ವೇಟ್ ಲಿಫ್ಟಿಂಗ್ ಸ್ಪರ್ಧೆಯ ಸಮಾರೋಪದಲ್ಲಿ ಡಾ. ನಾಗಪ್ರಕಾಶ್
ದಾವಣಗೆರೆ, ನ.3- ದೇಹ ದಂಡಿಸಬೇಕು, ಆದರೆ ಅತಿಯಾಗಿ ದಂಡಿಸುವುದರಿಂದ ಆರೋಗ್ಯಕ್ಕೆ ಹಾನಿಕರ ಎಂದು ಡಾ. ಬಿ.ಎಸ್. ನಾಗಪ್ರಕಾಶ್ ಮುನ್ನೆಚ್ಚರಿಸಿದರು.
ಅವರು, ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ವೇಟ್ ಲಿಫ್ಟರ್ ಅಸೋಸಿಯೇಷನ್, ದಾವಣಗೆರೆ ಜಿಲ್ಲಾ ವೇಟ್ ಲಿಫ್ಟಿಂಗ್ ಅಸೋಸಿಯೇಷನ್, ನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ವೇಟ್ ಲಿಫ್ಟಿಂಗ್ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ದೇಹವನ್ನು ಬಲಶಾಲಿಯಾಗಿಸಲು ದೇಹ ದಂಡಿಸುವ ಕ್ರಮ ಮಿತವಾಗಿರಬೇಕು. ಮಿತಿ ಮೀರಿ ಅತಿಯಾಗಿ ದಂಡಿಸಿ, ದೇಹಕ್ಕೆ ಶಿಕ್ಷಿಸುವಂತಹ ಒತ್ತಡವಾದರೆ ಅದು ಆರೋಗ್ಯ ಮತ್ತು ಜೀವಹಾನಿಯಂತಹ ಅಪಾಯಕ್ಕೆ ದಾರಿ ಮಾಡಿಕೊಟ್ಟಂತಾಗಲಿದೆ ಎಂದು ಕಿವಿಮಾತು ಹೇಳಿದರು.
ಕನ್ನಡ ಚಿತ್ರರಂಗದ ನಾಯಕ ನಟ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಾವಿನ ಪ್ರಕರಣದ ನಂತರ ಜಿಮ್ ಸೇರಿದಂತೆ ದೇಹ ದಂಡಿಸುವವರಲ್ಲಿ ದಿಗಿಲು ಬಡಿದಂತಾಗಿದ್ದು, ಆರೋಗ್ಯದ ಬಗ್ಗೆ ಅತೀವ ಕಾಳಜಿ ವಹಿಸುತ್ತಾ ಮುನ್ನೆಚ್ಚರಿಕಾ ದೃಷ್ಟಿಯಿಂದ ಇಸಿಜಿ ಮಾಡಿಸಲು ಮುಂದಾಗಿದ್ದು, ಇದಕ್ಕೆ ನನ್ನ ಬಳಿ ಬಂದು ದೇಹ ದಂಡಿಸುವವರು ನಾ ಮುಂದು ತಾ ಮುಂದು ಎನ್ನುತ್ತಾ ಇಸಿಜಿಗೆ ಮುಗಿಬಿದ್ದಿರುವುದೇ ಉದಾಹರಣೆ. ದೇಹ ದಂಡಿಸಿ, ಆದರೆ ದೇಹಕ್ಕೆ ದಂಡನೆ (ಶಿಕ್ಷೆ) ಬೇಡ ಎಂದು ಸಲಹೆ ನೀಡಿದರು.
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತ್ ರಾವ್ ಜಾಧವ್ ಮಾತನಾಡಿ, ದೇಶದಲ್ಲಿ ಪರಿಶುದ್ಧತೆ ಉಳಿದಿರುವುದು ಕ್ರೀಡೆ, ಸೈನ್ಯ, ಕಲಾವಿದರ ಕ್ಷೇತ್ರಗಳಷ್ಟೇ. ಈ ಮೂರು ಕ್ಷೇತ್ರಗಳು ಸ್ವಂತ ಪರಿಶ್ರಮದ ಮೇಲೆ ನಿಂತಿವೆ. ಇಲ್ಲಿ ಯಾವುದೇ ಜಾತಿ, ರಾಜಕೀಯ ಬೆರೆತಿಲ್ಲ. ಕಲಾವಿದರು, ಕ್ರೀಡಾಪಟುಗಳು, ಯೋಧರ ಸೇವೆಗೆ ಸಾವಿಲ್ಲ. ಇವರು ಅಮರರಾದರೂ ಸಮಾಜದ ಜನಮಾನಸದಲ್ಲಿ ಅಜರಾಮರಾಗಿರುತ್ತಾರೆ ಎಂದು ತಿಳಿಸಿದರು.
