ಜಿಲ್ಲೆಯಲ್ಲಿ ಆಕ್ಸಿಜನ್‌ ಬೆಡ್‌ಗಾಗಿ ವೆಯ್ಟಿಂಗ್ ಲಿಸ್ಟ್‌

ಕೊರೊನಾ ರೋಗಿಗಳಿಂದ ತುಂಬಿದ ಆಸ್ಪತ್ರೆಗಳು

ದಾವಣಗೆರೆ, ಮೇ 4 – ಕಳೆದ ಕೆಲ ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿರುವ ಆಕ್ಸಿ ಜನ್ ಹಾಗೂ ಐ.ಸಿ.ಯು.ಗಳು ತುಂಬಿಕೊಂ ಡಿವೆ. ಹೊಸ ರೋಗಿಗಳು ಆಕ್ಸಿಜನ್ ಬೆಡ್‌ ಗಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ.

ಕೊರೊನಾ ಎರಡನೇ ಅಲೆಯಲ್ಲಿ ಆಕ್ಸಿಜನ್‌ ಬೆಡ್‌ಗಳ ಬೇಡಿಕೆ ಹೆಚ್ಚಾಗಿಯೇ ಕಂಡು ಬರುತ್ತಿದೆ. ಜಿಲ್ಲೆಯಲ್ಲಿ ರೋಗಿಗಳು ಸಂಖ್ಯೆ ಹೆಚ್ಚಾಗುತ್ತಿರುವ ಜೊತೆಗೆ, ಹೊರ ಜಿಲ್ಲೆಗಳಿಂದ ಬರುವವರೂ ಸೇರಿ ಆಸ್ಪತ್ರೆಗಳ ವ್ಯವಸ್ಥೆ ಮೇಲಿನ ಹೊರೆ ಹೆಚ್ಚಾಗುತ್ತಿದೆ.

ಆಕ್ಸಿಜನ್‌ ಬೆಡ್‌ಗಳ ಸಂಖ್ಯೆ ಹೆಚ್ಚಿಸುವ ಸಾಮರ್ಥ್ಯ ಇದ್ದರೂ ಸಹ, ಅಗತ್ಯ ಪ್ರಮಾಣದ ಆಕ್ಸಿಜನ್ ಪಡೆಯುವುದು ಸವಾಲಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಕ್ಸಿಜನ್ ಪೂರೈಕೆಗೆ ತೊಡಕಾಗಿ ಸಾವುಗಳು ಸಂಭವಿಸುತ್ತಿರುವ ವರದಿಗಳು ಬರುತ್ತಿರುವ ಹಿನ್ನೆಲೆಯಲ್ಲಿ, ಆಕ್ಸಿಜನ್ ಬೆಡ್ ಹೆಚ್ಚಿಸುವುದು ಸುಲಭದ ಕೆಲಸವೇನಲ್ಲ.

ಜಿಲ್ಲಾಸ್ಪತ್ರೆಯಾದ ನಗರದ ಸಿ.ಜಿ. ಆಸ್ಪತ್ರೆಯಲ್ಲಿ 300ರಷ್ಟು ಬೆಡ್‌ಗಳಿದ್ದು, ಅವುಗಳೆಲ್ಲವೂ ತುಂಬಿವೆ. ಇನ್ನೂ ಬೆಡ್‌ಗಳನ್ನು ಹೆಚ್ಚಿಸುವ ಬಗ್ಗೆ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳುತ್ತಿದೆ. ಆದರೆ, ಇದೆಲ್ಲವೂ ಆಕ್ಸಿಜನ್ ಲಭ್ಯತೆಯನ್ನು ಆಧರಿಸಿದೆ.

ಉಳಿದಂತೆ ನಗರದ ಖಾಸಗಿ ಆಸ್ಪತ್ರೆಗಳಲ್ಲೂ ಬೆಡ್‌ಗಳ ಲಭ್ಯತೆ ಕಷ್ಟ ಸಾಧ್ಯವಾಗಿದೆ. ಯಾವ ಆಸ್ಪತ್ರೆಗೆ ಕರೆ ಮಾಡಿದರೂ ಬೆಡ್‌ಗಳು ಸುಲಭವಾಗಿ ಸಿಗುತ್ತಿಲ್ಲ. ಬೆಡ್‌ಗಳು ಇಲ್ಲ ಎಂಬ ಉತ್ತರ ಸಿಗುತ್ತಿದೆ ಎಂದು ರೋಗಿಗಳ ಕಡೆಯವರು ತಿಳಿಸುತ್ತಿದ್ದಾರೆ.

ದಾವಣಗೆರೆ ಜಿಲ್ಲೆಯಷ್ಟೇ ಅಲ್ಲದೇ ಪಕ್ಕದ ಚಿತ್ರದುರ್ಗ, ಹಾವೇರಿ, ಬಳ್ಳಾರಿ ಜೊತೆಗೆ ಬೆಂಗಳೂರಿನಿಂದಲೂ ರೋಗಿಗಳು ಬರುತ್ತಿದ್ದಾರೆ. ಇದೇ ವೇಳೆ, ನಗರದಲ್ಲೂ ಸಕ್ರಿಯ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಿದೆ. ಎರಡನೇ ಅಲೆಯಲ್ಲಿ ಯುವಕರಿಗೂ ಆಕ್ಸಿಜನ್ ಬೆಡ್ ಬೇಕಾಗುವ ಪ್ರಕರಣಗಳು ಏರುತ್ತಿವೆ. 

