ಜಿಲ್ಲಾ ಮಟ್ಟದ ಸಭೆಯಲ್ಲಿ ಸದಸ್ಯರ ಆರೋಪ, ದೂರು ಬಂದಲ್ಲಿ ಕ್ರಮ: ಡಿಸಿ
ದಾವಣಗೆರೆ, ಮಾ. 4- ವಿಕಲಚೇತನ ರಿಗೆ ಯು.ಡಿ.ಐ.ಡಿ. ನೀಡಲು ಹಣ ಕೇಳಲಾಗುತ್ತಿದೆ ಹಾಗೂ ಅಂಗವೈಕಲ್ಯತೆ ಪ್ರಮಾಣ ಪತ್ರ ನೀಡಲು ಹಣ ಪಡೆಯಲಾ ಗುತ್ತಿದ್ದು, ಇದು ದೊಡ್ಡ ದಂಧೆಯೇ ಆಗಿದೆ ಎಂದು ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಸದಸ್ಯರು ಆರೋಪಿಸಿದ್ದಾರೆ.
ಬುಧವಾರ ಸಂಜೆ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಇವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿದ ಸದಸ್ಯರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಾಲಿಕೆಯಲ್ಲಿ ಯುಡಿಐಡಿ ನೀಡಲು ಹಣ ಯುಆರ್ಡಬ್ಲ್ಯು ಕೇಳುತ್ತಿದ್ದಾರೆಂದು ಸಮಿತಿ ಸದಸ್ಯೆ ವಿಜಯಲಕ್ಷ್ಮಿ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ದೌರ್ಜನ್ಯ ಆಗುತ್ತಿರುವ ಬಗ್ಗೆ ದೂರು ಬಂದಲ್ಲಿ ನಿರ್ದಾ ಕ್ಷಿಣ್ಯವಾಗಿ ಅವರನ್ನು ತೆಗೆದು ಹಾಕಲಾಗು ವುದು ಎಂಬ ಎಚ್ಚರಿಕೆ ನೀಡಿದ್ದಾರೆ.
ಸಂಕಲ್ಪ ಸಂಸ್ಥೆಯ ಕಾರ್ಯದರ್ಶಿ ಸುರೇಶ್.ಜಿ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಅಂಗ ವೈಕಲ್ಯತೆ ಪ್ರಮಾಣ ಪತ್ರ ನೀಡಲು ವಿಕಲಚೇತನರಿಂದ ಹಣ ಪಡೆಯುತ್ತಿದ್ದಾರೆ. ಬೌದ್ದಿಕ ಅಂಗವೈಕಲ್ಯತೆ, ಇಎನ್ಟಿ, ಕೀಲು, ಮೂಳೆ ತಜ್ಞರು, ಕಣ್ಣಿನ ತಜ್ಞರು ಈ ರೀತಿ ಮಾಡುತ್ತಿದ್ದು, ಇದೊಂದು ದೊಡ್ಡ ದಂಧೆಯೇ ಆಗಿದೆ ಎಂದರು.
ಜಿಲ್ಲಾಧಿಕಾರಿ ಹಾಗೂ ಎಸ್ಪಿ ಹನುಮಂತರಾಯ ಪ್ರತಿಕ್ರಿಯಿಸಿ, ಈ ರೀತಿಯ ಪ್ರಕರಣ ಕಂಡು ಬಂದಲ್ಲಿ ತಕ್ಷಣ ತಮ್ಮನ್ನು ಸಂಪರ್ಕಿಸಬೇಕು. ಆಗ ಸೂಕ್ತ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದರು.
ಅಂಗವೈಕಲ್ಯ ಸರ್ಟಿಫಿಕೇಟ್ ವಿಷಯವಾಗಿ ಸಿಇಓ ಹಾಗೂ ಎಸ್ಪಿಯವರೊಂದಿಗೆ ದಿಢೀರ್ ಭೇಟಿ ನೀಡಲಾಗುವುದು. ನಕಲಿ ಸರ್ಟಿಫಿಕೇಟ್ ನೀಡಿದಲ್ಲಿ ಅಂತಹವರ ವಿರುದ್ದ ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದಡಿ ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಬೀಳಗಿ ಎಚ್ಚರಿಕೆ ನೀಡಿದ್ದಾರೆ.
