ಚಾಮರಾಜನಗರದಲ್ಲಿ ಕೋವಿಡ್ ದುರಂತ
ಸಾರಿಗೆ ವ್ಯವಸ್ಥಾಪಕ ನಿರ್ದೇಶಕರಿಂದ ತನಿಖೆಗೆ ಆದೇಶ
ಬೆಂಗಳೂರು, ಮೇ 3 – ಆಕ್ಸಿಜನ್ ಕೊರತೆಯಿಂದಾಗಿ ಚಾಮರಾಜನಗರದ ಆಸ್ಪತ್ರೆಯಲ್ಲಿ ಕೊರೊನಾದಿಂದ ಬಳಲುತ್ತಿದ್ದ 23 ಜನರೂ ಸೇರಿದಂತೆ 24 ಜನರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.
ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಘಟನೆ ತೀವ್ರ ಆಘಾತಕ್ಕೆ ಕಾರಣವಾಗಿದ್ದು, ಕುಟುಂಬದವರು ಸುದ್ದಿ ತಿಳಿದ ನಂತರ ಆಸ್ಪತ್ರೆ ಎದುರು ರೋಧಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಪ್ರತಿಭಟನೆಯನ್ನೂ ನಡೆಸಿದ ಕುಟುಂಬದ ಸದಸ್ಯರು, ಆಕ್ಸಿಜನ್ ಕೊರತೆಯಿಂದ ಸಾವುಗಳು ಸಂಭವಿಸಿವೆ ಎಂದು ಆರೋಪಿಸಿದರು.
ಘಟನೆಯ ಬಗ್ಗೆ ತನಿಖೆ ನಡೆಸಲು ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಅವರನ್ನು ನೇಮಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ತಿಳಿಸಿದ್ದಾರೆ. ಈ ಸಂಬಂಧ ನಾಳೆ ತುರ್ತು ಸಚಿವ ಸಂಪುಟ ಸಭೆಯನ್ನೂ ಕರೆದಿದ್ದಾರೆ.
ಈ ನಡುವೆ ಹೇಳಿಕೆ ನೀಡಿರುವ ಆರೋಗ್ಯ ಸಚಿವ ಡಾ. ಸುಧಾಕರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್, ಆಕ್ಸಿಜನ್ ಕೊರತೆಯಿಂದ ಸಾವುಗಳು ಎಲ್ಲೂ ಸಂಭವಿಸಿಲ್ಲ. ರೋಗಿಗಳು ಕೊನೆ ಗಳಿಗೆಯಲ್ಲಿ ಆಸ್ಪತ್ರೆಗೆ ಬರುತ್ತಿರುವುದರಿಂದ ಸಾವುಗಳು ಸಂಭವಿಸುತ್ತಿವೆ ಎಂದು ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ 6 ಸಾವಿರ ಲೀಟರ್ ದ್ರವ ವೈದ್ಯಕೀಯ ಆಕ್ಸಿಜನ್ ಇದೆ. ಆದರೆ, ಸಿಲಿಂಡರ್ಗಳ ಅಗತ್ಯವಿತ್ತು. ಮೈಸೂರಿನಿಂದ ಸಿಲಿಂಡರ್ ತರುವಲ್ಲಿ ಲೋಪವಾಗಿದೆ ಎಂದವರು ಹೇಳಿದ್ದಾರೆ.
ಮೂವರು ಮಾತ್ರ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿರುವ ಸಚಿವ ಸುಧಾಕರ್, ನಿನ್ನೆ ಭಾನುವಾರ ಬೆಳಗ್ಗೆ 7 ಗಂಟೆಯಿಂದ ಮಧ್ಯರಾತ್ರಿವರೆಗೆ 14 ಜನ ಸಾವನ್ನಪ್ಪಿದ್ದಾರೆ. ಇವರೆಲ್ಲರೂ ಕೊರೊನಾ ಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಮಧ್ಯರಾತ್ರಿ 12ರಿಂದ 3 ಗಂಟೆವರೆಗೆ ಮೂವರು ಸಾವನ್ನಪ್ಪಿದ್ದಾರೆ. ಮುಂಜಾನೆ 3 ಗಂಟೆಯಿಂದ 7 ಗಂಟೆಯವರೆಗೆ 7 ಜನ ಸಾವುನ್ನಪ್ಪಿದ್ದು, 24 ಗಂಟೆಯಲ್ಲಿ 23 ಜನರು ಮೃತಪಟ್ಟಿದ್ದಾರೆ ಎಂದಿದ್ದಾರೆ.
