ಸಮಸ್ಯೆ ಮುಕ್ತ ಜೀವನಕ್ಕೆ ಹಿಂದೂ ಸಂಘಟನೆಯೇ ಪರಿಹಾರ

ಆರ್.ಎಸ್.ಎಸ್. ಶಿವಮೊಗ್ಗ ವಿಭಾಗದ ಪ್ರಚಾರ ಪ್ರಮುಖ ಮಧುಕರ್ ಅಭಿಮತ

ದಾವಣಗೆರೆ, ನ.2- ಸಮಸ್ಯೆ ಮುಕ್ತ ಜೀವನಕ್ಕೆ ಹಿಂದೂ ಸಂಘಟನೆಯೊಂದೇ ಪರಿಹಾರ. ಹಿಂದೂಗಳಲ್ಲಿ ಜಾಗೃತಿ ಮೂಡಿಸಲು ಹಾಗೂ ಆತ್ಮ ವಿಶ್ವಾಸ ತುಂಬಲು ರಾಷ್ಟ್ರೀಯ ಸ್ವಯಂ ಸೇವಕ ಸಂಘವೇ ಮಾರ್ಗ ಎಂದು ಆರ್.ಎಸ್.ಎಸ್.ನ ಶಿವಮೊಗ್ಗ ವಿಭಾಗದ ಪ್ರಚಾರ ಪ್ರಮುಖ ಮಧುಕರ್ ಹೇಳಿದರು.

ವಿಜಯದಶಮಿ ಅಂಗವಾಗಿ ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿನ ಶ್ರೀ ಮಾತಾ ಅಮೃತಾನಂದಮಯಿ ಶಾಲೆ ಪಕ್ಕದಲ್ಲಿನ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಧಾರ್ಮಿಕ ಜಾಗೃತಿ ಕೊರತೆಯಿಂದಾಗಿ ಲವ್ ಜಿಹಾದ್, ಮತಾಂತರದಂತಹ ಕೆಲಸಗಳು ನಡೆಯುತ್ತಿವೆ. ಧರ್ಮ ಜಾಗರಣದ ಮೂಲಕ ಸಮಾಜದಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವ ಕೆಲಸವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಾಡುತ್ತಿದೆ ಎಂದು ಹೇಳಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಕೇಶವ್ ಬಲಿರಾಂ ಹೆಡ್ಗೆವಾರ್ ಎಂಬುವವರು 1925ರಲ್ಲಿ ಸ್ಥಾಪಿಸಿದರು. ಆದರೆ ಸಂಘದ ಸ್ಥಾಪನೆಗೂ 9 ವರ್ಷ ಮೊದಲು ಸಮಾಜದ ಬಗ್ಗೆ ಅಧ್ಯಯನ ಮಾಡಿ, ಸಮಸ್ಯೆಗಳನ್ನು ಅರ್ಥೈಸಿಕೊಂಡ ನಂತರವೇ ಸ್ಥಾಪನೆ ಮಾಡಿದರು.

ಸಂಘವು ಈಗಲೇ ಭಗವಂತನ ವಿಶ್ವರೂಪದಂತೆ ಕಾರ್ಯ ನಿರ್ವಹಿಸುತ್ತಿದೆ. 40ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸಂಘಟನೆ ಕಾರ್ಯ ನಿರ್ವಹಿಸುತ್ತಿದ್ದು, ಸಮಾಜದ ಪರಿವರ್ತನೆ ಮಾಡುವ ಕೆಲಸ ಮಾಡುತ್ತಿದೆ.

ವ್ಯಕ್ತಿ ನಿರ್ಮಾಣ, ಗ್ರಾಮ ವಿಕಾಸ, ಕುಟುಂಬ ಸಾಮರಸ್ಯ, ಭಾವೈಕ್ಯ ಜಾಗೃತಿ ಹೀಗೆ ಹತ್ತು ಹಲವಾರು ಕೆಲಸ ಮಾಡುತ್ತಿದೆ. ಆದಾಗ್ಯೂ ಸಮಸ್ಯೆಗಳು ಇನ್ನೂ ಜೀವಂತವಾಗಿವೆ. ಇದಕ್ಕೆ ಹಿಂದೂ ಸಂಘಟನೆಯೊಂದೇ ಪರಿಹಾರ ಎಂದರು.

