ಹೆಣ್ಣಿಗೆ ಬಲಿಷ್ಠ ಶಕ್ತಿ ಇದ್ದರು… ಬಲಿಷ್ಠ ಮನಸ್ಸಿಲ್ಲ….

ಮಾರ್ಚ್, 8ರ  ಈ ದಿನವನ್ನು  ವಿಶ್ವದಾದ್ಯಂತ ನಾಗರಿಕ ಜಾಗೃತಿ ದಿನ, ಲಿಂಗ ತಾರತಮ್ಯ ವಿರೋಧಿ ದಿನ,  ಮಹಿಳೆ ಮತ್ತು ಹೆಣ್ಣು ಮಕ್ಕಳ ದಿನ ಹಾಗೂ “ಅಂತರರಾಷ್ಟ್ರೀಯ ಮಹಿಳಾ ದಿನ”ವನ್ನಾಗಿ ಆಚರಿಸಲಾಗುವುದು.

ಅಂತರರಾಷ್ಟ್ರೀಯ  ಮಹಿಳಾ ದಿನಾಚರಣೆಯ ಐತಿಹಾಸಿಕ  ಹಿನ್ನೆಲೆಯನ್ನು   ಗಮನಿಸುವುದಾದರೆ  1909 ರ ಫೆಬ್ರವರಿ 28 ರಂದು  ಅಮೆರಿಕಾದ ಸಮಾಜವಾದಿ ಪಕ್ಷವು ನ್ಯೂಯಾರ್ಕ್ ನಗರದಲ್ಲಿ ಇಂತಹ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುವ ಪರಿಪಾಠವನ್ನು ಮೊದಲು ಜಾರಿಗೆ ತಂದಿತು.  ತರುವಾಯ ಈ ಪಕ್ಷವು ಅಂತರರಾಷ್ಟ್ರೀಯ ಸಮಾಜವಾದಿ ಸಂಸ್ಥೆಯಾಗಿ ರೂಪುಗೊಂಡಿತು. ಜರ್ಮನಿಯ  ಕ್ಲಾರಾ ಜೆಟ್ಕಿನ್ ಮತ್ತು ಇತರರು   1910 ರಲ್ಲಿ `ಅಂತರರಾಷ್ಟ್ರೀಯ ಸಮಾಜವಾದಿ ಮಹಿಳಾ ಸಮ್ಮೇಳನವನ್ನು’ ಆಯೋಜಿಸಿದ್ದರು. ಇದರ ಪರಿಣಾಮವಾಗಿ ಪ್ರತಿ ವರ್ಷ ವಿಶೇಷ ಮಹಿಳಾ ದಿನವನ್ನು ಆಚರಿಸುವ ಪರಿಪಾಠ ಜಾರಿಗೆ ಬಂದಿತು. ಮಹಿಳೆಯರು ತಮ್ಮ  ಹಕ್ಕುಗಳನ್ನು ಸಂರಕ್ಷಿಸಿಕೊಳ್ಳುವ ಸಲುವಾಗಿ ಜಾಗತಿಕ ಮಾನ್ಯತೆಯನ್ನು ಈ ಸಂದರ್ಭದಲ್ಲಿ ಪಡೆಯಲಾಯಿತು. ಇವರು ತಮ್ಮ ಹಕ್ಕುಗಳ ಉಳಿವಿಗಾಗಿ ಹೋರಾಟ ಪ್ರಾರಂಭಿಸಿದ್ದು, ಅಮೆರಿಕಾದಲ್ಲಿ ಮೊದಲಾದರೂ ನಂತರದಲ್ಲಿ ಅನೇಕ ಯುರೋಪಿಯನ್ ರಾಷ್ಟ್ರಗಳ ಹಾಗೂ  ರಷ್ಯಾದ ಮಹಿಳೆಯರು ಸಹ ಇಂತಹ ಹೋರಾಟ ಪ್ರಾರಂಭಿಸಿದರು.