ನಿರ್ದಾಕ್ಷಿಣ್ಯ ಕ್ರಮಕ್ಕೆ ಸಿಎಂ ಎಚ್ಚರಿಕೆ
ಬೆಂಗಳೂರು, ಮೇ 3 – ಚಾಮರಾಜನಗರ ಘಟನೆ ಕುರಿತಾಗಿ ಮೈಸೂರು ಜಿಲ್ಲಾಧಿಕಾರಿ ಮೇಲೆ ಕೆಂಡಕಾರಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಘಟನೆ ವರದಿ ಬಂದ ನಂತರ ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.
24ಜನ ಆಕ್ಸಿಜನ್ ಕೊರತೆಯಿಂದ ಸಾವಿಗೀಡಾದ ಘಟನೆಯ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅವರಿಂದ ಸಂಪೂರ್ಣ ಮಾಹಿತಿ ಪಡೆದಿರುವ ಮುಖ್ಯಮಂತ್ರಿ, ತಕ್ಷಣವೇ ಚಾಮರಾಜನಗರ ಜಿಲ್ಲೆಗೆ ತೆರಳುವಂತೆ ಸೂಚಿಸಿದ್ದಾರೆ.
ಘಟನೆಗೆ ಏನು ಕಾರಣ, ಆಮ್ಲಜನಕ ಕೊರತೆ ಸೃಷ್ಟಿಯಾಗಿದ್ದು ಹೇಗೆ? ಎರಡೂ ಜಿಲ್ಲೆಗಳ ನಡುವೆ ಸಮನ್ವಯತೆ ಇರಲಿಲ್ಲವೇ ಎನ್ನುವ ಕುರಿತು ಸಮಾಲೋಚನೆ ನಡೆಸಿದರು.
ಈ ವೇಳೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆಮ್ಲಜನಕ ಪೂರೈಕೆ ಮಾಡುವ ಏಜೆನ್ಸಿಗೆ ಮೌಖಿಕ ಸೂಚನೆ ನೀಡಿ ಚಾಮರಾಜನಗರಕ್ಕೆ ಆಮ್ಲಜನಕ ಪೂರೈಕೆ ಮಾಡದಂತೆ ತಿಳಿಸಿದ್ದರು ಎನ್ನಲಾಗಿದೆ.
ನಿನ್ನೆ ರಾತ್ರಿ 12.30ರವರೆಗೂ ಮೈಸೂರಿನಿಂದ ಚಾಮರಾಜನಗರಕ್ಕೆ ಒಟ್ಟು 250 ಆಕ್ಸಿಜನ್ ಸಿಲಿಂಡರ್ಗಳನ್ನು ಕಳುಹಿಸಲಾಗಿದೆ. ಆಕ್ಸಿಜನ್ ಲಿಕ್ವಿಡ್ ಬಳ್ಳಾರಿಯಿಂದ ಚಾಮರಾಜನಗರಕ್ಕೆ ಬರಬೇಕಿತ್ತು. ಅದು ಸರಿಯಾದ ಸಮಯದಲ್ಲಿ ಬಂದಿದೆಯೋ, ಇಲ್ಲವೋ ಗೊತ್ತಿಲ್ಲ. ಈ ವಿಚಾರದಲ್ಲಿ ಮೈಸೂರು ಜಿಲ್ಲಾಡಳಿತ ವಿಳಂಬ ಮಾಡಿಲ್ಲ. ನಾವು ಅಧಿಕೃತವಾಗಿ 250 ಆಕ್ಸಿಜನ್ ಸಿಲಿಂಡರ್ಗಳನ್ನು ನಿನ್ನೆ ಮಧ್ಯರಾತ್ರಿಯ ವೇಳೆಗೆ ಕಳಿಸಿದ್ದೇವೆ. ಇದಕ್ಕೆ ದಾಖಲೆ ಇದೆ ಎಂದು ಜಿಲ್ಲಾಧಿಕಾರಿ ಮುಖ್ಯಮಂತ್ರಿಗೆ ತಿಳಿಸಿದ್ದಾರೆ.
