ಮೋದಿಗಿಂತ ದೀದಿಯೇ ಇರಲಿ

ನವದೆಹಲಿ, ಮೇ 2 – ನಾಲ್ಕು ರಾಜ್ಯಗಳ ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಬಿಜೆಪಿಯ ಅಬ್ಬರದ ಪ್ರಚಾರವನ್ನು ಮೆಟ್ಟಿ ನಿಂತು ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಗದ್ದುಗೆ ಉಳಿಸಿಕೊಂಡಿದ್ದಾರೆ. ಕೇರಳದಲ್ಲಿ ಎಡರಂಗ ಸರ್ಕಾರ ವನ್ನು ಪಿಣರಾಯಿ ವಿಜಯನ್ ದಡ ಸೇರಿಸಿದ್ದಾ ರಾದರೂ, ತಮಿಳುನಾಡಿನಲ್ಲಿ ಆಡಳಿತ ವಿರೋಧಿ ಅಲೆಗೆ ಎಐಎಡಿಎಂಕೆ ಸರ್ಕಾರ ಪತನಗೊಂಡಿದೆ.

ಅಸ್ಸಾಂನಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಯಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಿದೆ.

ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಚುನಾವಣೆ ನಡೆಯುವ ವೇಳೆಗೆ ಕೊರೊನಾದ ಎರಡನೇ ಅಲೆ ಇಡೀ ದೇಶಕ್ಕೆ ಆಘಾತ ನೀಡಿತ್ತು. ಈ ನಡುವೆಯೇ ನಡೆದ ಚುನಾವಣೆಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣಾ ಸಮರ ಇಡೀ ದೇಶದ ಗಮನ ಸೆಳೆದಿತ್ತು.

ಮೋದಿಗಿಂತ ದೀದಿಯೇ (ಮಮತಾ ಬ್ಯಾನರ್ಜಿ) ಇರಲಿ ಎಂದು ಮುಖ್ಯಮಂತ್ರಿ ಮಮತಾಗೆ ಜಯಮಾಲೆ ಹಾಕಿರುವ ರಾಜ್ಯದ ಜನತೆ, ಮೂರನೇ ಎರಡರ ಭರ್ಜರಿ ಬಹುಮತ ನೀಡಿದ್ದಾರೆ. 292 ಕ್ಷೇತ್ರಗಳ ರಾಜ್ಯದಲ್ಲಿ ಮೊದಲ ಬಾರಿಗೆ ತೃಣಮೂಲ ಕಾಂಗ್ರೆಸ್ 200ಕ್ಕೂ ಹೆಚ್ಚು ಸ್ಥಾನ ಪಡೆದುಕೊಂಡಿದೆ. ಬಿಜೆಪಿ ದೂರದ ಎರಡನೇ ಸ್ಥಾನದಲ್ಲಿದೆ. 

ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಖಾತೆ ತೆರೆಯಲೂ ವಿಫಲ ವಾಗಿವೆ. ಒಂದು ಕಾಲದಲ್ಲಿ ತನ್ನ ಭದ್ರಕೋಟೆಯಾಗಿದ್ದ ಪಶ್ಚಿಮ ಬಂಗಾಳದಲ್ಲಿ, ಎಡರಂಗ ಸಂಪೂರ್ಣ ನೆಲೆ ಕಳೆದುಕೊಂಡಿದೆ.

ಪಶ್ಚಿಮ ಬಂಗಾಳದಲ್ಲಿ ಗೆಲುವು ಸಾಧಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪೂರ್ಣ ಪ್ರಚಾರ ನಡೆಸಿದ್ದರು. ಅವರಿಗೆ ಗೃಹ ಸಚಿವ ಅಮಿತ್ ಷಾ ಸಹ ಜೊತೆಯಾಗಿದ್ದರು. ಆದರೆ, ಇದಾವುದೂ ಪಕ್ಷಕ್ಕೆ ನಿರೀಕ್ಷಿತ ಫಲ ನೀಡಿಲ್ಲ.

ಎಐಎಡಿಎಂಕೆಯ ಜಯಲಲಿತ ಹಾಗೂ ಡಿಎಂಕೆಯ ಕರುಣಾನಿಧಿ ಅವರಂತಹ ದಿಗ್ಗಜರಿಲ್ಲದೇ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ, ಆಡಳಿತಾರೂಢ ಎಐಎಡಿಎಂಕೆ – ಬಿಜೆಪಿ ಮೈತ್ರಿಕೂಟ ಪತನ ಕಂಡಿದೆ.

234 ಕ್ಷೇತ್ರಗಳ ತಮಿಳುನಾಡಿನಲ್ಲಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಮೈತ್ರಿಕೂಟ 153 ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿದೆ. ಎಐಎಡಿಎಂಕೆ – ಬಿಜೆಪಿ ಮೈತ್ರಿಕೂಟ 77 ಕ್ಷೇತ್ರಗಳಲ್ಲಿ ಮಾತ್ರ ಮೇಲುಗೈ ಹೊಂದಿದೆ.

ಕಳೆದ ನಾಲ್ಕು ದಶಕಗಳಿಂದ ಆಡಳಿತಾರೂಢ ಪಕ್ಷ ಸೋಲುವ ಕೇರಳದ ಪದ್ಧತಿಗೆ ಎಡರಂಗ ಕೊನೆಗೂ ತೆರೆ ಎಳೆಯುವ ಮೂಲಕ ದಾಖಲೆ ಬರೆದಿದೆ. ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಆಡಳಿತಾರೂಢ ಸರ್ಕಾರ ಗೆಲುವಿನ ಮುನ್ನಡೆ ಪಡೆದಿದೆ. 140 ಕ್ಷೇತ್ರಗಳ ಕೇರಳದಲ್ಲಿ ಎಡರಂಗ 90ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿದೆ.

ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. 126 ಕ್ಷೇತ್ರಗಳ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 80ಕ್ಕೂ ಹೆಚ್ಚು ಸ್ಥಾನ ಗಳಿಸುವ ಸೂಚನೆ ನೀಡಿದೆ. ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಕೂಟ 40 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಲು ಸಾಧ್ಯವಾಗಿದೆ.

ಮುಖ್ಯಮಂತ್ರಿ ಸರ್ಬಾನಂದ ಸೋನಾವಲ್ ಅವರು ಗೆಲುವಿಗಾಗಿ ಜನತೆಗೆ ಧನ್ಯವಾದ ಸಲ್ಲಿಸಿದ್ದಾರೆ.

30 ಕ್ಷೇತ್ರಗಳ ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಯಲ್ಲಿ ಎನ್‌ಡಿಎ 16 ಸ್ಥಾನಗಳನ್ನು ಗಳಿಸಿ ಸರ್ಕಾರ ರಚಿಸಲಿದೆ. ಯುಪಿಎ ಮೈತ್ರಿಕೂಟ 8 ಹಾಗೂ ಇತರರು ಆರು ಸ್ಥಾನ ಗಳಿಸಿದ್ದಾರೆ.

error: Content is protected !!