ಬೆಂಗಳೂರು, ಮೇ 4 – ಕೊರೊನಾ ಎರಡನೇ ಅಲೆ ತಾರಕಕ್ಕೇರಿ ಸ್ಮಶಾನಗಳಲ್ಲಿ ಹೆಣ ಸುಡಲು ಜಾಗ ಕಷ್ಟವಾಗಿರುವ ಸಂದರ್ಭದಲ್ಲಿ, ಆಸ್ಪತ್ರೆಯ ಬೆಡ್ ಮಾರಿಕೊಳ್ಳುವ ದೊಡ್ಡ ದಂಧೆಯನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಬಯಲಿಗೆಳೆದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಆರೋಪಗಳ ಕುರಿತು ದಾಖಲೆ ಬಿಡುಗಡೆ ಮಾಡಿ ಮಾತನಾಡಿರುವ ಅವರು, ಬಿಬಿಎಂಪಿಯ ಕೋವಿಡ್ ವಾರ್ ರೂಂನಲ್ಲಿ ಸೋಂಕಿತ ಲಕ್ಷಣ ರಹಿತರ ಹೆಸರಿನಲ್ಲಿ ಬೆಡ್ ಬುಕ್ ಮಾಡಿ ಅದನ್ನು ಬೇರೆಯವರಿಗೆ ಕೊಡುವ ದಂಧೆ ನಡೆಯುತ್ತಿದೆ. ಈ ರೀತಿ 4 ಸಾವಿರಕ್ಕೂ ಹೆಚ್ಚು ಬೆಡ್ಗಳ ಮಾರಾಟದ ದಂಧೆ ನಡೆದಿರುವುದು ಕಂಡು ಬಂದಿದೆ ಎಂದಿದ್ದಾರೆ.
ಒಬ್ಬ ವ್ಯಕ್ತಿಯ ಹೆಸರಿನಲ್ಲೇ 12ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಬೇರೆ ಬೇರೆ ದಿನ ಬೆಡ್ ಬುಕ್ ಮಾಡಲಾಗಿದೆ. ಈ ರೀತಿ ಬುಕ್ ಮಾಡಿದ ಬೆಡ್ಗಳನ್ನು ರಾತ್ರೋರಾತ್ರಿ ಬೇರೆಯ ವರಿಗೆ ಕೊಡಲಾಗುತ್ತಿದೆ. ಈ ರೀತಿಯ ದಂಧೆ ನಡೆಸಿದ ಅಧಿಕಾರಿಗಳು, ಏಜೆಂಟರು, ಆರೋಗ್ಯ ಮಿತ್ರರು ಹಾಗೂ ಖಾಸಗಿ ಆಸ್ಪತ್ರೆಯವರು ಯಾರೇ ಇದ್ದರೂ ಜೈಲಿಗೆ ಅಟ್ಟಬೇಕು ಎಂದವರು ಕಿಡಿ ಕಾರಿದ್ದಾರೆ.
ಧರಣಿ ನಡೆಸುವ ಎಚ್ಚರಿಕೆ ನಂತರ ಮಾಹಿತಿ
ಕೋ ವಿಡ್ ವಾರ್ ರೂಂ ಕಾರ್ಯ ನಿರ್ವಹಣೆ ಕುರಿತ ಮಾಹಿತಿ ಪಡೆಯಲು ಸಂಸದನಾದ ನಾನೇ ಪರದಾಡಬೇಕಾಯಿತು. ಹತ್ತಾರು ಸಾರಿ ಕೇಳಿದರೂ ಮಾಹಿತಿ ಕೊಟ್ಟಿರಲಿಲ್ಲ. ಮಾಹಿತಿ ಕೊಟ್ಟರೂ ಅರೆಬರೆ ಯಾಗಿ ಕೊಡುತ್ತಿದ್ದರು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ನಿನ್ನೆ ರಾತ್ರಿ 2 ಗಂಟೆಗೆ ಉನ್ನತ ಅಧಿಕಾರಿಯೊಬ್ಬರಿಗೆ ಕರೆ ಮಾಡಿ, ಇನ್ನು ಅರ್ಧ ಗಂಟೆಯಲ್ಲಿ ಮಾಹಿತಿ ಕೊಡದಿದ್ದರೆ ಬಿಬಿಎಂಪಿ ಕಚೇರಿ ಎದುರು ಧರಣಿ ನಡೆಸುತ್ತೇನೆ ಎಂದು ಎಚ್ಚರಿಸಿದ್ದೆ. ಆನಂತರವೇ ಮಾಹಿತಿ ನೀಡಲಾಯಿತು ಎಂದವರು ಹೇಳಿದ್ದಾರೆ.
