ಅಪ್ರಾಪ್ತೆಯ ಮದುವೆಗೆ ನಡೆದಿದ್ದ ಸಿದ್ಧತೆ : ತಡೆ

ದಾವಣಗೆರೆ, ಮೇ 2- ಅಪ್ರಾಪ್ತೆಯನ್ನು 32 ವರ್ಷದ ಯುವಕನಿಗೆ ಸೋಮವಾರ ಮದುವೆ ಮಾಡಲು ಸಿದ್ಧತೆ ನಡೆಸಿದ್ದ ಹಿನ್ನೆಲೆಯಲ್ಲಿ ಮಕ್ಕಳ ಸಹಾಯವಾಣಿ ಕೊಲ್ಯಾಬ್ ಡಾನ್ ಬಾಸ್ಕೋ, ಗ್ರಾಮ ಪಂಚಾಯತ್, ಸಿಡಿಪಿಓ ಕಚೇರಿ ಅಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ತಂಡ ಬಾಲ್ಯ ವಿವಾಹ ತಡೆಯುವಲ್ಲಿ ಯಶಸ್ವಿಯಾಗಿದೆ. 

ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ 32 ವರ್ಷದ ಯುವಕನೊಂದಿಗೆ ಅಪ್ರಾಪ್ತೆಯನ್ನು ಮೇ 3ರಂದು ಮದುವೆ ಮಾಡಿಕೊಡಲು ಸಿದ್ಧತೆ ನಡೆದಿದ್ದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಮಕ್ಕಳ ಸಹಾಯವಾಣಿ ಕೊಲ್ಯಾಬ್ ಡಾನ್ ಬಾಸ್ಕೋ ತಂಡದ ಸಂಯೋಜಕ ಟಿ.ಎಂ. ಕೊಟ್ರೇಶ್, ಕುರ್ಕಿ ಗ್ರಾಮ ಪಂಚಾಯಿತಿ ಪಿಡಿಓ ಸುರೇಖಾ, ಶಿಶು ಅಭಿವೃದ್ಧಿ ಯೋಜನೆಯ ಹಿರಿಯ ಮೇಲ್ವಿಚಾರಕರಾದ ಮೈತ್ರಾದೇವಿ, ಮೇಲ್ವಿಚಾರಕಿ ಕೆ.ಸಿ.ಪ್ರಮೀಳಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಮತಾ, ಮಾಯಕೊಂಡ ಠಾಣೆ ಎಎಸ್‍ಐ ಮೂರ್ತಿ, ಕಾನ್‌ಸ್ಟೇಬಲ್ ಟಿ. ತಿಮ್ಮಪ್ಪ, ಚಾಲಕ ಮಾರುತಿ ಅವರನ್ನು ಒಳಗೊಂಡ ತಂಡ ಅಪ್ರಾಪ್ತೆ ಮನೆಗೆ ಭಾನುವಾರ ಭೇಟಿ ನೀಡಿತ್ತು. 

ಅಪ್ರಾಪ್ತೆಯ ಮನೆಯ ಮುಂದೆ ಚಪ್ಪರ ಹಾಕಿ, ಮದುವೆ ಸಿದ್ಧತೆ ನಡೆಸಿದ್ದನ್ನು ತಂಡವು ಗಮನಿಸಿತು. ಬಾಲಕಿಯ ತಂದೆ, ತಾಯಿ, ಸಂಬಂಧಿಗಳನ್ನು ತಂಡವು ಭೇಟಿ ಮಾಡಿ, ಬಾಲಕಿಯ ಶಾಲಾ ದಾಖಲಾತಿ ಸಂಗ್ರಹಿಸಿ, ಪರಿಶೀಲಿಸಿದಾಗ ಮಗುವಿನ ವಯಸ್ಸು 16 ವರ್ಷ 11 ತಿಂಗಳಾಗಿರುವುದು ಕಂಡು ಬಂದಿತು. 

ಬಾಲ್ಯ ವಿವಾಹ ನಿಷೇಧ ಕಾಯ್ದೆ ಪ್ರಕಾರ ಬಾಲ್ಯ ವಿವಾಹ ಮಾಡಿದರೆ 1 ವರ್ಷಕ್ಕೆ ಕಡಿಮೆ ಇಲ್ಲದಂತೆ 2 ವರ್ಷಕ್ಕೆ ವಿಸ್ತರಿಸಬಹುದಾದ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ ಅಥವಾ ಎರಡನ್ನೂ ವಿಧಿಸಬಹುದೆಂದು ಎಚ್ಚರಿಸಲಾಯಿತು.

ಬಾಲಕಿಯ ಹೆತ್ತವರು, ಕುಟುಂಬ ವರ್ಗಕ್ಕೆ ಕಾನೂನು ಬಗ್ಗೆ ತಂಡವು ಅರಿವು ಮೂಡಿಸಿತು. ಆಗ ಬಾಲಕಿಯ ಸಂಬಂಧಿಗಳು ವರನ ತಾಯಿಯು ಅನಾರೋಗ್ಯದಿಂದ ಇದ್ದು, ಇದೇ ಕಾರಣಕ್ಕಾಗಿ ಮದುವೆ ಮಾಡುತ್ತಿದ್ದೇವೆ. 

ಮದುವೆ ಮಾಡಲು ಬಿಡಿ ಎಂಬುದಾಗಿ ಪಟ್ಟುಹಿಡಿದರು. ಕೊನೆಗೆ ಕಾನೂನು ಶಿಕ್ಷೆಯ ತೀವ್ರತೆಯ ಬಗ್ಗೆ ಅಧಿಕಾರಿಗಳು, ಮಕ್ಕಳ ಸಹಾಯವಾಣಿ ಸಂಯೋಜಕರು ಮನವರಿಕೆ ಮಾಡಿಕೊಟ್ಟು, ಬಾಲಕಿಯನ್ನು ವಶಕ್ಕೆ ಪಡೆದು, ಸೂಕ್ತ ಪೋಷಣೆ ಮತ್ತು ರಕ್ಷಣೆಗಾಗಿ ದಾವಣಗೆರೆಯ ಬಾಲಕಿಯರ ಬಾಲ ಮಂದಿರಕ್ಕೆ ದಾಖಲಿಸಲಾಗಿದೆ.

error: Content is protected !!