ಬೆಳ್ಳಂಬೆಳಿಗ್ಗೆ ಬಂದ್ ಮಾಡಿಸಿದ ತಹಸೀಲ್ದಾರ್

ನಿರ್ಬಂಧದ ಮಧ್ಯೆಯೂ ತರಕಾರಿ ಮಾರುಕಟ್ಟೆಯಲ್ಲಿ ಸಂತೆ

ದಾವಣಗೆರೆ, ಮೇ 2- ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಂತೆ, ಮಾರುಕಟ್ಟೆಗಳಿಗೆ ನಿರ್ಬಂಧ ಹಾಕಿದೆ. ಇದನ್ನು ಗಣನೆಗೆ ತೆಗೆದುಕೊಳ್ಳದೇ ಇಂದು ನಗರದ ತರಕಾರಿ ಮಾರುಕಟ್ಟೆಯಲ್ಲಿ ಸಂತೆ ನಡೆಸಲಾಗುತ್ತಿತ್ತು. ತರಕಾರಿ, ದಿನಸಿ ಸೇರಿದಂತೆ ಇನ್ನಿತರೆ ಸಾಮಗ್ರಿಗಳನ್ನು ಖರೀದಿಸಲು ಜನ ಮುಗಿ ಬಿದ್ದಿದ್ದರು. 

ಈ ಬಗ್ಗೆ ಮಾಹಿತಿ ಪಡೆದ ತಹಶೀಲ್ದಾರ್ ಬಿ.ಎನ್. ಗಿರೀಶ್ ಅವರು ಬೆಳ್ಳಂಬೆಳಿಗ್ಗೆ ಕೆ.ಆರ್. ಮಾರುಕಟ್ಟೆಗೆ ಧಾವಿಸಿ, ಅಲ್ಲಿ ನಡೆಯುತ್ತಿದ್ದ ವ್ಯಾಪಾರ, ವಹಿವಾಟನ್ನು ಬಂದ್ ಮಾಡಿಸಿದರು.

ಒಂದೇ ಕಡೆಯಲ್ಲಿ ಜನರು ಸೇರದಂತೆ ಯಾವುದೇ ಸಂತೆಗಳಿಗೆ ಅವಕಾಶ ನೀಡಿರಲಿಲ್ಲ. ಆದರೆ, ನಗರದ ಜನತೆ ರಾಜ್ಯ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ, ಕೊರೊನಾ ಸೋಂಕಿಗೂ, ತಮಗೂ ಯಾವುದೇ ಸಂಬಂಧ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದರು. ಬಹುತೇಕರು ಮಾಸ್ಕ್‍ಗಳನ್ನು ಧರಿಸದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಓಡಾಡುತ್ತಿದ್ದರು.

ಗಡಿಯಾರ ಕಂಬ, ಕಾಯಿಪೇಟೆ ಮುಖ್ಯರಸ್ತೆ, ಕಾಳಿಕಾದೇವಿ ರಸ್ತೆ, ಕೆ.ಆರ್.ಮಾರುಕಟ್ಟೆಯ ರಸ್ತೆಗಳಲ್ಲಿ ವಿವಿಧ ವ್ಯಾಪಾರಸ್ಥರು ವಹಿವಾಟು ನಡೆಸಿದರು. ಕೊರೊನಾದ ಯಾವುದೇ ಭಯವಿಲ್ಲದೇ ಸಾರ್ವಜನಿಕರು ಗುಂಪು ಗುಂಪಾಗಿ ಸೇರಿ ಖರೀದಿಯಲ್ಲಿ ತೊಡಗಿದ್ದರು. ಈ ನಿಟ್ಟಿನಲ್ಲಿ ತಾಲ್ಲೂಕು ಆಡಳಿತದ ಸಿಬ್ಬಂದಿಗಳು, ಪೌರ ಕಾರ್ಮಿಕರೊಂದಿಗೆ ಆಗಮಿಸಿದ ತಹಶೀಲ್ದಾರ್ ತಕ್ಷಣವೇ ಅಲ್ಲಿ ನಡೆಯುತ್ತಿದ್ದ ವ್ಯಾಪಾರ ವಹಿವಾಟನ್ನು ಬಂದ್‌ ಮಾಡಿಸಿದರು.

ಇದಲ್ಲದೇ, ರಸ್ತೆಯಲ್ಲಿ ನಿಂತ ತಹಶೀಲ್ದಾರ್ ತರಕಾರಿ ಮಾರಲು ಬಂದ ವ್ಯಾಪಾರಸ್ಥರು ಹಾಗೂ ಖರೀದಿ ಮಾಡಲು ಬಂದ ಗ್ರಾಹಕರನ್ನು ತಾವೇ ವಾಪಸ್‌ ಕಳುಹಿಸಿದರು. ಅಲ್ಲದೇ ಕೋವಿಡ್ ನಿಯಮಾವಳಿ ಉಲ್ಲಂಘನೆ ಮಾಡಿ ವ್ಯಾಪಾರ, ವಹಿವಾಟು ಮಾಡುತ್ತಿದ್ದ ವ್ಯಾಪಾರಸ್ಥರನ್ನು ತರಾಟೆಗೆ ತೆಗದುಕೊಂಡರು.

ಇದಲ್ಲದೇ ಇಂದಿನಿಂದ ಕೇವಲ ತಳ್ಳು ಗಾಡಿ ಮೂಲಕ ಮಾತ್ರ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಗುಂಪು ಗುಂಪಾಗಿ ಸೇರುವಂತಿಲ್ಲ. ನಿಮ್ಮ ಮನೆಗಳ ಬಾಗಿಲಿಗೆ ತರಕಾರಿ ಬರಲಿದೆ. ಇದಕ್ಕೆ ಪ್ರತಿನಿತ್ಯ ಸಂಜೆಯವರೆಗೂ ಅವಕಾಶ ಕಲ್ಪಿಸಲಾಗಿದೆ. ಯಾರೂ ಕೂಡ ಅನಾವಶ್ಯಕವಾಗಿ ಮಾರುಕಟ್ಟೆಗೆ ಬರಬಾರದು. ಒಂದು ವೇಳೆ ನಿಯಮ ಉಲ್ಲಂಘಿಸಿ ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬೆಳಿಗ್ಗೆಯೇ ಆಗಮಿಸಿದ ಕೆಲವರು ತಮಗೆ ಬೇಕಾದ ತರಕಾರಿಗಳನ್ನು ಖರೀಸಿದಿದರೆ ಮತ್ತೆ ಕೆಲವರು ಅರ್ಧಂಬರ್ಧ ತರಕಾರಿಗಳನ್ನು ಖರೀದಿ ಮಾಡಿ ತಾಲ್ಲೂಕು ಆಡಳಿತದ ವಿರುದ್ದ ಗೊಣಗುತ್ತಲೇ ಮನೆಗಳ ಕಡೆಗೆ ಸಾಗಿದರು. ಇನ್ನು ಕೆಲವರು ಆಗ ತಾನೇ ಆಗಮಿಸಿದ ಜನರು ಯಾವುದೇ ತರಕಾರಿ ತೆಗೆದುಕೊಳ್ಳದೇ ನಿರಾಸೆಯಿಂದ ವಾಪಸ್ಸಾದರು.

error: Content is protected !!