ಹೀಗೆ ಜಿಲ್ಲಾಡಳಿತ ಸಮರ್ಥನೆ ಮಾಡಿಕೊಳ್ಳಲು ಮುಂದಾಗುತ್ತಿದ್ದಂತೆ, ಕೆಂಡಮಂಡಲರಾದ ಮುಖ್ಯಮಂತ್ರಿ, ತನಿಖಾ ವರದಿ ಬಂದ ನಂತರ ಮಾತನಾಡುವೆ ಎಂದು ಆ ಆಕ್ರೋಶದಲ್ಲೇ ದೂರವಾಣಿ ಕರೆಯನ್ನು ಕಡಿತ ಮಾಡಿದರು ಎಂದು ಗೊತ್ತಾಗಿದೆ.
ಇದನ್ನೆಲ್ಲಾ ನಂತರ ನೋಡೋಣ, ಮೊದಲು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಭಾಯಿಸಿ ಎಂದು ಸಿಎಂ ಯಡಿಯೂರಪ್ಪ ಸಚಿವ ಸುಧಾಕರ್ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ಕುಮಾರ್ ಅವರಿಗೆ ಸೂಚಿಸಿದ್ದಾರೆ.
ಸಿಎಂ ಭೇಟಿ ನಂತರ ಮಾತನಾಡಿದ ಸಚಿವ ಸುಧಾಕರ್, ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳ ನಡುವೆ ಸಮನ್ವಯತೆ ಕೊರತೆಯಿಂದ ಆಮ್ಲಜನಕ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿರಬಹುದು. ಈ ಹೊಂದಾಣಿಕೆಯ ನ್ಯೂನತೆ ಸರಿಪಡಿಸುವ ಕೆಲಸ ಮಾಡುತ್ತೇವೆ. ಚಾಮರಾಜನಗರಕ್ಕೆ ಹೋಗಿ ಸ್ಪಷ್ಟ ಮಾಹಿತಿ ನೀಡುತ್ತೇನೆ ಎಂದರು.
ಬೆಂಗಳೂರು, ಮೇ 3 – ಚಾಮರಾಜನಗರ ಆಸ್ಪತ್ರೆಯಲ್ಲಿ ರೋಗಿಗಳ ಸಾವಿನ ಪ್ರಕರಣ ಕುರಿತು ಸಮಗ್ರ ತನಿಖಾ ವರದಿ ನೀಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿರುವುದಾಗಿ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಹಮ್ಮಿಕೊಂಡಿದ್ದ ರಾಸಾಯನಿಕ ಸಿಂಪರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದ ಹಿನ್ನೆಲೆಯಲ್ಲಿ ಕೋವಿಡ್ ರೋಗಿಗಳು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಇವರ ಸಾವಿಗೆ ನಿಜವಾಗಿಯೂ ಇದ್ದ ಕಾರಣ ಏನು ಎಂಬುದರ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ. ಇದು ಅತ್ಯಂತ ದುಃಖಕರ ಸಂಗತಿ. ಈ ಘಟನೆ ಸಂಭವಿಸಬಾರದಾಗಿತ್ತು ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಪರಿಸ್ಥಿತಿ ನಿಭಾಯಿಸಲು ಆಗದಿದ್ದರೆ ಅಧಿಕಾರ ಬಿಟ್ಟು ಹೋಗಿ : ಡಿಕೆಶಿ ತರಾಟೆ