1917 ರಲ್ಲಿ ಸೋವಿಯೆತ್ ರಷ್ಯಾವು ಮಾರ್ಚ್ 8 ರ ಈ ದಿನವನ್ನು ರಾಷ್ಟ್ರೀಯ  ರಜಾ ದಿನವನ್ನಾಗಿ ಘೋಷಿಸಿ, ಮಹಿಳಾ ದಿನಾಚರಣೆಯನ್ನು ಆಚರಿಸಲು ಆರಂಭಿಸಿತು. 1977ರಲ್ಲಿ  ವಿಶ್ವಸಂಸ್ಥೆಯು ಮಹಿಳಾ ದಿನಾಚರಣೆಯನ್ನು ಆಚರಿಸುವ ಪರಿಪಾಠವನ್ನು ಜಾರಿಗೆ ತಂದಿತು.ಅದರಂತೆ  ಪ್ರತಿ ವರ್ಷ ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸುವ ಸಂಪ್ರದಾಯ ರೂಢಿಗೆ  ಬಂದಿದೆ. 

ಪ್ರತಿ ಮಹಿಳೆಯೂ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುವ ದಿನವಿದು. ಆದರೆ ಎಷ್ಟೋ ಸಂದರ್ಭಗಳಲ್ಲಿ ಈ ದಿನವೇ ಮಹಿಳೆ ಶೋಷಣೆಗೆ, ಅತ್ಯಾಚಾರಕ್ಕೆ, ವರದಕ್ಷಿಣೆಯ ದಾಹಕ್ಕೆ ತುತ್ತಾಗಿ  ಸಾವಿಗೆ ಶರಣಾಗಿರುವುದನ್ನು ಕೇಳಿದ್ದೇವೆ. ಮಹಿಳೆಗೆ ರಕ್ಷಣೆಯೇ ಇಲ್ಲದೆ ಹೋದರೆ ಇಂತಹ ಆಚರಣೆಗಳಿಂದ  ಆಗುವ ಪ್ರಯೋಜನವಾದರೂ ಏನು ?  ಯಾವ ಉದ್ದೇಶಕ್ಕಾಗಿ ಈ ಆಚರಣೆಗಳನ್ನು ಮಾಡಬೇಕು? ಎಂಬಿತ್ಯಾದಿ ಪ್ರಶ್ನೆಗಳು ಎಲ್ಲರಲ್ಲಿ  ಮೂಡುವುದು ಸಹಜ.  ಇಲ್ಲಿ ಎಲ್ಲದಕ್ಕಿಂತ  ಮುಖ್ಯವಾಗಿ ಮಹಿಳೆಯರಿಗೆ  ಸರ್ವ ವಿಧದಲ್ಲೂ ಆಗುತ್ತಿರುವ ಶೋಷಣೆಯನ್ನು ತಪ್ಪಿಸಬೇಕು. ಅವಳಿಗೆ ಸರ್ಕಾರಗಳಿಂದ ಪುರುಷರಿಗೆ ಸಮಾನವಾಗಿ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಮೊದಲು ಅವಳಿಗೆ ಕಾನೂನುಗಳು ಹೇಗೆ ಕಷ್ಟ ಕಾಲದಲ್ಲಿ  ನೆರವಾಗುತ್ತವೆ ಎಂಬುದರ ಬಗ್ಗೆ ಸೂಕ್ತ ತಿಳಿವಳಿಕೆ ನೀಡಬೇಕು. 

