ದಾವಣಗೆರೆ, ಮಾ. 4- ತೈಲಗಳು, ಅಡುಗೆ ಅನಿಲ, ಅಡುಗೆ ಎಣ್ಣೆ, ಬೇಳೆ ಕಾಳುಗಳು ಸೇರಿದಂತೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಗಟ್ಟಲು ಆಗ್ರಹಿಸಿ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಜಿಲ್ಲಾ ಸಂಘಟನಾ ಸಮಿತಿ ಪದಾಧಿಕಾರಿಗಳು ನಗರದ ಜಿಲ್ಲಾಡಳಿತದ ಮುಂಭಾಗದಲ್ಲಿಂದು ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ಕೋವಿಡ್ ರೋಗದಿಂದ ಹಲವಾರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ದೇಶದ ಶೇ.90ರಷ್ಟು ಜನಗಳ ಆದಾಯ ನೆಲಕಚ್ಚಿದೆ. ಜನ ಹಸಿವಿನಿಂದ ಸಾಯುತ್ತಿರುವ ಈ ದಿನಗಳಲ್ಲಿ ಅಂಬಾನಿಯ ಪ್ರತಿ ದಿನದ ಸಂಪಾದನೆ ಅಂದಾಜು 12 ಕೋಟೆ ಅರವತ್ತು ಲಕ್ಷ ರೂ. ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಸರ್ಕಾರಗಳ ಈ ವ್ಯವಸ್ಥೆ ಯಾರ ಪರ ಎಂಬುದಕ್ಕೆ ಬೇರೆ ಪುರಾವೆ ಬೇಕೇ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕೊರೊನಾ ಕಾಲದ ಬಿಕ್ಕಟ್ಟನ್ನೇ ಬಳಸಿಕೊಂಡು ರೈಲ್ವೆ, ವಿದ್ಯುತ್, ವಿಮೆ, ಬ್ಯಾಂಕ್ ಮತ್ತು ಇತರೆ ಸರ್ಕಾರಿ ಉದ್ದಿಮೆಗಳನ್ನು ಖಾಸಗೀಕರಣ ಮಾಡಲು ಸರ್ಕಾರ ಮುಂದಾಗಿದೆ. ಇದೀಗ ಸಣ್ಣ, ಮಧ್ಯಮ ರೈತರ ಕೈಗಳಲ್ಲಿರುವ ಕೃಷಿಯನ್ನು ಶ್ರೀಮಂತ ಬಂಡವಾಳಿಗರ ಮಡಿಲಿಗೆ ಹಾಕಲು ಬೇಕಾದ ಕರಾಳ ಕೃಷಿ ಕಾಯಿದೆಗಳನ್ನು ಜಾರಿಗೆ ತರಲಾಗಿದೆ. ಇದೇ ಉದ್ದೇಶದಿಂದ ರಾಜ್ಯದಲ್ಲೂ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ, ಎಪಿಎಂಸಿ ಕಾಯಿದೆಗೆ ತಿದ್ದುಪಡಿ ಮಾಡಲಾಗಿದೆ ಎಂದು ವಿರೋಧ ವ್ಯಕ್ತಪಡಿಸಿದರು.
ಅಡುಗೆ ಅನಿಲದ ಸಬ್ಸಿಡಿ ರದ್ಧತಿಯನ್ನು ವಾಪಸ್ ಪಡೆಯಬೇಕು. ಪೆಟ್ರೋಲ್, ಡೀಸೆಲ್‌ಗಳ ತೆರಿಗೆ ಕಡಿತ ಮಾಡಿ ಬೆಲೆಗಳನ್ನು ಇಳಿಸಬೇಕು. ಪಡಿತರ ವಿತರಣೆಯಲ್ಲಿ ಇದೀಗ ಕೈಗೊಳ್ಳಲಾಗುತ್ತಿರುವ ದವಸ-ಧಾನ್ಯಗಳ ಪ್ರಮಾಣವನ್ನು ಕಡಿತ ಮಾಡಬಾರದು. ಅಂಗವಿಕಲ, ವೃದ್ಧ, ವಿಧವೆ ಮೊದಲಾದವರ ಮಾಸಿಕ ಪಿಂಚಣಿಯನ್ನು ವಿಳಂಬ ಮಾಡದೆ ಪಾವತಿಸಬೇಕು. ರೈಲು ಓಡಾಟವನ್ನು ಸಹಜ ಸ್ಥಿತಿಗೆ ಮರಳಿಸಿ, ಬಡವರ ಸಾರಿಗೆ ಪ್ಯಾಸೆಂಜರ್ ರೈಲುಗಳನ್ನು ಪುನರಾರಂಭಿಸಬೇಕು. ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಬೇಕು. ಆಶಾ, ಅಂಗನವಾಡಿ, ಬಿಸಿಯೂಟ ಮೊದಲಾದ ಸ್ಕೀಮ್ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಕೇಂದ್ರದ ಕರಾಳ ಕೃಷಿ ಕಾಯಿದೆಗಳನ್ನು ರಾಜ್ಯದಲ್ಲಿ ಜಾರಿಗೆ ತರಬಾರದು. ಕಾರ್ಮಿಕ ವಿರೋಧಿ ಕಾನೂನುಗಳ ಜಾರಿ ಬೇಡ ಎನ್ನುವುದು ಸೇರಿದಂತೆ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಸ್ ಯುಸಿಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿ ಸದಸ್ಯ ಸುನೀತ್ ಕುಮಾರ್, ಬಿ.ಆರ್. ಅಪರ್ಣಾ, ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕೈದಾಳೆ, ಸಂಘಟನಾಕಾರರಾದ ಮಂಜುನಾಥ್ ಕುಕ್ಕುವಾಡ, ತಿಪ್ಪೇಸ್ವಾಮಿ ಅಣಬೇರು, ಮಧು ತೊಗಲೇರಿ, ಪರಶುರಾಮ್, ಶಿವಾಜಿರಾವ್, ಕಾವ್ಯ, ಪುಷ್ಪ, ಮಮತಾ, ಸತೀಶ್, ಅಭಿಷೇಕ್, ಬೀರಲಿಂಗಪ್ಪ ನೀರ್ಥಡಿ, ಲೋಕೇಶ್ ನೀರ್ಥಡಿ ಹಾಗೂ ವಿವಿಧ ಬಡಾವಣೆ ನಾಗರಿಕರು ಪಾಲ್ಗೊಂಡಿದ್ದರು.