ಬೆಂಗಳೂರು, ಮೇ 3 – ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ 24 ಜನರ ಸಾವಿಗೆ ಹೊಣೆ ಯಾರು? ಎಂದು ಪ್ರಶ್ನಿಸಿ ರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ನಿಮ್ಮ ಕೈಯ್ಯಲ್ಲಿ ಪರಿಸ್ಥಿತಿ ನಿಭಾಯಿಸಲು ಆಗದಿದ್ದರೆ ಅಧಿಕಾರ ಬಿಟ್ಟು ಹೋಗಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಪ್ರಚಾರ ಪ್ರಿಯ ಸರ್ಕಾರ. ಈ ಸರ್ಕಾರ ಜನರ ನಂಬಿಕೆ ಕಳೆದುಕೊಂಡಿದೆ. ಆಕ್ಸಿಜನ್ ವಿಚಾರದಲ್ಲಿ ಯಾರೂ ಮೇಲ್ವಿಚಾರಣೆ ಮಾಡುತ್ತಿಲ್ಲ. ನಮ್ಮ ಶಾಸಕರು, ಮುಖ್ಯಮಂತ್ರಿಗಳನ್ನು ಭೇಟಿ ಮಾಡಬೇಕು ಎಂದು ಹೇಳಿದ್ದರು. ಅವರಿಗೆ ಮುಖ್ಯಮಂತ್ರಿಗಳು ಸಮಯಾವಕಾಶ ಕೊಟ್ಟಿದ್ದಾರೋ, ಇಲ್ಲವೋ ಗೊತ್ತಿಲ್ಲ. ಈ ಸರ್ಕಾರದಿಂದಾಗಲೀ ಮುಖ್ಯಮಂತ್ರಿಗಳಿಂದಾಗಲೀ, ಮಂತ್ರಿಗಳಿಂದಾಗಲೀ ಈ ಪರಿಸ್ಥಿತಿ ನಿಭಾಯಿಸಲು ಆಗುತ್ತಿಲ್ಲ. ಅವರ ಆದ್ಯತೆಗಳೇ ಬೇರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ನಮ್ಮ ಮರ್ಯಾದೆ ಹೋದರೂ ಪರವಾಗಿಲ್ಲ, ಶಾಸಕಾಂಗ ಪಕ್ಷದ ಸಭೆ ನಂತರ ನಾನೇ ಮುಖ್ಯಕಾರ್ಯದರ್ಶಿಗಳ ಸಮಾಯಾವಕಾಶ ಕೇಳಿ ಅವರು ಎಲ್ಲಿರುತ್ತಾರೋ, ಅಲ್ಲಿಗೇ ಹೋಗಿ ಭೇಟಿ ಮಾಡಿ ಈ ರಾಜ್ಯದ ಜನತೆಗೆ ವಾಸ್ತವಾಂಶ ಏನಿದೆ ಎಂದು ತಿಳಿಸಲು ಕೇಳಿಕೊಳ್ಳುತ್ತೇನೆ ಎಂದವರು ಹೇಳಿದ್ದಾರೆ.
ನನಗೆ ಬರುತ್ತಿರುವ ಕರೆಗಳನ್ನು ಸ್ವೀಕರಿಸಲು ನನಗೆ ಸಾಧ್ಯವಾಗುತ್ತಿಲ್ಲ. ಅವರನ್ನು ಎಲ್ಲಿಗೆ ಕಳುಹಿಸಬೇಕು, ಯಾರನ್ನು ಸಂಪರ್ಕಿಸಬೇಕು ಎಂಬುದು ತೋಚುತ್ತಿಲ್ಲ. ಜನ ಆಕ್ಸಿಜನ್ ಮಟ್ಟದ ಕುಸಿತದಿಂದ ಆತಂಕಕ್ಕೆ ಸಿಲುಕಿದ್ದಾರೆ. ನಮಗೆ ಮುಖ್ಯಕಾರ್ಯದರ್ಶಿಗಳು, ಆರೋಗ್ಯ ಇಲಾಖೆ ಕಾರ್ಯದರ್ಶಿಗಳ ಬದ್ಧತೆ ಬಗ್ಗೆ ಪ್ರಶ್ನೆ ಇಲ್ಲ. ಆದರೆ ಜನರಿಗೆ ವಾಸ್ತವಾಂಶವನ್ನು ನೀವಾದರೂ ತಿಳಿಸಿ. ತಜ್ಞರು ಎಂದು ಇಟ್ಟುಕೊಂಡಿರುವವರು ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ನಿಮ್ಮ ಕೈಯ್ಯಲ್ಲಿ ಪರಿಸ್ಥಿತಿ ನಿಭಾಯಿಸಲು ಆಗದಿದ್ದರೆ ಅಧಿಕಾರ ಬಿಟ್ಟು ಹೋಗಿ ಎಂದವರು ಆಗ್ರಹಿಸಿದ್ದಾರೆ.
