ಸಾಣೇಹಳ್ಳಿ ನಾಟಕೋತ್ಸವದಲ್ಲಿ `ಶ್ರೀ ಶಿವಕುಮಾರ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ರಂಗ ಕಲಾವಿದ ಕೆ.ವಿ. ನಾಗರಾಜಮೂರ್ತಿ
ಸಿರಿಗೆರೆ, ನ.7- ರಂಗಭೂಮಿ ಕೇವಲ ಮನೋರಂಜನೆಯ ಮಾಧ್ಯಮವಲ್ಲ. ಪ್ರತಿಭಟನೆಯ ಮಾಧ್ಯಮವೂ ಹೌದು ಎಂದು ರಂಗ ಕಲಾವಿದ ಕೆ.ವಿ. ನಾಗರಾಜಮೂರ್ತಿ ಹೇಳಿದರು.
ಇಲ್ಲಿನ ಶ್ರೀ ಶಿವಕುಮಾರ ಕಲಾಸಂಘ ಆಯೋಜಿಸಿದ್ದ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ `ಶ್ರೀ ಶಿವಕುಮಾರ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ಅವರು, ರಂಗಶಿಕ್ಷಣ ವನ್ನು ಕೊಡುವ ಏಕೈಕ ಸ್ಥಳ ಸಾಣೇಹಳ್ಳಿ ಎಂದು ಹೇಳಿದರು.
ಟಿ.ವಿ ಚಾನೆಲ್‍ಗಳು ಜನರನ್ನು ದಿಕ್ಕುತಪ್ಪಿ ಸುತ್ತಿವೆ. ಸತ್ಯವಾದ, ನಿಜವಾದ ಮಾಧ್ಯಮ ರಂಗಭೂಮಿ ಮಾತ್ರ. ರಂಗಭೂಮಿಯಲ್ಲಿ ಕೆಲಸ ಮಾಡುವುದೇ ದೇವರ, ಸಮಾಜದ ಕೆಲಸ ಎಂದು ಹೇಳಿದರು.
ಅನೇಕ ಸಂಶಯಗಳ ನಡುವೆ ರಂಗಕಲಾ ವಿದರು ಬದುಕಬೇಕಾದ ಅನಿವಾರ್ಯತೆಯಿದೆ. ಸರಕಾರಿ ಶಾಲಾ ಮಕ್ಕಳಿಗೋಸ್ಕರ `ಅಲ್ಲಮ’ ಎನ್ನುವ ರಂಗಶಾಲೆಯನ್ನು ನನ್ನ ಹುಟ್ಟೂರಿನಲ್ಲಿ ಆರಂಭಿಸಿದ್ದೇನೆ. ಒಮ್ಮೆ ರಾಜ್ಯೋತ್ಸವ ಪ್ರಶಸ್ತಿ ತಿರಸ್ಕರಿಸಿದ್ದೆ. ಆದರೆ ಸಾಣೇಹಳ್ಳಿಯ ಪ್ರಶಸ್ತಿ ನನಗೆ ದೊಡ್ಡ ಗೌರವ ಎಂದರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡುತ್ತಾ, ಭಾರತ ಬದುಕಿರುವುದು ಗ್ರಾಮಗಳಲ್ಲಿ. ಗ್ರಾಮಗಳನ್ನು ಉಪೇಕ್ಷೆ ಮಾಡಿ ದರೆ ಭಾರತ ಬೆಳೆಯಲು, ಬೆಳಗಲು ಸಾಧ್ಯವಿಲ್ಲ ಎಂದರು.
ಪ್ರತಿವರ್ಷ ನಾಟಕೋತ್ಸವದ ಸಂದರ್ಭ ದಲ್ಲಿ `ಶ್ರೀ ಶಿವಕುಮಾರ ಪ್ರಶಸ್ತಿ’ಯನ್ನು ವಿತರಿಸುತ್ತ ಬರಲಾಗಿದೆ. ಈ ವರ್ಷ ಆ ಪ್ರಶಸ್ತಿಗೆ ಭಾಜನರಾಗಿರುವವರು ಕೆ.ವಿ. ನಾಗರಾಜ ಮೂರ್ತಿಯವರು. ಅವರು ತಮ್ಮ ರಂಗಚಟು ವಟಿಕೆ, ಅಭಿನಯ, ಸಂಘಟನೆಯ ಮೂಲಕವೇ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದರು.
