ದಾವಣಗೆರೆ, ಜು.22- ಕೊರೊನಾ ಸಮಯದಲ್ಲಿ ಸಿಎಂ ಬದಲಾವಣೆ ಸೂಕ್ತವಲ್ಲ. ಈ ಸಮಯದಲ್ಲಿ ಸಿಎಂ ಬದಲಾವಣೆಯಾದರೆ ರಾಜ್ಯಕ್ಕೂ, ಬಿಜೆಪಿ ಪಕ್ಷಕ್ಕೂ ಒಳ್ಳೆಯದಲ್ಲ ಎಂದು ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ಅಭಿಪ್ರಾಯ ಪಟ್ಟಿದ್ದಾರೆ.
ಅವರು, ಇಂದು ನಗರದಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೊನಾದಂತಹ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪ ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಬಿಎಸ್ವೈ ಪರ ಮಾತನಾಡಿದ್ದಾರೆ.
ಸಭೆ ನಂತರ ಸಿಎಂ ಬಳಿ ಮಾತನಾಡುತ್ತೇನೆ. ನಾನು ಯಾವಾಗಲೂ ಸಿಎಂ ಬಿಎಸ್ವೈ ಪರವಾಗಿಯೇ ಇರುತ್ತೇನೆ. ಯಾವುದೇ ಮಾಹಿತಿ ಪಡೆಯದೇ ಯಾರೂ ಮಾತನಾಡtಬಾರದು. ಯಡಿಯೂರಪ್ಪ ಅವರು ಸರ್ಕಾರವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿದ್ದಾರೆ. ಕಾರಣ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆದರೆ ಒಳ್ಳೆಯದು. ಯಡಿಯೂರಪ್ಪರ ನಿರ್ಧಾರಕ್ಕೆ ನಾವೂ ಕೂಡ ಬದ್ದರಾಗಿದ್ದೇವೆ ಎಂದರು.
ವರಿಷ್ಠರು ಬಿಎಸ್ವೈರಿಗೆ ರಾಜೀನಾಮೆ ಕೊಡುವಂತೆ ಹೇಳಿದ್ದಾರೋ, ಇಲ್ಲವೇ ಮುಂದುವರೆಯುವಂತೆ ಹೇಳಿದ್ದಾರೋ ಗೊತ್ತಿಲ್ಲ. ಆದರೆ, ರಾಜ್ಯದ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದವರು ಸೇರಿದಂತೆ ಎಲ್ಲಾ ವರ್ಗದ ಅಭಿವೃದ್ದಿಗೆ ಶ್ರಮಿಸಿದ್ದಾರೆ. ಕಾರಣ ಅವರೇ ಮುಂದುವರೆಯಬೇಕು ಎಂದರು.