ಆಕ್ಸಿಜನ್ ಕೊರತೆಯ ಸಾವಲ್ಲ, ಕೊಲೆ : ನ್ಯಾಯಾಂಗ ತನಿಖೆಗೆ ಸಿದ್ದು ಆಗ್ರಹ
ಬೆಂಗಳೂರು, ಮೇ 3 – ಆಕ್ಸಿಜನ್ ಕೊರತೆಯಿಂದ ಚಾಮ ರಾಜನಗರ ಜಿಲ್ಲಾ ಆಸ್ಪತ್ರೆಗೆಯಲ್ಲಿ 24 ಮಂದಿ ಸಾವಿಗೀಡಾಗಿರುವ ಘಟನೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ತಮ್ಮ ನಿವಾಸದಲ್ಲಿಂದು ಪತ್ರಿ ಕಾಗೋಷ್ಠಿ ಉದ್ದೇಶಿಸಿ ಮಾತ ನಾಡಿದ ಅವರು, ಘಟನೆಗೆ ಕಾರಣ ರಾದ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಬೇಕು, ಮೃತರ ಕುಟುಂಬದವರಿಗೆ ತಲಾ 25 ಲಕ್ಷ ರೂ.ಗಳ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಇದು ಸಾವುಗಳಲ್ಲ, ಸರ್ಕಾರವೇ ಮಾಡಿರುವ ಕೊಲೆಗಳು. ಈ ದುರಂತಕ್ಕೆ ಮುಖ್ಯಮಂತ್ರಿ, ಆರೋಗ್ಯ ಸಚಿವರು, ಜಿಲ್ಲಾ ಉಸ್ತುವಾರಿ ಮಂತ್ರಿಗಳೇ ಹೊಣೆ. ಈ ಎಲ್ಲರೂ ರಾಜೀನಾಮೆ ನೀಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.
ಚಾಮರಾಜನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ 23 ರೋಗಿಗಳು ಆಕ್ಸಿಜನ್ ಸಮಸ್ಯೆಯಿಂದಾಗಿ ಮರಣ ಹೊಂದಿದ್ದಾರೆ. ನನಗಿರುವ ಮಾಹಿತಿಯಂತೆ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ 180 ಬೆಡ್ಗಳಿದ್ದು, ಅದರಲ್ಲಿ 120 ಆಕ್ಸಿಜೆನ್ ಬೆಡ್ಗಳು 20 ವೆಂಟಿಲೇಟರ್ಗಳು ಇವೆ. ಈ ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ರತಿ ನಿತ್ಯ 350 ಆಕ್ಸಿಜನ್ ಸಿಲೆಂಡರ್ಗಳ ಅಗತ್ಯವಿದೆ. ಈ ಆಕ್ಸಿಜನ್ ಸಿಲಿಂಡರ್ಗಳು ಮೈಸೂರಿನ ಸದರನ್ ಮತ್ತು ಟರ್ಕಿ ಎಂಬ ಅಕ್ಸಿಜನ್ ಉತ್ಪಾದಕ ಘಟಕಗಳಿಂದ ಸರಬರಾಜಾಗುತ್ತಿವೆ.
ಇಲ್ಲಿ ಶುಕ್ರವಾರದಿಂದ ಆಕ್ಸಿಜನ್ ಸಮಸ್ಯೆಯಾಗಿದೆ. ಶನಿವಾರ ಕೇವಲ 30 ಸಿಲಿಂಡರ್ಗಳು ಸರಬರಾಜಾಗಿವೆ. ಚಾಮರಾಜನಗರದ ಅಧಿಕಾರಿಗಳು ಮೈಸೂರಿನ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ನಮ್ಮ ಮಾಜಿ ಸಂಸದರು, ಹಾಲಿ ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷರಾದ ಧ್ರುವನಾರಾಯಣ್, ಉಸ್ತುವಾರಿ ಸಚಿವ ಸುರೇಶ್ ಕುಮಾರ್ಗೆ ಸಂಪರ್ಕಿಸಿ, ಆಕ್ಸಿಜನ್ ಕೊರತೆಯಾಗುತ್ತಿರುವುದನ್ನು ಗಮನಕ್ಕೆ ತಂದಿದ್ದಾರೆ. ಆದರೆ ರಾಜ್ಯ ಸರ್ಕಾರ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. 30 ಸಿಲಿಂಡರ್ಗಳಲ್ಲಿ ಭಾನುವಾರ ರಾತ್ರಿ 9.00 ಗಂಟೆವರೆಗೆ ಆಸ್ಪತ್ರೆಯವರು ಆಕ್ಸಿಜನ್ ನೀಡಿದ್ದಾರೆ.