ಮುಂದಿನ ನಾಲ್ಕು ವರ್ಷಗಳ ನಂತರ ಆರ್.ಎಸ್.ಎಸ್.ಗೆ 100 ವರ್ಷಗಳು ತುಂಬುತ್ತವೆ. ಈ ಹಿನ್ನೆಲೆಯಲ್ಲಿ  ಧರ್ಮದ ಸಂರಕ್ಷಣೆ ಮೂಲಕ ರಾಷ್ಟ್ರವನ್ನು ಪರಮ ವೈಭವ ಸ್ಥಿತಿಗೆ ಕೊಂಡೊಯ್ಯುವ ಗುರಿ ಹೊಂದಬೇಕಿದೆ ಎಂದು ಹೇಳಿದರು.

ಗೃಹಸ್ಥರು, ವಿದ್ಯಾರ್ಥಿಗಳು, ವ್ಯಾಪಾರಿಗಳು, ಕೃಷಿಕರು ಎರಡು ವರ್ಷಗಳ ಕಾಲ ತಮ್ಮ ಸಮಯವನ್ನು ಹೊಂದಾಣಿಕೆ ಮಾಡಿಕೊಂಡು ಸಂಘಕ್ಕಾಗಿ ನೀಡಿ, ಸಂಘದ ವಿಸ್ತಾರಕರಾಗಿ ಕಾರ್ಯ ನಿರ್ವಹಿಸಿ, ಪರಮ ವೈಭವದ ಗುರಿಯನ್ನು ನಮ್ಮ ಕಣ್ಣೆದುರೇ ಕಾಣಲು ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ವಾಯುಪಡೆಯ ನಿವೃತ್ತ ಸೇನಾಧಿಕಾರಿ ರಾಮಚಂದ್ರಪ್ಪ ಮಾತನಾಡುತ್ತಾ, ಸರ್ವರೂ ಸುಖ-ಶಾಂತಿಯಿಂದ ಒಗ್ಗೂಡಿ ಜೀವನ ಮಾಡಬೇಕು ಎಂದು ಪುರಾತನ ಕಾಲದಿಂದಲೂ ಹಿಂದೂ ಧರ್ಮದಲ್ಲಿ ಹೇಳಲಾಗಿದೆ. ಆದರೆ ಕೆಲ ದುಷ್ಟ ಶಕ್ತಿಗಳು ಶಾಂತಿ ಕದಡುವ ಕೆಲಸ ಮಾಡುತ್ತಿವೆ. ಎಲ್ಲರೂ ಸಂಘಟಿತರಾಗಿ ಹಿಂದೂ ಶಕ್ತಿ ತೋರಿಸುವ ಕಾಲ ಕೂಡಿ ಬಂದಿದೆ ಎಂದರು.

ನಗರ ಸಂಚಾಲಕ ಜಯರುದ್ರೇಶ್, ಶಿವಮೊಗ್ಗ ವಿಭಾಗದ ಸಂಘ ಸಂಚಾಲಕ ಉಮಾಪತಿ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ನಡೆದ ಪಥ ಸಂಚಲನದಲ್ಲಿ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ಮಾಜಿ ಮೇಯರ್ ಬಿ.ಜಿ., ಅಜಯ್ ಕುಮಾರ್, ಸದಸ್ಯ ಕೆ.ಎಂ. ವೀರೇಶ್,  ಮಾಜಿ ಸದಸ್ಯ ಶಿವನಗೌಡ ಟಿ. ಪಾಟೀಲ್, ಮುಖಂಡರಾದ ಶಂಕರನಾರಾಯಣ, ಶಂಭುಲಿಂಗಪ್ಪ ಇತರರು ಪಾಲ್ಗೊಂಡಿದ್ದರು.

error: Content is protected !!