ಟ್ರ್ಯಾಕ್ಟರ್ ನಲ್ಲಿದ್ದ ದೋಷ ಪ್ರಶ್ನಿಸಿದ್ದಕ್ಕೆ ಸುಳ್ಳು ದೂರು : ರೈತನ ಆರೋಪ

ದಾವಣಗೆರೆ, ಮೇ 1- ಖರೀದಿಸಿದ್ದ ಟ್ರ್ಯಾಕ್ಟರ್ ನಲ್ಲಿ ದೋಷವಿದ್ದ ಬಗ್ಗೆ ಪ್ರಶ್ನಿಸಿ, ಸರಿಪಡಿಸಿಕೊಡುವಂತೆ ಕೇಳಿದ ನನ್ನ ವಿರುದ್ಧವೇ ಟ್ರ್ಯಾಕ್ಟರ್ ಕಂಪನಿಯೊಂದು ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿದೆ ಎಂದು ಚನ್ನಗಿರಿ ತಾಲ್ಲೂಕು ಕಾರಿಗನೂರು ಗ್ರಾಮದ ರೈತ ಪಿ.ಎಂ. ಮುರುಗೇಶ್ ಆರೋಪಿಸಿದ್ದಾರೆ.

ನಗರದ ಓಂಕಾರ್ ಮೋಟಾರ್ನಲ್ಲಿ ಜನವರಿ 1ರಂದು ಸೋಲೀಸ್ ಟ್ರ್ಯಾಕ್ಟರ್ ಖರೀದಿಸಿದ್ದ ವೇಳೆ ಟ್ರ್ಯಾಕ್ಟ್‍ರ್ ಗುಣಮಟ್ಟ ಸರಿಯಿದೆ ಎಂದು ನೀಡಿದ್ದರು. ಆದರೆ, ಅದನ್ನು ನಾವು ತೆಗೆದುಕೊಂಡು ಹೋಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿದ ಸಂದರ್ಭದಲ್ಲಿ ಅತ್ಯಧಿಕ ಇಂಧನ ಉರಿಯುವುದು, ಕಾರ್ಯ ಚಟುವಟಿಕೆಯಲ್ಲಿ ವಿಳಂಬ ಸೇರಿದಂತೆ ಇತರೆ ದೋಷ ಕಂಡು ಬಂತು ಎಂದು ಸುದ್ದಿಗೋಷ್ಠಿಯಲ್ಲಿ ದೂರಿದ್ದಾರೆ.

ಕೂಡಲೇ ಶೋ ರೂಂಗೆ ಟ್ರ್ಯಾಕ್ಟರ್ ತಂದು ಅದರಲ್ಲಿರುವ ದೋಷದ ಬಗ್ಗೆ ಮಾಹಿತಿ ನೀಡಿ, ಸರಿಪಡಿಸಿಕೊಡುವಂತೆ ಕೇಳಿದಾಗ, ತಾತ್ಕಾಲಿಕವಾಗಿ ದುರಸ್ತಿ ಮಾಡಿಸಿದ್ದರು. ಆ ಬಳಿಕವೂ ಹಲವು ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಸರಿಪಡಿಸುವಂತೆ ಕೇಳಿಕೊಂಡರೂ ಅದನ್ನು ಸರಿಪಡಿಸದ ಮಾರಾಟಗಾರರು, ವಿದ್ಯಾನಗರ ಠಾಣೆಯಲ್ಲಿ ಶೋ ರೂಂನ ಪೀಠೋಪಕರಣ ಧ್ವಂಸ ಸೇರಿದಂತೆ ನನ್ನ ವಿರುದ್ಧವೇ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಮಧ್ಯ ಪ್ರವೇಶಿಸಿ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ರೈತರಾದ ಕಲ್ಲೇಶ್, ಕೆ.ಎಂ. ರಮೇಶ್, ಪಿ.ಇ. ಚಂದ್ರಶೇಖರ್ ಇದ್ದರು.

error: Content is protected !!