ಮಹಾನಗರ ಪಾಲಿಕೆ `ಪರಿಹಾರ’ ಕ್ಕೆ ಬಂದ ದೂರುಗಳು 182

ಮೇಯರ್ ವೀರೇಶ್ ಅವರ ವಿನೂತನ ಪ್ರಯತ್ನಕ್ಕೆ ಉತ್ತಮ ಸ್ಪಂದನೆ

ದಾವಣಗೆರೆ, ಮೇ 1-  ಸಾರ್ವಜನಿಕರಿಂದ ದೂರು ಸ್ವೀಕರಿಸಿ, ಸ್ಪಂದಿಸಲು ಆರಂಭಿಸಲಾಗಿದ್ದ ಮಹಾನಗರ ಪಾಲಿಕೆ `ಪರಿಹಾರ’  ಹೆಸರಿನಡಿ ತೆರೆಯ ಲಾಗಿದ್ದ 8277234444 ವಾಟ್ಸಾಪ್‌ ಸಂಖ್ಯೆಗೆ ಕಳೆದ ಮಾರ್ಚ್ 20 ರಿಂದ ಏಪ್ರಿಲ್ 20ರವರೆಗೆ 182 ದೂರುಗಳು ಸಲ್ಲಿಕೆಯಾಗಿವೆ.

ನೀರು, ಸ್ವಚ್ಛತೆ, ಬೀದಿ ದೀಪ ಸೇರಿದಂತೆ ಶೀಘ್ರ ಇತ್ಯರ್ಥಪಡಿಸಬಲ್ಲ ದೂರುಗಳಿಗೆ ಪಾಲಿಕೆ ತಕ್ಷಣವೇ ಸ್ಪಂದಿಸಿದೆ. ಆದರೆ ರಸ್ತೆ ನಿರ್ಮಾಣ, ಕಾಂಪೌಂಡ್ ನಿರ್ಮಾಣ ಸೇರಿದಂತೆ ಸಮಯ ತೆಗೆದುಕೊಳ್ಳ ಬಹುದಾದ ಸಮಸ್ಯೆಗಳನ್ನು ಆಯಾ ವಿಭಾಗಗಳಿಗೆ ವರ್ಗಾಯಿಸಲಾಗಿದೆ.

ಪರಿಹಾರಕ್ಕೆ ಬಂದ ದೂರುಗಳ ಪೈಕಿ ಅತಿ ಹೆಚ್ಚು ಅಂದರೆ 68 ದೂರುಗಳು ಕಸ, ಚರಂಡಿ ಸ್ವಚ್ಛತೆ, ಕಸದ ಗಾಡಿ ಬಗ್ಗೆ, ರಸ್ತೆ ಸ್ವಚ್ಛತೆ ಬಗ್ಗೆ ಬಂದಿದ್ದು, ದೂರುಗಳನ್ನು ಸ್ವೀಕರಿಸಿದ ಆರೋಗ್ಯ ಇಲಾಖೆ ಬಹುತೇಕ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಿ,  ಸಾರ್ವಜನಿಕರಿಂದ ಮೆಚ್ಚುಗೆಯನ್ನೂ ಪಡೆಯುತ್ತಿದೆ.

ವಾಟರ್ ಟ್ಯಾಂಕ್, ಬೋರ್ ವೆಲ್ ನೀರಿನ ಬಗ್ಗೆ, ಛೇಂಬರ್ ಕ್ಲೀನ್, ರಸ್ತೆ ರಿಪೇರಿ, ನೀರಿನ ಪೈಪ್ ಒಡೆದಿರುವ ಬಗ್ಗೆ ಹಾಗೂ ಅಕ್ರಮವಾಗಿ ನಿರ್ಮಿಸಿರುವ ಮೆಟ್ಟಿಲು ಮತ್ತು ಸಜ್ಜ ತೆರವುಗೊಳಿಸುವ ಬಗ್ಗೆ 58 ದೂರುಗಳು ಬಂದಿದ್ದು ಪಾಲಿಕೆಯ ತಾಂತ್ರಿಕ ಶಾಖೆ ಸ್ಪಂದಿಸಿದೆ.

ಉಳಿದಂತೆ ಬೀದಿ ದೀಪ ದುರಸ್ತಿ ಬಗ್ಗೆ ವಿದ್ಯುತ್ ಶಾಖೆಗೆ 29 ದೂರುಗಳು ಬಂದರೆ, ಪಾರ್ಕ್ ಸ್ವಚ್ಛತೆ, ಫುಟ್ ಪಾತ್ ಮೇಲಿನ ಗಿಡಗಳ ರಕ್ಷಣೆ ಬಗ್ಗೆ ತೋಟಗಾರಿಕೆ ವಿಭಾಗಕ್ಕೆ 8 ದೂರುಗಳು ಮತ್ತು ಕಂದಾಯ ಶಾಖೆಗೆ ಸಂಬಂಧಿಸಿದಂತೆ ಕಂದಾಯ ಕಟ್ಟುವ ಬಗ್ಗೆ, ಖಾತಾ ಬದಲಾವಣೆ, ಮೊಬೈಲ್ ಟವರ್ ಹಾಕುವ ಬಗ್ಗೆ,  ರಸ್ತೆ ಬದಿ ಶೆಡ್‌ಗಳನ್ನು ತೆರವುಗೊಳಿಸುವ ಕುರಿತು 9 ದೂರುಗಳು ಬಂದಿವೆ. ಹಂದಿ ಮರಿ ಹಾಕಿದ ಬಗ್ಗೆ, ಹಂದಿ, ನಾಯಿಗಳ ಕಾಟದ ಬಗ್ಗೆ 10 ದೂರುಗಳು ಬಂದಿವೆ.

