ತರಳಬಾಳು ಸೇವಾ ಸಮಿತಿ ಮತ್ತು ಶಿವಸೈನ್ಯ ಯುವಕರ ಸಂಘದಿಂದ ಪುಣ್ಯದ ಕಾರ್ಯ
ದಾವಣಗೆರೆ, ಮೇ 2- ಕೊರೊನಾ ಸೋಂಕಿತರು ಹಸಿವಿನಿಂದ ಬಳಲಬಾರದೆಂದು ಅವರ ಹೊಟ್ಟೆ ತುಂಬಿಸುವ ಪುಣ್ಯದ ಕಾಯಕ ಇಂದಿನಿಂದ ಶುಭಾರಂಭಗೊಂಡಿದ್ದು, ಉಚಿತ ಉಟೋಪಚಾರದ ವ್ಯವಸ್ಥೆ ಕಲ್ಪಿಸಲು ದಾನಿಗಳು ಮುಂದಾಗಿದ್ದಾರೆ.
ಪ್ರತಿ ದಿನ ಬೆಳಗ್ಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಕಲ್ಪಿಸಲು ಸ್ವಯಂ ಪ್ರೇರಣೆಯಿಂದ ದಾನಿಗಳು ಹೆಜ್ಜೆ ಇಟ್ಟಿರುವುದು ಸಿ.ಜಿ. ಆಸ್ಪತ್ರೆಯಲ್ಲಿ ದಾಖಲಾಗಿರುವ ಕೊರೊನಾ ಸೋಂಕಿತರು ಉಪವಾಸದಿಂದ ನರಳುವುದನ್ನು ತಪ್ಪಿಸಿದಂತಾಗಿದ್ದು, ಮಾನವೀಯತೆಗೆ ಹಿಡಿದ ಕೈಗನ್ನಡಿಯಾಗಿದೆ. ಇದಕ್ಕೆ ತರಳಬಾಳು ಸೇವಾ ಸಮಿತಿ ಮತ್ತು ದಾವಣಗೆರೆ ಶಿವಸೈನ್ಯ ಯುವಕರ ಸಂಘ ಹಾಗೂ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್ ಸಾಕ್ಷಿಯಾಗಿವೆ.
ಸೇವೆ ಪ್ರಾರಂಭ: ಇಂದಿನಿಂದ ಉಚಿತ ಊಟೋಪಚಾರದ ಸೇವೆ ಪ್ರಾರಂಭವಾಗಿದ್ದು, ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್ ವತಿಯಿಂದ ಬೆಳಗಿನ ಉಪಹಾರ ಹಾಗೂ ತರಳಬಾಳು ಸೇವಾ ಸಮಿತಿ ಮತ್ತು ದಾವಣಗೆರೆ ಶಿವಸೈನ್ಯ ಯುವಕರ ಸಂಘದ ಮಧ್ಯಾಹ್ನದ ಊಟೋಪಚಾರ ಸಿದ್ಧತೆ ಪರಿಶೀಲಿಸಿ, ಶಾಸಕ ಎಸ್.ಎ. ರವೀಂದ್ರನಾಥ್ ಚಾಲನೆ ನೀಡಿದರು. ಅಲ್ಲದೇ, ಈ ಪುಣ್ಯದ ಸೇವೆಗೆ ಪ್ರಶಂಸೆ ವ್ಯಕ್ತಪಡಿಸಿದರು.
ತಾವೂ ಸಹ ಊಟದ ಪೊಟ್ಟಣಗಳನ್ನು ಸಿದ್ಧಪಡಿಸಿ ನಂತರ ಮಾತನಾಡಿದ ಮೇಯರ್ ಎಸ್.ಟಿ. ವೀರೇಶ್, ಊಟ ಇಲ್ಲದೇ ಕೊರೊನಾ ಸೋಂಕಿತರು ಸಾಯುವುದನ್ನು ಕಣ್ಣಾರೆ ಕಂಡಿದ್ದು, ಈ ಬಗ್ಗೆ ಗಮನ ಹರಿಸಲು ನಗರ ಪಾಲಿಕೆ ಕೊರೊನಾ ಸಭೆಯಲ್ಲಿ ಪತ್ರಕರ್ತರಿಂದ ಮನವಿ ಕೇಳಿ ಬಂದಿತ್ತು. ಹಾಗಾಗಿ ಸ್ನೇಹಿತರು, ಹಿತೈಷಿಗಳ ಜೊತೆಗೆ ಚರ್ಚಿಸಿದಾಗ ದಾನಿಗಳು ಸಹಾಯ ಹಸ್ತ ಚಾಚಲು, ನೆರವಾಗಲು ಮುಂದೆ ಬಂದಿದ್ದಾರೆ ಎಂದು ತಿಳಿಸಿದರು.
