ದಾವಣಗೆರೆ, ಮೇ 4- ಸಮಯಕ್ಕೆ ಸರಿಯಾಗಿ ಬೆಡ್ ಮತ್ತು ಚಿಕಿತ್ಸೆ ಸಿಗದ ಹಿನ್ನೆಲೆಯಲ್ಲಿ ಉಸಿರಾಟದ ತೊಂದರೆ ಇದ್ದ ಯುವತಿಯೋರ್ವಳು ಸಾವನ್ನಪ್ಪಿರುವ ಘಟನೆ ನಗರದಲ್ಲಿಂದು ನಡೆದಿದೆ.
ನಗರದ ಭರತ್ ಕಾಲೋನಿಯ ಸಂಗೀತಾ (17) ಮೃತ ಯುವತಿ.
ಯುವತಿ ಸಂಗೀತಾಗೆ ನಿನ್ನೆ ಸೋಮವಾರದಿಂದ ಕಫ ಹಾಗೂ ಉಸಿರಾಟದ ತೊಂದರೆ ಇದ್ದು, ದಾವಣಗೆರೆಯಲ್ಲಿರುವ ಸುಮಾರು 13 ಆಸ್ಪತ್ರೆಗಳನ್ನು ಸುತ್ತಿದರೂ ಚಿಕಿತ್ಸೆ ಸಿಕ್ಕಿಲ್ಲ ಹಾಗೂ ಬೆಡ್ ಗಳು ಕೂಡ ಸಿಕ್ಕಿಲ್ಲ. ಇದರಿಂದ ಕೊನೆಗೆ ಪೋಷಕರು ಯುವತಿಯನ್ನು ಇಂದು ಮಧ್ಯಾಹ್ನ 2 ಗಂಟೆಗೆ ಜಿಲ್ಲಾಸ್ಪತ್ರೆಗೆ ಕರೆತಂದಿದ್ದು, ಸರಿಯಾದ ಸಮಯಕ್ಕೆ ಬೆಡ್ ಹಾಗೂ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾಳೆ. ಜಿಲ್ಲಾಸ್ಪತ್ರೆಯ ಮುಂಭಾಗ ಯುವತಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸರ್ಕಾರ ಹಾಗೂ ಜಿಲ್ಲಾಡಳಿತ ವಿರುದ್ಧ ಯುವತಿಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಡ್ ಗಾಗಿ ಅಲೆದಾಟ: ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆ ಮಾಡಿದ್ದು, ನಾನ್ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ. ಇದರಿಂದ ಜನರು ಖಾಸಗಿ ಆಸ್ಪತ್ರೆಗಳನ್ನು ಸುತ್ತಿ ಬೆಡ್ ಖಾಲಿ ಇಲ್ಲ ಎನ್ನುವ ಉತ್ತರ ಸಿಗುತ್ತಿದೆ. ಅಲ್ಲದೆ ಜಿಲ್ಲಾಸ್ಪತ್ರೆಯ ಮುಂಭಾಗ ಬಹಳಷ್ಟು ಜನರು ಆಟೋಗಳಲ್ಲಿ, ಅಂಬ್ಯುಲೆನ್ಸ್ ಗಳಲ್ಲಿ ರೋಗಿಗಳನ್ನು ಹಾಕಿಕೊಂಡು ಬೆಡ್ ಸಿಗದೆ ಪರದಾಡುವ ಸ್ಥಿತಿ ತಲುಪಿದೆ.
ವೆಂಟಿಲೇಟರ್ ಸಿಗದೇ ಯುವಕ ಸಾವು
ದಾವಣಗೆರೆ, ಮೇ 4- ವೆಂಟಿಲೇಟರ್ ಸಿಗದೆ ಚಿಕಿತ್ಸೆ ಪಡೆಯುತ್ತಿದ್ದ ಯುವಕನೋರ್ವ ಮೃತಪಟ್ಟಿರುವ ಘಟನೆ ಇಂದು ನಡೆದಿದೆ.
ತಾಲ್ಲೂಕಿನ ಹನಗವಾಡಿ ಗ್ರಾಮದ ಶಿವಶಂಕರ್ (28) ಸಾವನ್ನಪ್ಪಿದ ಯುವಕ.
ಒಂದು ವಾರದ ಹಿಂದೆ ಯುವಕನಿಗೆ ಜ್ವರ ಕಾಣಿಸಿಕೊಂಡ ಕಾರಣ ಚಿಕಿತ್ಸೆಗಾಗಿ ಹರಿಹರದ ಆಸ್ಪತ್ರೆಯಲ್ಲಿ ದಾಖಲಾಗಿದ್ದ. ಆಗ ಈತನಿಗೆ ಕೋವಿಡ್ ಸೋಂಕು ಕಾಣಿಸಿ ಕೊಂಡಿತ್ತು. ಆಮ್ಲಜನಕದ ಚಿಕಿತ್ಸೆ ಪಡೆಯುತ್ತಿದ್ದ ಈತನು ಸೋಮವಾರ ಸಂಜೆ ಯಿಂದ ತೀವ್ರ ಉಸಿರಾಟದ ತೊಂದರೆ ಅನು ಭವಿಸುತ್ತಿದ್ದ ಹಿನ್ನೆಲೆಯಲ್ಲಿ ವೆಂಟಿಲೇಟರ್ ಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ. ವೆಂಟಿಲೇಟರ್ ಗಾಗಿ ಸಾಕಷ್ಟು ಪ್ರಯತ್ನ ನಡೆಸಿದರೂ ಸಹ ಜಿಲ್ಲಾಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸಿಗದೇ ಯುವಕ ಕೊನೆಯುಸಿರೆಳೆದಿದ್ದಾನೆ.
ಜಿಲ್ಲೆಯಲ್ಲಿ ಕೋವಿಡ್ ರೋಗಿಗಳಿಗೆ ವೆಂಟಿಲೇಟರ್ ಸಿಗದೇ ಸಾವನ್ನಪ್ಪುತ್ತಿರುವುದು ನಿಂತಿಲ್ಲ.