ರಂಗಭೂಮಿ ನಿಂತ ನೀರಲ್ಲ. ಅದು ಜಂಗಮಶೀಲ. ಸಮಾಜದ ಮುಖಕ್ಕೆ ಹಿಡಿದ ಕನ್ನಡಿ ರಂಗಭೂಮಿ. ಕಳೆದ 24 ವರ್ಷಗಳಿಂದ ಕನ್ನಡಿ ಹಿಡಿಯುವ ಕಾರ್ಯವನ್ನು ಶಿವಸಂಚಾರ ವ್ಯವಸ್ಥಿತವಾಗಿ ಮಾಡುತ್ತಾ ಬಂದು ಬೆಳ್ಳಿ ಹಬ್ಬಕ್ಕೆ ಕಾಲಿಟ್ಟಿದೆ. ಸಿಂಹಾವಲೋಕನ ಮಾಡಿದರೆ ನೋವು, ನಲಿವು ಎರಡೂ ಸಮಸಮವಾಗಿ ಕಂಡುಬಂದಿವೆ. ನೋವಿಗೆ ಅಂಜದೆ, ನಲಿವಿಗೆ ಹಿಗ್ಗದೆ ಮಾಡುವ ಕಾರ್ಯವನ್ನು ಒಂದು ಕಾಯಕ ಎಂದು ಭಾವಿಸಿಕೊಂಡು ಶ್ರದ್ಧೆಯಿಂದ ಮಾಡುತ್ತ ಬಂದಿರುವ ಕಾರಣದಿಂದಾಗಿ ಇಂದು ಸಾಣೇಹಳ್ಳಿ ರಂಗಭೂಮಿಯ ಪ್ರಮುಖ ಕೇಂದ್ರ ಎನ್ನುವಂತಾಗಿದೆ ಎಂದು ಹೇಳಿದರು.
ವರ್ಷದಿಂದ ವರ್ಷಕ್ಕೆ ನಮ್ಮ ಜವಾಬ್ದಾರಿಯೂ ಹೆಚ್ಚುತ್ತಲಿದೆ. ಬೆಳ್ಳಿ ಹಬ್ಬದ ನಿಮಿತ್ತ ವರ್ಷದುದ್ದಕ್ಕೂ ಹಲವಾರು ಜನಪರ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕೆಂಬ ಸದಾಶಯ ನಮ್ಮ ಸಂಘಟನೆಯದಾಗಿದೆ. ಅದಕ್ಕೆ ಸಾರ್ವಜನಿಕರು ಈ ಹಿಂದಿನಂತೆ ಸಹಕಾರ ನೀಡುವರೆಂದು ಭಾವಿಸಿದ್ದೇವೆ. ಈ ವರ್ಷ ರಂಗದಾಸೋಹಿಗಳನ್ನು ಆಯಾ ದಿನವೇ ವೇದಿಕೆಯ ಮೇಲೆ ಗೌರವಿಸಲು ಸಾಧ್ಯವಾಗಿಲ್ಲ. ಈ ನೆಲೆಯಲ್ಲೇ ರಂಗದಾಸೋಹಿಗಳಿಗೆ ನಾಟಕೋತ್ಸವದ ಸಂದರ್ಭದಲ್ಲಿ ಶ್ರದ್ಧೆಯಿಂದ ದುಡಿದವರಿಗೆ ಇದೇ ನವೆಂಬರ್ 16ರಂದು ಮದ್ಯಾಹ್ನ 2 ಗಂಟೆಗೆ ಸಾಣೇಹಳ್ಳಿಯಲ್ಲಿ ಒಂದು ಔತಣ ಕೂಟ ಏರ್ಪಡಿಸಿ ಗೌರವಿಸಬೇಕೆಂಬುದು ನಮ್ಮ ಸಂಘಟಕರ ಅಭಿಪ್ರಾಯ ಎಂದರು.
ಹೊಸದುರ್ಗದ ಶಾಸಕ ಗೂಳಿಹಟ್ಟಿ ಡಿ.ಶೇಖರ್, ನಾಟಕಕಾರ, ತೆರಿಗೆ ಇಲಾಖೆಯ ಆಯುಕ್ತ ಜಯರಾಮ್ ರಾಯಪುರ, ರಂಗಕರ್ಮಿ ಶ್ರೀನಿವಾಸ ಜಿ ಕಪ್ಪಣ್ಣ, ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್, ಬಿಗ್ ಬಾಸ್ ಖ್ಯಾತಿಯ ಪಾವಗಡ ಮಂಜು ಮಾತನಾಡಿದರು.