ಸಮನ್ವಯ ಶಿಕ್ಷಣ : ದಿ ಅಸೋಸಿ ಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ಜಿಲ್ಲಾ ಸಂಯೋಜಕ ರವಿ ಮಾತನಾಡಿ, ಸಾಮಾನ್ಯ ಮಕ್ಕಳೊಂದಿಗೆ ವಿಶೇಷ ಮಕ್ಕಳು ಕಲಿಯುವ ಸಮನ್ವಯ ಶಿಕ್ಷಣ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ದಾವಣಗೆರೆ ತಾಲ್ಲೂಕಿನಲ್ಲೇ 15 ಮಾದರಿ ಶಾಲೆಗಳಿದ್ದು ಎಪಿಡಿ ಯಿಂದ ನೀಡಲಾದ ಸಾಧನ, ಸಲಕರಣೆಗಳ ಸಮರ್ಪಕ ಬಳಕೆಯಾಗಿಲ್ಲವೆಂದರು.
ಸಂಜ್ಞೆ ಭಾಷೆ ತರ್ಜುಮೆದಾರ ಜೆ. ದುರುಗೇಶ್ ಮಾತನಾಡಿ, ಯಾವ ಶಾಲೆಯಲ್ಲೂ ನುರಿತ ಸಂಜ್ಞೆ ಭಾಷೆ ತರ್ಜುಮೆದಾರರು, ಬೌದ್ದಿಕ ಅಂಗವೈಕಲ್ಯ ಸೇರಿದಂತೆ ವಿಶೇಷ ಮಕ್ಕಳಿಗೆ ಶಿಕ್ಷಣ ನೀಡುವ ಕೌಶಲ್ಯ ಶಿಕ್ಷಕರಿಗೆ ಇಲ್ಲ ಎಂದರು.
ಸಿಗ್ನಲ್’ಗಳಲ್ಲಿ ಅಂಧರಿಗೆ ಬೀಪ್
ರಸ್ತೆಯಲ್ಲಿ ನಮಗೆ ಸಿಗ್ನಲ್ ಸೂಚನೆಗಳು ಕಾಣದ ಕಾರಣ ಅಪಘಾತಗಳು ಸಂಭವಿಸಬಹುದಾಗಿದ್ದು, ಶೀಘ್ರದಲ್ಲೇ ಸಿಗ್ನಲ್ ವ್ಯವಸ್ಥೆಯಲ್ಲಿ ಬೀಪ್ ಸೌಂಡ್ ವ್ಯವಸ್ಥೆ ಮಾಡುವಂತೆ ಸಭೆಯಲ್ಲಿ ಒತ್ತಾಯ ಕೇಳಿ ಬಂತು. ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್ಪಿ ಹನುಮಂತರಾಯ, ಸ್ಮಾರ್ಟ್ ಸಿಟಿ ವತಿಯಿಂದ ಸಿಗ್ನಲ್ ಜಂಕ್ಷನ್ ಸುಧಾರಣೆ ಕೆಲಸ ಆಗುತ್ತಿದ್ದು, ಅಂಧರಿಗಾಗಿ ಸಿಗ್ನಲ್ ಬೀಪ್ ಸೌಂಡ್ ವ್ಯವಸ್ಥೆ ಮಾಡಿಸುವುದಾಗಿ ಎಂದು ಭರವಸೆ ನೀಡಿದರು.
ಎಲ್ಲ ರೀತಿಯ ಅಂಗವೈಕಲ್ಯತೆಗೆ ಸೌಲಭ್ಯ ಕೊಡಿ
ಸ್ಥಳೀಯ ಸಂಸ್ಥೆಗಳು ಮತ್ತು ವಿವಿಧ ಇಲಾಖೆಗಳ ಶೇ.5 ರ ಅನುದಾನದಲ್ಲಿ ಕೇವಲ ಬೈಕು ಮತ್ತು ಹೊಲಿಗೆ ಯಂತ್ರ ನೀಡುವ ಬದಲಾಗಿ, ಎಲ್ಲ ರೀತಿಯ ಅಂಗವೈಕಲ್ಯವನ್ನು ಒಳಗೊಂಡ ವಿಶೇಷಚೇತನರಿಗೆ ಅನುಕೂಲವಾಗುವ ಸಲಕರಣೆಗಳನ್ನು ನೀಡಬೇಕೆಂದು ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಜಿಲ್ಲಾ ಮಟ್ಟದ ಸಮಿತಿ ಸಭೆಯ ಸದಸ್ಯರು ಒತ್ತಾಯಿಸಿದ್ದಾರೆ.