ನಗರದಲ್ಲಿರುವ ಸಿ.ಜಿ. ಜಿಲ್ಲಾಸ್ಪತ್ರೆ ಯಲ್ಲಿ ಆಕ್ಸಿಜನ್‌, ಐ.ಸಿ.ಯು., ವೆಂಟಿಲೇಟರ್‌ ಬೆಡ್‌ಗಳು ತುಂಬಿವೆ. ಹೊಸ ರೋಗಿಗಳು ಬಂದರೆ ಬೆಡ್‌ಗಾಗಿ ಕಾಯಬೇಕಿದೆ. ರಾಣೇಬೆನ್ನೂರು, ಹಾವೇರಿ, ಹರಪನಹಳ್ಳಿ ಸೇರಿದಂತೆ ಹಲವೆಡೆಗಳಿಂದಲೂ ರೋಗಿಗಳು ಜಿಲ್ಲಾಸ್ಪತ್ರೆಗೆ ಬರುತ್ತಿದ್ದಾರೆ 

ಬೆಡ್‌ಗಳು ತುಂಬಿದ್ದರೂ ಸಹ ಪ್ರತಿದಿನ 15-20 ಜನ ಗುಣಮುಖರಾಗಿ ಬಿಡುಗಡೆಯಾಗುತ್ತಿದ್ದಾರೆ. ಅಲ್ಲದೇ, ಆಕ್ಸಿಜನ್ ಮಟ್ಟ ಸುಧಾರಣೆಯಾದಂತೆ ರೋಗಿಗಳನ್ನು ಸಾಮಾನ್ಯ ಬೆಡ್‌ಗಳಿಗೆ ಕಳಿಸಲಾಗುತ್ತಿದೆ. ಇವರ ಬೆಡ್‌ಗಳು ಸೋಂಕಿತರಿಗೆ ಸಿಗುತ್ತಿವೆ ಎಂದು ಸಿ.ಜಿ. ಆಸ್ಪತ್ರೆಯ ಆರ್.ಎಂ.ಒ. ಡಾ. ಎಲ್.ಎಂ. ಪಾಟೀಲ್ ತಿಳಿಸಿದ್ದಾರೆ.

ಕೆಲವರು ಕೊರೊನಾ ಸೋಂಕು ಬಂದಾಗ ಮನೆಯಲ್ಲೇ ಚಿಕಿತ್ಸೆ ಪಡೆಯುವ ಪ್ರಯತ್ನ ನಡೆಸಿ, ಉಲ್ಬಣಿಸಿದಾಗ ಜಿಲ್ಲಾಸ್ಪತ್ರೆಗೆ ಬರುತ್ತಿದ್ದಾರೆ. ಕೊರೊನಾ ಬಂದಾಗ ಮೊದಲು ಪಿ.ಹೆಚ್‌.ಸಿ. ಕೇಂದ್ರಗಳಿಂದ ಸಲಹೆ ಪಡೆಯಬೇಕು. ಅಲ್ಲಿನ ಮಾರ್ಗದರ್ಶನದಂತೆ ಆಸ್ಪತ್ರೆ ಇಲ್ಲವೇ ಮನೆಯಲ್ಲೇ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯುವ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು ಎಂದವರು ಹೇಳಿದ್ದಾರೆ.

ಆಕ್ಸಿಜನ್‌ ಬೆಡ್‌ಗಳ ಅಗತ್ಯ ಎಲ್ಲರಿಗೂ ಇರುವುದಿಲ್ಲ. ಆಕ್ಸಿಜನ್ ಮಟ್ಟ ಶೇ.90ಕ್ಕಿಂತ ಕಡಿಮೆಯಾದಾಗ ಮಾತ್ರ ಅಗತ್ಯ ಬರುತ್ತದೆ ಎಂದಿರುವ ಅವರು, ಪ್ರಸಕ್ತ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ 20 ಹೆಚ್ಚಿನ ಆಕ್ಸಿಜನ್‌ ಬೆಡ್‌ಗಳನ್ನು ಹಾಕಲಾಗಿದೆ. ಇನ್ನೊಂದು ವಾರ್ಡ್‌ ಸಿದ್ಧಪಡಿಸಿ 30 ಬೆಡ್‌ ಅಳವಡಿಕೆಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಈ ಬಗ್ಗೆ ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.

ಇನ್ನೊಂದು ತಿಂಗಳ ಕಾಲ ಜನರು ಕೊರೊನಾ ಸೋಂಕು ಬರದಂತೆ ಪೂರ್ಣ ಮುನ್ನೆಚ್ಚರಿಕೆ ವಹಿಸಬೇಕು. ಒಂದೊಮ್ಮೆ ಸೋಂಕು ಬಂದರೆ ಪಿ.ಎ.ಸಿ. ವೈದ್ಯರ ಸಲಹೆಯಂತೆ ನಡೆದುಕೊಳ್ಳಬೇಕು ಎಂದು ಪಾಟೀಲ್‌ ಕಿವಿಮಾತು ಹೇಳಿದ್ದಾರೆ.

error: Content is protected !!