣ್, ಪ್ರಕಾಶ್, ರಮೇಶ್, ಪೊಲೀಸ್ ಸಿಬ್ಬಂದಿಗಳಾದ ಸತೀಶ್, ದ್ವಾರಕೀಶ್, ಮಂಜುನಾಥ್, ದೇವರಾಜ್, ನಾಗರಾಜ್, ಸಂತೋಷ್ ಹಾಗು ಇತರರ ತಂಡವು ಅಂಗಡಿ ಮುಂಗಟ್ಟುಗಳನ್ನು ತೆರವು ಮಾಡಿಸಿತು.