6 ತಿಂಗಳೊಳಗೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ

ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ವಿಶ್ವಾಸ

ಮಲೇಬೆನ್ನೂರಿನ ವೀರಭದ್ರೇಶ್ವರ ದೇವಸ್ಥಾನ ಜಿಲ್ಲೆಗೇ ಮಾದರಿ : ಮೆಚ್ಚುಗೆ

ಮಲೇಬೆನ್ನೂರು, ಮೇ 3- ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು 6 ತಿಂಗಳು ಸಮಯ ತೆಗೆದುಕೊಂಡಿದ್ದಾರೆ. ಅಷ್ಟರೊಳಗೆ ನಮಗೆ ನ್ಯಾಯ ಒದಗಿಸುತ್ತಾರೆಂಬ ನಂಬಿಕೆ ಇದೆ ಎಂದು ಕೂಡಲಸಂಗಮದ ಪಂಚಮಸಾಲಿ ಗುರುಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಅವರು ಸೋಮವಾರ ಸಂಜೆ ಮಲೇಬೆನ್ನೂರು ಪಟ್ಟಣದ ಹೊರವಲಯದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಸ್ಥಾನದ ಸಂಕೀರ್ಣವನ್ನು ವೀಕ್ಷಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.

ಪಾದಯಾತ್ರೆಯ ಸಮಾರೋಪಕ್ಕೆ ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸುಮಾರು 10 ಲಕ್ಷ ಜನರಿಗೆ ದಾಸೋಹ ವ್ಯವಸ್ಥೆ ಮಾಡಿದ ಕೀರ್ತಿ ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್, ಬಿ.ಚಿದಾನಂದಪ್ಪ, ಮಾಜಿ ಮೇಯರ್ ಬಿ.ಜಿ.ಅಜಯ್‌ಕುಮಾರ್ ಅವರಿಗೆ ಸಲ್ಲುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪಾದಯಾತ್ರೆಗೆ ಹರಿಹರ, ದಾವಣಗೆರೆಯಲ್ಲಿ
ಸಿಕ್ಕ ಅಭೂತಪೂರ್ವ ಬೆಂಬಲದಿಂದಾಗಿ ನಮ್ಮ ಹೋರಾಟಕ್ಕೆ ಹೊಸ ತಿರುವು ಸಿಕ್ಕಿತು. ಪಂಚಮಸಾಲಿ ಸಮಾಜಕ್ಕೆ ಸಿಗಬೇಕಾದ ನ್ಯಾಯಬದ್ಧ ಹಕ್ಕುಗಳಿಗಾಗಿ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು  ಸ್ವಾಮೀಜಿ ಹೇಳಿದರು.

ಮಲೇಬೆನ್ನೂರು ಹೊರವಲಯದಲ್ಲಿ ಇಂತಹ ಅದ್ಭುತ ದೇವಾಲಯವನ್ನು ನಿರ್ಮಿಸುವ ಮೂಲಕ ಬೆನಕನಕೊಂಡಿ ಮನೆತನದವರು ಇಂದಿನ ಯುವ ಜನಾಂಗಕ್ಕೆ ಇತಿಹಾಸ, ಕಲೆ, ಸಾಹಿತ್ಯವನ್ನು
ಪರಿಚಯಿಸುವ ಕೆಲಸ ಮಾಡಿದ್ದಾರೆ. 

21ನೇ ಶತಮಾನದಲ್ಲಿ ದ್ರಾವಿಡ ಶೈಲಿಯಲ್ಲಿ ನಿರ್ಮಾ ಣಗೊಂಡಿರುವ ದೇವಸ್ಥಾನದ ಶಿಲ್ಪ ಕಲೆ ಎಲ್ಲರನ್ನೂ ಆಕರ್ಷಿಸುವಂತಿದೆ. ದಾವಣಗೆರೆ ಜಿಲ್ಲೆಯಲ್ಲಿರುವ ಪ್ರಸಿದ್ಧ ಸಂತೇಬೆನ್ನೂರು ಪುಷ್ಕರಣಿ, ಹರಿಹರೇಶ್ವರ ದೇವಸ್ಥಾನ, ಬಾಗಳಿ ದೇವಸ್ಥಾನಗಳಂತೆ ಈ ದೇವಸ್ಥಾನವು ಪ್ರವಾಸಿಗರನ್ನು, ಭಕ್ತರನ್ನು ಕೈ ಬೀಸಿ ಕರೆಯುವಂತಿದೆ.

ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ಮಾತನಾಡಿ, ಹರಿಹರ ಸಂಗಮ ಕ್ಷೇತ್ರವಾಗಿ ಹೊರಹೊಮ್ಮಿದೆ. ಇಲ್ಲಿ ಐತಿಹಾಸಿಕ ಹರಿಹರೇಶ್ವರ ದೇವಸ್ಥಾನ ಇದೆ. ಪ್ರಸಿದ್ಧ ಚರ್ಚ್, ದರ್ಗಾಗಳಿವೆ. ಪ್ರಬಲ ಗುರುಪೀಠಗಳಿವೆ. ಈ ಪಟ್ಟಿಯಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಸೇರ್ಪಡೆಗೊಳ್ಳುತ್ತಿರುವುದು ಹರಿಹರ ತಾಲ್ಲೂಕಿನ ಜನರ ಪುಣ್ಯ ಎಂದರು.

ದೇವಸ್ಥಾನ ಟ್ರಸ್ಟ್ ಕಮಿಟಿಯ ನಿರ್ದೇಶಕರೂ ಆದ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಚಿದಾನಂದಪ್ಪ ಮಾತನಾಡಿ, ಈ ನೂತನ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಶ್ರೀ ವೀರಭದ್ರೇಶ್ವರ, ಶ್ರೀ ಮಹಾಗಣಪತಿ, ಶ್ರೀ ಕಾಲ ಭೈರವ, ಶ್ರೀ ನಾಗದೇವತೆ ಪರಿವಾರ ಶಿಲಾಮೂರ್ತಿಗಳಿಗೆ ಕಳೆದ ತಿಂಗಳ 15 ರಿಂದಲೂ ವಿವಿಧ ಪೂಜೆಗಳು ನಡೆಯುತ್ತಿವೆ. ಇದೇ ತಿಂಗಳು 14 ರಂದು ಶ್ರೀ ರಂಭಾಪುರಿ ಜಗದ್ಗುರುಗಳವರಿಂದ ಈ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮವನ್ನು   ಸರಳವಾಗಿ ಹಮ್ಮಿಕೊಂಡಿದ್ದೇವೆ. ಅಂದೇ ನೂತನ ಶಿಲಾಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮವೂ ನೆರವೇರಲಿದೆ ಎಂದು ಚಿದಾನಂದಪ್ಪ ತಿಳಿಸಿದರು.

ದೇವಸ್ಥಾನದ ಉಪಾಧ್ಯಕ್ಷ ಬಿ.ನಾಗೇಂದ್ರಪ್ಪ, ಬಿ.ಉಮಾಪತಿ, ಎಸ್.ಎನ್.ಶಂಭುಲಿಂಗಪ್ಪ, ಪಂಚಮಸಾಲಿ ಸಮಾಜದ ಅಧ್ಯಕ್ಷ ಗೋಪನಾಳ್ ಅಶೋಕ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಲಿಂಗಪ್ಪ, ರೈತ ಸಂಘದ ನಂದಿತಾವರೆ ಶಂಭುಲಿಂಗಪ್ಪ, ಹರಪನಹಳ್ಳಿ ಸಿದ್ಲಿಂಗಪ್ಪ, ಸಿ.ಎಂ.ಗುಡ್ಡಪ್ಪ, ಬಿ.ಎನ್.ನಾಗರಾಜ್, ಶಿವಶಂಕರ್ ಮೇಷ್ಟ್ರು, ಹೊಸಳ್ಳಿ ಹಾಲೇಶಪ್ಪ, ಹೆಚ್.ಎಲ್.ಬಸವರಾಜ್, ಪರಮೇಶ್ವರಪ್ಪ, ಹೊಸಳ್ಳಿ ಕರಿಬಸಪ್ಪ ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!