ಸ್ವಾತಂತ್ರ್ಯ ಲಭಿಸಿ 75 ವರ್ಷಗಳಾಗುತ್ತಾ ಬಂದರೂ ಮಹಿಳೆಯರಿಗೆ   ಸಿಗಬೇಕಾದ ಸವಲತ್ತುಗಳು ಇನ್ನೂ ಸರಿಯಾಗಿ  ದೊರಕಿಲ್ಲ. ಸಂಸತ್ತಿನಲ್ಲಿ   ಹಲವು ಸಲ ಮಹಿಳಾ ಮಸೂದೆಯನ್ನು ಮಂಡಿಸಿದರೂ,  ಅದು ಇದುವರೆಗೂ ಕಾಯಿದೆಯಾಗಿ  ಜಾರಿಗೆ ಬಂದಿಲ್ಲ.ಇದಕ್ಕೆ  ಸರ್ಕಾರಗಳ ಇಚ್ಚಾಶಕ್ತಿಯ ಕೊರತೆಯೇ ಕಾರಣ. ಈ ಎಲ್ಲಾ  ಅಡೆತಡೆಗಳ ಮಧ್ಯೆಯೂ   ಮಹಿಳೆಯರು ತಮ್ಮ ಸ್ವಂತ ಬಲದಿಂದ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಢಿಸಿದ್ದಾರೆ. 

ಈಗ ಕಾಲ, ಮನಸ್ಥಿತಿ ಎಲ್ಲವೂ ಬದಲಾಗಿದ್ದು, ಮಹಿಳೆ ಅಡುಗೆ ಮನೆಗೆ ಮಾತ್ರ ಸೀಮಿತವಾಗಿರದೆ  ಮನೆಯಿಂದ ಹೊರ ಬಂದು ಶಿಕ್ಷಣ ಪಡೆದು ಉದ್ಯೋಗಮುಖಿಯಾಗಿ ತಂದೆಗೆ, ಪತಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿದ್ದಾಳೆ. `ಹೆಣ್ಣು ಹೆಣ್ಣೆಂದೇತಕೆ ಬೀಳುಗಳೆವಿರಿ ಕಣ್ಣು ಕಾಣದ ಗಾವಿಲರು’ ಎಂಬಂತೆ  ಹಾಗೂ `ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗೀತು’ಎಂಬ ನಾಣ್ನುಡಿಯಂತೆ ಮಹಿಳೆ ಇಂದು ಡ್ರೈವಿಂಗ್‌ನಿಂದ ಪೈಲೆಟ್ ವರೆಗೆ, ಶಿಕ್ಷಕ  ಹುದ್ದೆಯಿಂದ ವಿಶ್ವವಿದ್ಯಾಲಯದ ಕುಲಪತಿಯವರೆಗೆ, ಗ್ರಾಮ ಪಂಚಾಯತಿ ಸದಸ್ಯತ್ವದಿಂದ ರಾಷ್ಟ್ರಪತಿ ಹುದ್ದೆಯವರೆಗೆ ಸ್ಥಾನವನ್ನು ಅಲಂಕರಿಸಿದ್ದಾಳೆ.  ಮಹಿಳೆ  ಆರ್ಥಿಕವಾಗಿ ಸ್ವಾವಲಂಬಿ ಮತ್ತು  ಸದೃಢವಾಗಬೇಕಾದರೆ ಮೊದಲು ಶಿಕ್ಷಣವನ್ನು ಅಗತ್ಯವಾಗಿ ಪಡೆಯಲೇಬೇಕು.  ಸದೃಢ ಹಾಗೂ ಬಲಿಷ್ಠ ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರ ಪಾತ್ರವನ್ನು ಎಂದಿಗೂ  ಅಲ್ಲಗಳೆಯುವಂತಿಲ್ಲ. ಇಂತಹ ಸದುದ್ದೇಶದ ಹಿನ್ನೆಲೆಯಲ್ಲಿ  ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ  ಆಚರಿಸಿ, ನೀವೇ ಸಮಾಜದ ನಿಜವಾದ ವಾಸ್ತುಶಿಲ್ಪಿಗಳು ಎಂಬ ಭಾವನೆಯನ್ನು ಅವರಲ್ಲಿ ಹುಟ್ಟು ಹಾಕಬೇಕು.


ಡಾ. ಶಿವಯ್ಯ ಎಸ್. 
ವಿಶ್ರಾಂತ ಪ್ರಾಧ್ಯಾಪಕರು  ದಾವಣಗೆರೆ.
[email protected]

 

error: Content is protected !!