ಜಗಳೂರು, ಮೇ 1- ತಾಲ್ಲೂಕಿನ ಮೆದಗಿನಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಿರ್ಮಿಸಿರುವ ಕೋವಿಡ್ ಕೇರ್ ಸೆಂಟರ್ಗೆ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಇಂದು ಭೇಟಿ ನೀಡಿ ಪರಿಶೀಲಿಸಿದರು.
ನಂತರ ಮಾತನಾಡಿದ ಅವರು, ಶಾಸಕ ಎಸ್.ವಿ. ರಾಮಚಂದ್ರ ಅವರ ಸೂಚನೆಯಂತೆ ತಾಲ್ಲೂಕಿನಲ್ಲಿ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದ್ದು ಸುಸಜ್ಜಿತ ಕಟ್ಟಡ, ಗಾಳಿ, ಬೆಳಕಿನ ವ್ಯವಸ್ಥೆ ಹೊಂದಿದ್ದು, 10 ಕೊಠಡಿಗಳಲ್ಲಿ 50 ಬೆಡ್ ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಇದೀಗ 11 ಜನ ಕೋವಿಡ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ಬಿಸಿ ನೀರು ಹಾಗೂ ಶುದ್ಧ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತಿದೆ.ಪೌಷ್ಠಿಕಾಂಶಯುಕ್ತ ಗುಣಮಟ್ಟದ ಆಹಾರ ವಿತರಿಸಲಾಗುತ್ತಿದೆ. ಅಲ್ಲದೆ ಪ್ರತ್ಯೇಕ ಶೌಚಾಲಯ, ಕೋವಿಡ್ ಔಷಧಿ ಪರಿಕರ ಸಂಗ್ರಹಣಾ ಕೊಠಡಿ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಹೊಂದಿದೆ. ಚಿಕಿತ್ಸೆ ನೀಡಲು ವೈದ್ಯರು,ಸಿಬ್ಬಂದಿಗಳು ಹಾಗೂ ಉಸ್ತುವಾರಿ ಗಾಗಿ ಸಹಾಯಕ ನೋಡಲ್ ಅಧಿಕಾರಿ ಮತ್ತು ಸದಸ್ಯರ ತಂಡವನ್ನು ನಿಯೋಜಿಸಲಾಗಿದೆ. ಅಗತ್ಯವಿದ್ದರೆ ಪಕ್ಕದ ಕಟ್ಟಡದಲ್ಲಿ 50 ಬೆಡ್ಗಳ ಕೋವಿಡ್ ಕೇರ್ ಸೆಂಟರ್ಗೆ ಸಕಲ ಸಿದ್ಧತೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್
ಡಾ. ನಾಗವೇಣಿ, ತಾ.ಪಂ. ಇಓ ಮಲ್ಲಾನಾಯ್ಕ, ಸಹಾಯಕ ನೋಡಲ್ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ
ಬಿ. ಮಹೇಶ್ವರಪ್ಪ, ಸದಸ್ಯ ಬಿಸಿಎಂ ಇಲಾಖೆಯ ನಿಲಯ ಮೇಲ್ವಿಚಾರಕ ದೇವೇಂದ್ರಪ್ಪ,
ವಸತಿ ಶಾಲೆ ಪ್ರಾಂಶುಪಾಲೆ ರೂಪ, ವಿಜಯಕುಮಾರ್ ಸೇರಿದಂತೆ, ಸಿಬ್ಬಂದಿಗಳು ಉಪಸ್ಥಿತರಿದ್ದರು.