ಕ್ರೀಡಾಪಟುಗಳಿಗೆ ತಮ್ಮದೇ ಆದ ಗೌರವವಿದೆ. ಕಳೆದ 15-20 ವರ್ಷಗಳಿಂದೀ ಚೆಗೆ ಮಾದಕ ಬಳಸುವ ಮುಖೇನ ಕ್ರೀಡೆಯಲ್ಲಿ ಜಯ ಸಾಧಿಸಲು ವಾಮಮಾರ್ಗ ಹಿಡಿಯ ಲಾಗಿದೆ. ಸ್ಪರ್ಧೆಯಲ್ಲಿ ಗೆಲುವು ಸಾಧಿಸಲು ಮಾದಕ ಬಳಸಿದರೆ ಆರೋಗ್ಯಕ್ಕೆ ಹಾಗೂ ಕ್ರೀಡಾ ಭವಿಷ್ಯಕ್ಕೆ ಹಾನಿ. ಆದ್ದರಿಂದ ನಿಮ್ಮ ಸಾಮರ್ಥ್ಯ, ಪ್ರತಿಭೆ ಪ್ರದರ್ಶಿಸಿ ಕ್ರೀಡೆಯಲ್ಲಿ ಜಯ ಸಾಧಿಸಲು ಮುಂದಾಗಿ. ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ಸೋಲು, ಕಾಣಲು ಕಾರಣವೇನೆಂದು ಆತ್ಮಾವಲೋಕನ ಮಾಡಿಕೊಂಡು ಮತ್ತಷ್ಟು ತರಬೇತಿ ಪಡೆದು ಗೆಲುವು ಸಾಧಿಸಲು ಮುನ್ನುಗ್ಗಬೇಕೇ ಹೊರತು, ವಾಮಮಾರ್ಗ ಸರಿಯಲ್ಲ ಎಂದು ಹೇಳಿದರು.
ಇದೇ ವೇಳೆ ಇಂಡಿಯನ್ ವೇಟ್ ಲಿಫ್ಟಿಂಗ್ ಫೆಡರೇಷನ್ ಗೌರವ ಕಾರ್ಯದರ್ಶಿ ಆನಂದೇಗೌಡ ಮತ್ತು ದಾವಣಗೆರೆಯವರಾದ ಗಡಿಭದ್ರತಾ ಪಡೆಯ ಯೋಧ ಹನುಮಂತಪ್ಪ ಅವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮೇಯರ್ ಎಸ್.ಟಿ. ವೀರೇಶ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿಸ್ವಾಮಿ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತ್ ರಾವ್ ಜಾಧವ್, ಬಿಜೆಪಿ ಮುಖಂಡ ಮುಪ್ಪಣ್ಣ, ಪಾಲಿಕೆ ಸದಸ್ಯರುಗಳಾದ ರಾಕೇಶ್ ಜಾಧವ್, ಪೈಲ್ವಾನ್ ವೀರೇಶ್, ಪಾಲಿಕೆ ನಾಮ ನಿರ್ದೇಶಿತ ಸದಸ್ಯರುಗಳಾದ ದುರುಗೇಶ್, ಗೋವಿಂದ್, ಚೆನ್ನಕೇಶ್, ದೂಡಾ ಸದಸ್ಯೆ ಗೌರಮ್ಮ ಪಾಟೀಲ್, ಇಂಜಿನಿಯರ್ ಅರವಿಂದ್, ಜಿಲ್ಲಾ ವೇಟ್ ಲಿಫ್ಟಿಂಗ್ ಅಸೋಸಿಯೇಷನ್ ಗೌರವಾಧ್ಯಕ್ಷ ಕೆ.ಎಂ. ಸುರೇಶ್, ಅಧ್ಯಕ್ಷ ಹೆಚ್. ಮಹೇಶ್, ಕಾರ್ಯ ದರ್ಶಿ ಹೆಚ್. ಬಸವರಾಜ್, ಉಪಾಧ್ಯಕ್ಷ ಕೆ.ಎನ್. ಹನುಮಂತಪ್ಪ, ಗೌರವ ಕಾರ್ಯದರ್ಶಿ ಕೆ.ಎಸ್. ಪಾಂಡು, ಸಿದ್ದರಾಜು, ಡಾ. ಸಂತೋಷ್, ನಂದಿ ಸ್ಪೋರ್ಟ್ಸ್ ಮಾಲೀಕ ರವಿ, ಅಂತರರಾಷ್ಟ್ರೀಯ ಕ್ರೀಡಾಪಟುಗಳೂ ಆದ ಪವರ್ ಲಿಫ್ಟಿಂಗ್ ತರಬೇತುದಾರರಾದ ದುಗ್ಗೇಶ್, ಕುಮಾರ್ ಸೇರಿದಂತೆ ಇತರರಿದ್ದರು.
ಎಸ್ಡಿಎಂ ಸ್ಪೋರ್ಟ್ಸ್ ಕ್ಲಬ್ ಚಾಂಪಿಯನ್: ರಾಜ್ಯಮಟ್ಟದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಸಮಗ್ರ ಟ್ರೋಫಿಯನ್ನು ತನ್ನದಾಗಿಸಿ ಕೊಳ್ಳುವ ಮುಖೇನ ಎಸ್ ಡಿಎಂ ಸ್ಪೋರ್ಟ್ಸ್ ಕ್ಲಬ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.