ಇಂದಿನಿಂದ ಬೆಳಗ್ಗಿನ ಉಪಹಾರದ ವ್ಯವಸ್ಥೆಯನ್ನು ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್ ವತಿಯಿಂದ ಕಲ್ಪಿಸಲಾಗಿದ್ದು, ಅದಕ್ಕೆ ಅವಶ್ಯಕ ದಿನಸಿ ಖರ್ಚನ್ನು ಚನ್ನಬಸಪ್ಪ ಅಂಡ್ ಸನ್ಸ್ ಭರಿಸಲಿದೆ. ಆಸ್ಪತ್ರೆಗಳಲ್ಲಿನ ಕೋವಿಡ್ ಸೋಂಕಿತರಿಗೆ ಈ ಸೋಂಕು ದೂರವಾಗುವ ತನಕ ಸೇವೆ ಸಿಗಲಿದೆ. ತರಳಬಾಳು ಸೇವಾ ಸಮಿತಿ ಮತ್ತು ದಾವಣಗೆರೆ ಶಿವಸೈನ್ಯ ಯುವಕರ ಸಂಘದವರು ಮಧ್ಯಾಹ್ನ, ರಾತ್ರಿ ಊಟದ ವ್ಯವಸ್ಥೆ ಕಲ್ಪಿಸಲಿದ್ದು, ಆಸ್ಪತ್ರೆ ಯಲ್ಲಿ ಡಯಾಬಿಟಿಕ್ ವುಳ್ಳ ಕೊರೊನಾ ಸೋಂಕಿತರಿಗೆ ಕೇವಲ ಅನ್ನ, ಸಾಂಬಾರ್ ಮಾತ್ರ ನೀಡಲಾಗುತ್ತಿದ್ದು, ಅವರಿಗೆ ಚಪಾತಿ, ರೊಟ್ಟಿ ಪೌಷ್ಠಿಕ ಆಹಾರದ ಅವಶ್ಯವಿರುವುದಾಗಿ ವೈದ್ಯರು ಸಲಹೆ ನೀಡಿದ ಕಾರಣ ಚಪಾತಿ, ಕಾಳಿನ ಪಲ್ಯ ನೀಡುವರು ಎಂದು ವಿವರಿಸಿದರು.
ತರಳಬಾಳು ಸೇವಾ ಸಮಿತಿ ಮತ್ತು ಶಿವಸೈನ್ಯ ಯುವ ಕರ ಸಂಘದ ಗೌರವಾಧ್ಯಕ್ಷ ಶಶಿಧರ್ ಹೆಮ್ಮನಬೇತೂರು ಮಾತನಾಡಿ, ಪ್ರತಿ ದಿನ ಮಧ್ಯಾಹ್ನ 400 ಮಂದಿ ಮತ್ತು ರಾತ್ರಿ 400 ಮಂದಿ ಒಟ್ಟು 800 ಮಂದಿ ಕೊರೊನಾ ರೋಗಿಗಳಿಗೆ ಉಚಿತ ಊಟದ ವ್ಯವಸ್ಥೆ ಕಲ್ಪಿಸಲಾಗುವುದು. ಈ ಸೇವೆ ಪುಣ್ಯದ ಕಾರ್ಯವಾಗಿದೆ ಎಂದರು.
ಈ ಪುಣ್ಯದ ಕಾರ್ಯವನ್ನು ನಡೆಸುವ ಸಂಬಂಧ ಊಟೋಪಚಾರಗಳ ಸಿದ್ಧತೆ ಮಾಡಿಕೊಳ್ಳಲು ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಮುದಾಯ ಭವನವನ್ನು ಉಚಿತವಾಗಿ ನೀಡಿರುವ ಸಾಧು ಸದ್ಧರ್ಮ ಸಂಘದ ಅಧ್ಯಕ್ಷರಾದ ಕೆ.ಆರ್. ಜಯದೇವಪ್ಪ, ಕಲ್ಯಾಣ ಮಂಟಪದ ವ್ಯವಸ್ಥಾಪಕರಾದ ವೈ. ವಸಂತಪ್ಪ ಅವರು ಗಳಿಗೆ ಶಶಿಧರ್ ಹೆಮ್ಮನಬೇತೂರು ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಎಸ್ಪಿ ಹನುಮಂತರಾಯ, ವರ್ತಕ ಬಿ.ಸಿ. ಉಮಾಪತಿ, ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ, ತರಳಬಾಳು ಸೇವಾ ಸಮಿತಿ ಮತ್ತು ಶಿವಸೈನ್ಯ ಯುವಕರ ಸಂಘದ ಅಧ್ಯಕ್ಷ ಲಿಂಗರಾಜು ಅಗಸನಕಟ್ಟೆ, ಮಾಗನೂರು ಉಮೇಶ್ ಗೌಡ್ರು, ಶ್ರೀನಿವಾಸ್ ಮೆಳ್ಳೇಕಟ್ಟೆ, ಪ್ರಭು ಕಾವಲಹಳ್ಳಿ, ಕೊರಟಿಕೆರೆ ಶಿವಕುಮಾರ್, ಸತೀಶ್ ಸಿರಿಗೆರೆ, ಸುನೀಲ್ ದಾಸಪ್ಳ, ಕುಮಾರ ಮೆಳ್ಳೇಕಟ್ಟೆ, ಹಾಲೇಶ್ ಕಂಸಾಗರ, ಧನ್ಯಕುಮಾರ್, ವೀರಬಸಪ್ಪ ಮೆಳ್ಳೇಕಟ್ಟೆ, ಹರೀಶ್ ಬೆಳ್ಳಿಗನೂಡು, ದೇವರಾಜ ಅಗಸನಕಟ್ಟೆ, ಅಜಯ್ ಕುಮಾರ್ ವೊಡ್ಡಿನಹಳ್ಳಿ ಸೇರಿದಂತೆ ಇತರರು ಇದ್ದರು.
ನಿರಂತರವಾಗಿ ನಡೆಯುವ ಈ ದಾಸೋಹ ಕಾರ್ಯಕ್ಕೆ ಸೇವೆ ಸಲ್ಲಿಸಲಿಚ್ಚಿಸುವವರು ಶಶಿಧರ್ ಹೆಮ್ಮನಬೇತೂರು ಅಥವಾ ಮಾಗನೂರು ಉಮೇಶ್ ಗೌಡ ಅವರನ್ನು ಸಂಪರ್ಕಿಸಬಹುದು.