ದಾವಣಗೆರೆ, ಮೇ 1- ಲಡಾಕ್ ಪ್ರಾಂತ್ಯದಿಂದ ನಿವೃತ್ತಿ ಹೊಂದಿ ತವರೂರಾದ ದಾವಣಗೆರೆಗೆ ಮರಳಿದ ಸೈನಿಕ ಸುಭೇದಾರ್ ರವಿಕುಮಾರ್ ಅವರನ್ನು ನಗರ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಇಂದು ಗೌರವಪೂರ್ವಕವಾಗಿ ಬರಮಾಡಿಕೊಂಡರು.
ನಗರದ ರೈಲ್ವೆ ನಿಲ್ದಾಣದಲ್ಲಿ ಬಂದಿಳಿದ ರವಿಕುಮಾರ್ ಅವರನ್ನು ಸನ್ಮಾನಿಸಿ, ತಮ್ಮ ಜೀವವನ್ನು ಪಣವಾಗಿಟ್ಟು ದೇಶ ರಕ್ಷಣೆಗೆ 25 ವರ್ಷಗಳ ಕಾಲ ಸಲ್ಲಿಸಿದ ಸೇವೆಯನ್ನು ಅಭಿನಂದಿಸಲಾಯಿತು.
ಇದೇ ವೇಳೆ ಮಾತನಾಡಿದ ಮೇಯರ್ ಎಸ್.ಟಿ. ವೀರೇಶ್, ನಮ್ಮ ಹಿಂಜಾವೇ ಸಂಘಟನೆಯಿಂದ ದೇಶ ಸೇವೆ ಸಲ್ಲಿಸಿ ಮರಳಿ ತವರೂರಿಗೆ ಬಂದ ಸೈನಿಕರನ್ನು ಗೌರವಪೂರ್ವಕವಾಗಿ ಸ್ವಾಗತಿಸುವ ಪದ್ಧತಿಯಂತೆ ಇಂದು ಸಹ ಸುಭೇದಾರ್ ರವಿಕುಮಾರ್ ಅವರನ್ನು ಸ್ವಾಗತಿಸಿರುವುದಾಗಿ ತಿಳಿಸಿದರು.
ದಾವಣಗೆರೆ ತಾಲ್ಲೂಕಿನ ಜರೀಕಟ್ಟೆ ಗ್ರಾಮದವರಾದ ರವಿಕುಮಾರ್ ಅವರು ದ್ವಿತೀಯ ಪಿಯುಸಿ ಪರೀಕ್ಷೆ ನಂತರ ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡಿದ್ದಾರೆ. ಹನ್ನೆರಡು ವರ್ಷ ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಸೇವೆ ಮಾಡಿದ್ದಾರೆ. ಇತ್ತೀಚಿಗೆ ಲಡಾಕ್, ಚೈನಾ ವಿರುದ್ಧದ ಯುದ್ಧ ಸಂದರ್ಭದಲ್ಲಿ ಯುದ್ಧ ಸಾರಿದ್ದಾರೆ. ಅಪಾಯಕಾರಿ ಯುದ್ಧ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ.
ಸುಭೇದಾರ್ ಮೇಜರ್ ಆಗಿ ನಿವೃತ್ತಿ ಪಡೆದು ಮರಳಿ ತಮ್ಮೂರಿಗೆ ಬಂದಿರುವುದು ಜಿಲ್ಲೆಗೆ ಹೆಮ್ಮೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ನಿವೃತ್ತ ಸೈನಿಕ ರವಿಕುಮಾರ್ ಮಾತನಾಡಿ, 1996ರಲ್ಲಿ ಭಾರತೀಯ ಸೇನೆಯಲ್ಲಿ ಸಿಪಾಯಿಯಾಗಿ ಸೇವೆ ಪ್ರಾರಂ ಭಿಸಿದೆ. ಹೈದರಾಬಾದ್‌ನಲ್ಲಿ ತರಬೇತಿ ಪಡೆದು, ರಾಜಸ್ಥಾನದ ಅಜ್ಮೀರ್‍ನಲ್ಲಿ ಎರ ಡೂವರೆ ವರ್ಷ. ನಂತರ ಅಸ್ಸಾಂ, ಜಾರ್ಖಂಡ್ ರಾಂಚಿ, ಜಮ್ಮು, ಕಾಶ್ಮೀರ ಭಾಗ ಹೀಗೆ ವಿವಿಧ ಕಡೆ ಸೇವೆ ಸಲ್ಲಿಸಿದ ನಂತರ ಅಂತಿಮವಾಗಿ ಲಡಾಖ್ ನಲ್ಲಿ ಎರಡು ವರ್ಷಗಳ ಸೇವೆ ಮುಗಿಸಿ ಸುದೀರ್ಘ 25 ವರ್ಷ 3 ತಿಂಗಳ ದೇಶ ಸೇವೆ ಸಂಪನ್ನಗೊಂಡಿದೆ. ಸಿಪಾಯಿಯಾಗಿ ಸುಭೇದಾರ್ ವರೆಗಿನ ಸೇವೆ ಹೆಮ್ಮೆ ತಂದಿದೆ ಎಂದು ಅನುಭವದ ಜೊತೆ ಸಂತಸ ಹಂಚಿಕೊಂಡರು.
ಈ ವೇಳೆ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಡಿ. ಗೋಣೆಪ್ಪ ಸೇರಿದಂತೆ ಸೈನಿಕ ಕುಟುಂಬದವರು ಇದ್ದರು.