ಬ್ಲಾಕ್ ದಂಧೆಯ ವಿಧಾನ
ಬಿಬಿಎಂಪಿ ಕೋವಿಡ್ ವಾರ್ ರೂಂ ವ್ಯವಸ್ಥೆಯ ಪ್ರಕಾರ ಖಾಲಿ ಇರುವ ಬೆಡ್ಗೆ ಯಾರಾದರೂ ಬುಕ್ ಮಾಡಿದರೆ ಅವರು 12 ಗಂಟೆಯವರೆಗೂ ಆಸ್ಪತ್ರೆಗೆ ದಾಖಲಾಗಲು ಸಮಯ ಇರುತ್ತದೆ. ಅಲ್ಲಿಯವರೆಗೆ ಬೇರೆ ಯಾರಿಗೂ ಈ ಬೆಡ್ ಕೊಡುವುದಿಲ್ಲ.
ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ಮಿತ್ರರು ಯಾವುದಾದರೂ ಬೆಡ್ ಖಾಲಿ ಆದ ತಕ್ಷಣ ಅವ್ಯವಹಾರದಲ್ಲಿ ಭಾಗಿಯಾಗಿರುವ ವಾರ್ ರೂಂ ಸಿಬ್ಬಂದಿಯೊಬ್ಬರಿಗೆ ತಿಳಿಸುತ್ತಾರೆ.
ಅವರು ಲಕ್ಷಣ ರಹಿತ ಸೋಂಕು ಹೊಂದಿರುವ ಹಾಗೂ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಹೆಸರಿಗೆ ಬೆಡ್ ಬುಕ್ ಮಾಡುತ್ತಾರೆ. ಯಾರಾದರೂ ಹಣ ಕೊಟ್ಟರೆ, ಬೆಡ್ ಅನ್ಬ್ಲಾಕ್ ಆದ ತಕ್ಷಣವೇ ಅವರ ಹೆಸರನ್ನು ಸೇರ್ಪಡೆ ಮಾಡುತ್ತಾರೆ.
ಐಸಿಯು, ಆಕ್ಸಿಜನ್ ಬೆಡ್ ಹಾಗೂ ವೆಂಟಿಲೇಟರ್ ಬೆಡ್ಗಳ ಬುಕಿಂಗ್ ದಂಧೆಯಲ್ಲಿ ಆರೋಗ್ಯ ಮಿತ್ರ, ಖಾಸಗಿ ಆಸ್ಪತ್ರೆ, ವಾರ್ ರೂಂನಲ್ಲಿರುವವರು ಹಾಗೂ ಅಧಿಕಾರಿಗಳು ಶಾಮೀಲಾಗಿದ್ದಾರೆ.