ನೀರು, ಬೀದಿ ದೀಪ, ಸ್ವಚ್ಛತೆ, ರಸ್ತೆ ಹೀಗೆ ಮಹಾನಗರ ಪಾಲಿಕೆ ವ್ಯಾಪ್ತಿಯ ಜನತೆ ವಾಸಿಸಲು ಬೇಕಾದ ಮೂಲಸೌಕರ್ಯಗಳನ್ನು ಕಲ್ಪಿಸುವುದು ಪಾಲಿಕೆಯ ಪ್ರಮುಖ ಕರ್ತವ್ಯಗಳಲ್ಲೊಂದು. ಈ ಸವಲತ್ತುಗಳಲ್ಲಿ ಏನಾದರೂ ವ್ಯತ್ಯಯವಾದರೆ ದೂರು ಸ್ವೀಕರಿಸಲೆಂದೇ ಒಂದು ವಿಭಾಗವಿರುತ್ತದೆ. ಇತ್ತೀಚೆಗೆ ನೂತನ ಮೇಯರ್ ಎಸ್.ಟಿ. ವೀರೇಶ್ ಅವರು, ಮುಂದುವರೆದ ತಂತ್ರಜ್ಞಾನ ಬಳಸಿಕೊಂಡು ಸಾರ್ವಜನಿಕರ ದೂರುಗಳಿಗೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದರು. 

ಇತ್ತೀಚೆಗೆ ಸಾಮಾಜಿಕ ಜಾಲ ತಾಣಗಳು ಅತ್ಯಂತ ಪ್ರಭಾವಿ ಮಾಧ್ಯಮಗಳಾಗಿದ್ದು, ಪ್ರತಿಯೊಬ್ಬರೂ ವಾಟ್ಸಾಪ್ ಬಳುಸುತ್ತಿದ್ದಾರೆ. ಹೀಗಾಗಿ ತಮ್ಮ ವಾರ್ಡ್‌ಗಳಲ್ಲಿನ ಸಮಸ್ಯೆ ಗಳನ್ನು ಚಿತ್ರ ಸಹಿತ ವಾಟ್ಸಾಪ್‌ ಸಂಖ್ಯೆಗೆ ಕಳುಹಿಸಿದರೆ ಸಂಬಂಧಿಸಿದ ವಿಭಾಗಕ್ಕೆ ದೂರೂ ವರ್ಗಾಯಿಸಿ, ಶೀಘ್ರ ಸಮಸ್ಯೆಗೆ ಸ್ಪಂದಿ ಸುವುದು ಮೇಯರ್ ಎಸ್.ಟಿ. ವೀರೇಶ್ ಅವರ ವಿನೂತನ ಪ್ರಯತ್ನವಾಗಿತ್ತು.

ಪರಿಹಾರ ವಾಟ್ಸಾಪ್ ಸಂಖ್ಯೆಗೆ ಬಂದ ದೂರುಗಳಿಗೆ ನಾವು ನಿರೀಕ್ಷಿಸಿದ ವೇಗದಲ್ಲಿ ಪಾರಿಹಾರ ಸಾಧ್ಯವಾಗದಿದ್ದರೂ ಆದಷ್ಟು ಶೀಘ್ರವಾಗಿ ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ. ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲು ಸಿಬ್ಬಂದಿಗಳಿಗೂ ತುಸು ಕಾಲಾವಕಾಶ ಬೇಕು ಎನ್ನುತ್ತಾರೆ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿರುವ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್.

ನಿಟುವಳ್ಳಿ ಕರಿಯಮ್ಮ ದೇವಸ್ಥಾನದ ಬಳಿ ಕಳೆದ ಆರು ತಿಂಗಳಿನಿಂದ ಬೀದಿ ದೀಪ ಕೆಟ್ಟು ಹೋಗಿತ್ತು. ಈ ಬಗ್ಗೆ ಪರಿಹಾರ ವಾಟ್ಸಾಪ್ ಸಂಖ್ಯೆಗೆ ಫೋಟೋ ಸಹಿತ ದೂರು ನೀಡಿದ್ದೆ. ಅತ್ತ ಕಡೆಯಿಂದ ನೋಟೆಡ್ ಎಂಬ ಮೆಸೇಜ್ ಬಂದಿತ್ತು. ಎರಡು ದಿನಗಳ ನಂತರ ಬಂದು ಪರಿಶೀಲಿಸಿ ಪೂರ್ಣ ಸೆಟ್ ಬದಲಿಸಬೇಕು ಸದ್ಯ ಸ್ಟಾಕ್ ಇಲ್ಲವೆಂದು ಹೇಳಿ ತೆರಳಿದ್ದರು. ನಾನು ಮತ್ತೊಮ್ಮೆ ದೂರು ನೀಡಿದಾಗ ಬಂದು ರಿಪೇರಿ ಮಾಡಿದರು ಎಂದು ವಸಂತ ಕುಮಾರ್ ಪತ್ರಿಕೆಗೆ ತಿಳಿಸಿದರು.

ಅಂದಹಾಗೆ ವಾಟ್ಸಾಪ್‌ ಸಂಖ್ಯೆಗೆ ಬರುತ್ತಿರುವ ದೂರುಗಳ ಜೊತೆ ಈ ಹಿಂದೆ ಇದ್ದ ಲ್ಯಾಂಡ್ ಲೈನ್‌ ಸಂಖ್ಯೆಗೂ ನಿತ್ಯ ಹತ್ತಾರು ದೂರುಗಳು ಬರುತ್ತಿವೆ.

error: Content is protected !!