2.62 ಕೋಟಿ ರೂ. ವೆಚ್ಚದ ವಾಹನಗಳನ್ನು ವಿತರಿಸಿದ ಸಚಿವ ಕೆ.ಎಸ್. ಈಶ್ವರಪ್ಪ
ಮನೆಗಳನ್ನು ಸ್ವಚ್ಛವಾಗಿ ಇರಿಸಿಕೊಳ್ಳುವ ಮಹಿಳೆಯರು ಗ್ರಾಮವನ್ನೂ ಸ್ವಚ್ಛವಾಗಿ ಇರಿಸಿಕೊಳ್ಳಬಲ್ಲರು. ಆದ್ದರಿಂದ ವಾಹನ ಚಾಲನೆಗೆ ಮಹಿಳೆಯರನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ.
– ಕೆ.ಎಸ್. ಈಶ್ವರಪ್ಪ, ಸಚಿವ
ದಾವಣಗೆರೆ, ನ.2- ತಾಲ್ಲೂಕಿನ 12 ಗ್ರಾಮ ಪಂಚಾಯತಿ, ಹರಿಹರ ತಾಲ್ಲೂಕಿನ 19 ಗ್ರಾಮ ಪಂಚಾಯಿತಿ ಹಾಗೂ ಚನ್ನಗಿರಿ ತಾಲ್ಲೂಕಿನ 17 ಗ್ರಾಮ ಪಂಚಾಯತಿಗಳಿಗೆ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಸುಮಾರು 262.08 ಲಕ್ಷ ರೂಪಾಯಿ ವೆಚ್ಚದಲ್ಲಿ ಒಟ್ಟು 48 ಸ್ವಚ್ಛತಾ ವಾಹನಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವಿತರಿಸಿದರು.
ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಮಂಗಳವಾರ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ವತಿಯಿಂದ ಗ್ರಾ. ಪಂ ಮಟ್ಟದಲ್ಲಿ ಸ್ವಚ್ಛ ಸಂಕೀರ್ಣ ಘಟಕದ ನಿರ್ವಹಣೆ ವಹಿಸಿಕೊಂಡಿದೆ. ಕಸ ವಿಲೇವಾರಿ ಮಾಡುವುದು ಆಯಾ ಗ್ರಾಮ ಪಂಚಾಯಿತಿಗಳ ಜವಾಬ್ದಾರಿಯಾಗಿದ್ದು, ಹೊರಗುತ್ತಿಗೆ ಆಧಾರದ ಮೇಲೆ ಅದಕ್ಕೆ ಸಿಬ್ಬಂದಿ ನೇಮಕ, ತರಬೇತಿ, ವೇತನ ನೀಡಲಾಗುತ್ತದೆ ಎಂದರು.
ಘನ ತ್ಯಾಜ್ಯ ವಿಲೇವಾರಿ ನಿರ್ವಹಣೆ ದೃಷ್ಟಿಯಿಂದ ರಾಜ್ಯದಲ್ಲಿ ಕಸ ಸಂಗ್ರಹಣೆಗೆ ವಾಹನ ಖರೀದಿಸಲಾಗಿದೆ. ಅದಕ್ಕೆ ಮಹಿಳಾ ಚಾಲಕರೇ ಬೇಕೆಂದು ಅಪೇಕ್ಷೆ ವ್ಯಕ್ತವಾಗಿತ್ತು. ಅದಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದರು.
ಮನೆ ಸ್ವಚ್ಛವಾಗಿ ಇರಿಸಿಕೊಳ್ಳುವ ಮಹಿಳೆಯರು ಗ್ರಾಮವನ್ನೂ ಸ್ವಚ್ಛವಾಗಿ ಇರಿಸಿಕೊಳ್ಳಬಲ್ಲರು. ಆದ್ದರಿಂದ ಹೆಣ್ಣುಮಕ್ಕಳಿಗಾಗಿ ಕೌಶಲ್ಯ ಕರ್ನಾಟಕದ ವತಿಯಿಂದ ಗ್ರಾ. ಪಂಚಾಯತಿ ವ್ಯಾಪ್ತಿಯ ಮಹಿಳೆಯರನ್ನು ಆಯ್ಕೆ ಮಾಡಿ ಅವರಿಗೆ ಮಾನ್ಯತೆ ಪಡೆದ ಚಾಲನಾ ತರಬೇತಿ ಸಂಸ್ಥೆ ವತಿಯಿಂದ ತರಬೇತಿ, ಡಿಎಲ್ ಸಹ ಕೊಡಿಸಲಾಗುತ್ತದೆ. ತರಬೇತಿ ಪಡೆದ ಮಹಿಳೆಯರು ಗ್ರಾ. ಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಿಂದಲೂ ಕಸ ಸಂಗ್ರಹಿಸಿ ವಿಲೇವಾರಿ ಮಾಡಬೇಕು. ಕಸದಿಂದ ಬಂದ ಆದಾಯವನ್ನು ಸಿಬ್ಬಂದಿ, ವಾಹನ ವೆಚ್ಚಕ್ಕೆ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ದಾವಣಗೆರೆ ತಾಲ್ಲೂಕಿನ 10 ಗ್ರಾ.ಪಂ, ಚನ್ನಗಿರಿ ತಾಲ್ಲೂಕಿನ 17 ಗ್ರಾ.ಪಂ, ಹರಿಹರ ತಾಲ್ಲೂಕಿನ 5 ಗ್ರಾ.ಪಂ ಹೊನ್ನಾಳಿ ತಾಲ್ಲೂಕಿನ 7 ಗ್ರಾ.ಪಂ, ನ್ಯಾಮತಿ ತಾಲ್ಲೂಕಿನ 3 ಗ್ರಾ.ಪಂ ಮತ್ತು ಜಗಳೂರು ತಾಲ್ಲೂಕಿನ 1 ಗ್ರಾ.ಪಂಚಾಯಿತಿಗಳಲ್ಲಿ ಸುಮಾರು 17 ಲಕ್ಷ ರೂಪಾಯಿ ವೆಚ್ಚದಲ್ಲಿ ಒಟ್ಟು 42 ಸ್ವಚ್ಛ ಸಂಕೀರ್ಣ ಘಟಕ ನಿರ್ಮಾಣವಾಗಿದ್ದು, ಉದ್ಘಾಟನೆಗೆ ಸಿದ್ಧವಾಗಿವೆ ಎಂದರು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಜಿಲ್ಲೆಯಲ್ಲಿ ಉಚಿತ ಸಹಾಯ ವಾಣಿ 18004252203 ಪ್ರಾರಂಭಿಸಿದ್ದು, ಇದೇ ವೇಳೆ ಸಚಿವರು ಇದಕ್ಕೆ ಸಂಬಂಧಿಸಿದ ಪೋಸ್ಟರ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಶಾಸಕರುಗಳಾದ ಎಸ್.ಎ.ರವೀಂದ್ರನಾಥ್, ಎಸ್.ವಿ.ರಾಮಚಂದ್ರ, ಪ್ರೊ. ಲಿಂಗಣ್ಣ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ. ಸಿಇಒ ವಿಜಯ ಮಹಾಂತೇಶ, ಉಪಕಾರ್ಯದರ್ಶಿ ಬಿ.ಆನಂದ್ ಸೇರಿದಂತೆ, ಮತ್ತಿತರರು ಪಾಲ್ಗೊಂಡಿದ್ದರು.