ಇದರಿಂದಾಗಿ ಸಾರ್ವಜನಿಕರು ಯಾವುದೇ ಸಮಯದಲ್ಲಿ ಬೆಡ್ ಕೇಳಿದರೂ ಸಿಗುವುದಿಲ್ಲ. ಆದರೆ, ದಂಧೆಕೋರರು ಸುಲಭವಾಗಿ ಹಣ ಪಡೆದು ಬೆಡ್ಗಳನ್ನು ಒದಗಿಸುತ್ತಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಈ ರೀತಿ ಬ್ಲಾಕ್ ಮಾಡುವು ಬೆಡ್ಗಳನ್ನು ಶಾಸಕರು, ಸಂಸದರು, ನ್ಯಾಯಮೂರ್ತಿಗಳು ಸೇರಿ ಪ್ರಭಾವಿಗಳ ಶಿಫಾರಸ್ಸಿನ ಮೇಲೆ ವಿತರಿಸುವುದೂ ನಡೆದಿದೆ ಎಂದು ಸಂಸದ ಸೂರ್ಯ ತಿಳಿಸಿದ್ದಾರೆ.
ಎಷ್ಟೇ ದೊಡ್ಡವರಿದ್ದರೂ ಬಿಡುವುದಿಲ್ಲ
ಸಂಸದ ತೇಜಸ್ವಿ ಸೂರ್ಯ ಅವರು ದೊಡ್ಡ ಪ್ರಮಾಣದ ಅವ್ಯವಹಾರ ಬಯಲು ಮಾಡಿದ್ದಾರೆ. ಅವರಿಂದ ನಾನು ಮಾಹಿತಿ ಪಡೆಯುತ್ತಿದ್ದು, ತಕ್ಷಣವೇ ಕ್ರಮ ತೆಗೆದುಕೊಳ್ಳುತ್ತೇನೆ. ಹಗರಣ ದಲ್ಲಿ ಭಾಗಿಯಾದವರು ಎಷ್ಟೇ ದೊಡ್ಡವರಿದ್ದರೂ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಹಗರಣದಲ್ಲಿ ಭಾಗಿಯಾದವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಜಯನಗರ ಠಾಣೆಯಲ್ಲಿ ಎಫ್.ಐ.ಆರ್. ದಾಖಲಿಸಲಾಗಿದ್ದು, ರೋಹಿತ ಹಾಗೂ ನೇತ್ರ ಎಂಬುವವರನ್ನು ಬಂಧಿಸಲಾಗಿದೆ. ದಂಧೆಯಲ್ಲಿ ಭಾಗಿಯಾದ ಇತರರ ತೀವ್ರ ಶೋಧ ನಡೆಸಲಾಗುತ್ತಿದೆ.
ನಾಚಿಕೆಗೇಡು ಎಂದ ಕಾಂಗ್ರೆಸ್
ಬಿಜೆಪಿ ಸರ್ಕಾರದ ವೈಫಲ್ಯತೆ ಬಗ್ಗೆ ಅವರದೇ ಪಕ್ಷದ ಸಂಸದರು ಹಾಗೂ ಶಾಸಕರು ಪತ್ರಿಕಾಗೋಷ್ಠಿ ಮಾಡುತ್ತಿದ್ದಾರೆ ಎಂಬುದು ತೀರಾ ನಾಚಿಕೆಗೇಡು ಎಂದು ರಾಜ್ಯ ಕಾಂಗ್ರೆಸ್ ಲೇವಡಿ ಮಾಡಿದೆ.
ರಾಜ್ಯದಲ್ಲಿ, ಕೇಂದ್ರದಲ್ಲಿ ಹಾಗೂ ಬೆಂಗಳೂರಿನ ಬಹುತೇಕ ಸಂಸದರು ಬಿಜೆಪಿಯವರೇ. ಒಬ್ಬರಲ್ಲ, ಮೂವರು ಉಪ ಮುಖ್ಯಮಂತ್ರಿಗಳಿದ್ದಾರೆ. ಅಧಿಕಾರವೆಲ್ಲ ತಮ್ಮ ಕೈಲಿದ್ದರೂ ಪಕ್ಷದ ಸಂಸದರು ಹಾಗೂ ಶಾಸಕರು ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ತರಾಟೆಗೆ ತೆಗೆದುಕೊಂಡಿದೆ.