ಈ ಕೊಲೆಗಳಿಗೆ ಕಾರಣವಾದ ಸರ್ಕಾರವು, ಚಾಮರಾಜನಗರದಲ್ಲಾದ ದುರಂತ ಘಟನೆಯನ್ನು ತನಿಖೆ ಮಾಡಲು ಸರ್ಕಾರದ ಐ.ಎ.ಎಸ್. ಅಧಿಕಾರಿಯಾದ ಶಿವಯೋಗಿ ಕಳಸದ ಇವರನ್ನು ವಿಚಾರಣಾಧಿಕಾರಿಯಾಗಿ ನೇಮಿಸಲಾಗಿದೆ. ಈ ತನಿಖೆಯಿಂದ ಸತ್ಯ ಹೊರಬರಲು ಸಾಧ್ಯವಿಲ್ಲ. ಆದ್ದರಿಂದ ಅಲ್ಲಿನ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ, ತನಿಖೆ ಮಾಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಆಕ್ಸಿಜನ್ ಸಮಸ್ಯೆ ಶುಕ್ರವಾರದಿಂದಲೇ ಪ್ರಾರಂಭವಾಗಿದೆ. ಸರ್ಕಾರದಿಂದ ಆಕ್ಸಿಜನ್ ಒದಗಿಸಲು 3 ದಿನಗಳ ಅವಕಾಶವಿತ್ತು. ಈ ಅವಕಾಶವನ್ನು ಬಳಸಿಕೊಂಡು ಆಕ್ಸಿಜನ್ ಒದಗಿಸಿದ್ದರೆ 23 ಅಮಾಯಕ ಜನರು ಮರಣ ಹೊಂದುವ ಅನಿವಾರ್ಯಯತೆ ಉದ್ಭವವಾಗುತ್ತಿರಲಿಲ್ಲ.
ಜನರ ಸಾವಿಗೆ ಸರ್ಕಾರ ಕಾರಣವಾಗಿರುವುದರಿಂದ ಸತ್ತವರ ಸಾವನ್ನು ಸಹಜವೆಂದು ಭಾವಿಸಲಾಗದು. ಆದುದರಿಂದ ಈ ಅಮಾಯಕರ ಕೊಲೆಗಳಿಗೆ ಕಾರಣರಾಗಿರುವ ಮುಖ್ಯಮಂತ್ರಿಗಳು, ಆರೋಗ್ಯ ಮಂತ್ರಿಗಳು, ಜಿಲ್ಲಾ ಸಚಿವರು ಈ ಕೂಡಲೇ ರಾಜೀನಾಮೆ ನೀಡಿ ಹೊರ ನಡೆಯಬೇಕು ಎಂದವರು ಒತ್ತಾಯಿಸಿದ್ದಾರೆ.
ಆರೋಗ್ಯ ಸಚಿವ ಡಾ. ಸುಧಾಕರ್, ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡ ಯಡಿಯೂರಪ್ಪ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿಗಳನ್ನು ಸಂಪರ್ಕಕ್ಕೆ ತೆಗೆದುಕೊಂಡು ತೀವ್ರ ತರಾಟೆಗೆ ತೆಗೆದುಕೊಂಡರು.
ಈ ಘಟನೆ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿಯವರು ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣದ ಬಗ್ಗೆ ವರದಿ ಬರುತ್ತಿದ್ದಂತೆ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಘಟನೆಯನ್ನು ಖಂಡಿಸಿರುವ ಪ್ರತಿಪಕ್ಷಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಡಾ. ಸುಧಾಕರ್ ಅವರ ರಾಜೀನಾಮೆಗೆ ಒತ್ತಾಯಿಸಿವೆ.
ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತ್ಯೇಕ ಹೇಳಿಕೆಗಳನ್ನು ನೀಡಿ, ಸರ್ಕಾರದ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ. ಇದರ ಜವಾಬ್ದಾರಿಯನ್ನು ಮುಖ್ಯಮಂತ್ರಿಯವರೇ ಹೊರಬೇಕು ಎಂದು ಹೇಳಿದ್ದಾರೆ.
ತಜ್ಞರು ನೀಡಿರುವ ವರದಿಯನ್ನು ಕಡೆಗಣಿಸಿದ್ದಕ್ಕೆ ಜನ ಹಾದಿ ಬೀದಿಯಲ್ಲಿ ಸಾಯುವಂತಾಗಿದೆ ಎಂದು ಕಿಡಿಕಾರಿರುವ ಕುಮಾರಸ್ವಾಮಿ, ಇಂತಹ ಸರ್ಕಾರ ನಮಗೆ ಬೇಕೇ ಎಂದಿದ್ದಾರೆ.
ಮತ್ತೊಂದೆಡೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಘಟನೆಯ ಬಗ್ಗೆ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆಯಾಗಬೇಕು. ವರದಿ ಬರುವವರೆಗೆ ತಮ್ಮ ಸ್ಥಾನಗಳಿಂದ ಕೆಳಗಿಳಿಯಬೇಕೆಂದು ಆಗ್ರಹಿಸಿದ್ದಾರೆ.