ಈ ಅಕ್ರಮ ದಂಧೆ ನಡೆಸಿದವರನ್ನು ರಣಹದ್ದುಗಳು ಎಂದು ತರಾಟೆಗೆ ತೆಗೆದುಕೊಂಡ ಸೂರ್ಯ, ಇದು ಭ್ರಷ್ಟಾಚಾರ ಅಲ್ಲ ಕೊಲೆ ಎಂದು ಬಣ್ಣಿಸಿದರು.
ಆಕ್ಸಿಜನ್ ಬೆಡ್ಗಳ ಸಂಖ್ಯೆಯನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸಾಕಷ್ಟು ಹೆಚ್ಚಿಸಲಾಗಿದೆ. ಆದರೆ, ಅಧಿಕಾರಿಗಳು ಹಾಗೂ ಏಜೆಂಟರ ಕಾರಣದಿಂದಾಗಿ ಜನರಿಗೆ ಈ ಸೌಲಭ್ಯ ತಲುಪುತ್ತಿಲ್ಲ ಎಂದು ಆರೋಪಿಸಿದರು.
ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಮಾತನಾಡಿ, ಕೊರೊನಾಗೆ ಸಿಲುಕಿದವರಿಂದ ಅಮಿತ್ ಎಂಬ ವ್ಯಕ್ತಿ 25 ಸಾವಿರ ರೂ.ಗಳನ್ನು ಗೂಗಲ್ ಪೇ ಮೂಲಕ ಪಡೆದು ಬೆಡ್ ನೀಡಿರುವುದು ದಾಖಲೆ ಸಮೇತ ಬೆಳಕಿಗೆ ಬಂದಿದೆ. ಈ ವ್ಯಕ್ತಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ ಎಂದು ಹೇಳಿದರು.
ಕೇಂದ್ರ ಸರ್ಕಾರದಿಂದ 780 ಬೆಡ್ಗಳು ಬಂದರೂ ಅವುಗಳು ಬಳಕೆಯಾಗುತ್ತಿಲ್ಲ. ಆಕ್ಸಿಜನ್ ಘಟಕಗಳಿಗೆ ಹಣ ಬಂದರೂ, ಘಟಕಗಳನ್ನು ಸ್ಥಾಪಿಸಿಲ್ಲ. ಅಧಿಕಾರಿಗಳ ನಿರ್ಲಕ್ಷದಿಂದ ಈ ರೀತಿ ಆಗುತ್ತಿದೆ. ಅವರನ್ನು ಮನೆಗೆ ಕಳಿಸದೇ ಇದ್ದರೆ ಅವರ ಶಾಪ ತಟ್ಟುತ್ತದೆ ಎಂದರು.
ವಾರ್ ರೂಂಗಳಲ್ಲಿ ಕೆಲಸ ಮಾಡುತ್ತಿರುವವರು ಅಧಿಕಾರಿಗಳಲ್ಲ. ಇದರ ಹೊಣೆಯನ್ನು ಖಾಸಗಿ ಸಂಸ್ಥೆಗೆ ವಹಿಸಲಾಗಿದೆ. ಇದಕ್ಕೆ ಕಣ್ಣು ಮುಚ್ಚಿ ನೇಮಕ ಮಾಡುತ್ತಿರುವುದರಿಂದ ಬೆಂಗಳೂರು ಜನರ ಪ್ರಾಣ ಹೋಗುತ್ತಿದೆ. ಈ ಹುದ್ದೆಗಳಿಗೆ ಅಧಿಕಾರಿಗಳ ಸಂಬಂಧಿಗಳನ್ನೇ ನೇಮಿಸಲಾಗಿದೆ ಎಂದು ಆರೋಪಿಸಿದರು.
ಬೆಡ್ ಬ್ಲಾಕ್ ಅಷ್ಟೇ ಅಲ್ಲದೇ ರೆಮ್ಡಿಸಿವಿರ್ ಔಷಧಿಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಶಾಸಕ ಉದಯ ಗರುಡಾಚಾರ್ ಹೇಳಿದರು.