ಕ್ರಿಯಾ ಯೋಜನೆ ಮುನ್ನ ಸಮಿತಿ ರಚಿಸಿ ನಮ್ಮ ಅಭಿಪ್ರಾಯ ಪಡೆದು, ಗುಣಮಟ್ಟದ ಸಾಧನೆ-ಸಲಕರಣೆ ನೀಡುವಂತೆ ಸದಸ್ಯರು ಮನವಿ ಮಾಡಿದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪ್ರತಿಕ್ರಿಯಿಸಿ, ದೈಹಿಕ ವಿಕಲಚೇತನರಿಗೆ ಬೈಕುಗಳನ್ನು ಹೆಚ್ಚಾಗಿ ಎಂಎಲ್ಎ ಅವರ ಅನುದಾನದಲ್ಲಿ ನೀಡಲಾಗುತ್ತಿದೆ. ಮುಂದಿನ ಕ್ರಿಯಾ ಯೋಜನೆಯಲ್ಲಿ ಎಲ್ಲ ರೀತಿಯ ಅಂಗವೈಕಲ್ಯವನ್ನು ಒಳಗೊಂಡಂತೆ ಬೇಡಿಕೆಗನುಗುಣವಾಗಿ ಸಾಧನ ಸಲಕರಣೆ ನೀಡಲು ಕ್ರಮ ವಹಿಸಲಾಗುವುದು ಎಂದಿದ್ದಾರೆ.
ಡಿಡಿಪಿಐ ಸಿ.ಆರ್ ಪರಮೇಶ್ವರಪ್ಪ, ಶೇ.60 ರಷ್ಟು ಶಿಕ್ಷಕರಿಗೆ ವಿಶೇಷಚೇತನ ಮಕ್ಕಳ ಕುರಿತಾಗಿ ತರಬೇತಿ ನೀಡಲಾಗಿದೆ. ವಿಶೇಷ ಮಕ್ಕಳ ಕುರಿತು ಅಧ್ಯಯನ ಮಾಡಿದ ಶಿಕ್ಷಕರನ್ನೇ ವಿವಿಧ ಶಾಲೆಗಳಲ್ಲಿ ನೇಮಿಸಲಾಗಿದ್ದು, ವಿಶೇಷ ಮಕ್ಕಳಿಗೆ ಅಡೆತಡೆ ರಹಿತ ವಾತಾವರಣ ನಿರ್ಮಿಸಲಾಗಿದೆ ಎಂದರು.
ಸಂಕಲ್ಪ ಸಂಸ್ಥೆಯ ಕಾರ್ಯದರ್ಶಿ ಜಿ. ಸುರೇಶ್ ಮಾತನಾಡಿ, ದಾವಣಗೆರೆಯಲ್ಲಿ ಡೇ ಕೇರ್ ಸೆಂಟರ್ ತೆರೆಯುವಂತೆ ಮನವಿ ಮಾಡಿದರು. ಈ ಬಗ್ಗೆ ವಿವರವಾದ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಮ್ಯಾಗ್ನಿಫೈರ್ ಒದಗಿಸಿ : ಸಂಪೂರ್ಣ ಅಂಧರಿಗೆ ಬೈಲ್ ಕಿಟ್ ಅನುಕೂಲ ಮಾಡಿಕೊಬೇಕು. ಹಾಗೆಯೇ ಭಾಗಶಃ ಅಂಧರಿಗೆ ಮ್ಯಾಗ್ನಿಫೈರನ್ನು ನೀಡಬೇಕೆಂದು ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಡಿಹೆಚ್ಓ ಡಾ.ನಾಗರಾಜ್ ಮಾತನಾಡಿ, ಆರ್ಬಿಎಸ್ಕೆ ಯೋಜನೆಯಡಿ ಕಡಿಮೆ ದೃಷ್ಟಿ ಇರುವ ಮಕ್ಕಳನ್ನು ಗುರುತಿಸಿ ಕನ್ನಡಕ ನೀಡಲಾಗುತ್ತಿದೆ. ಮ್ಯಾಗ್ನಿಫೈರ್ ನೀಡುವ ಬಗ್ಗೆ ಕ್ರಮ ವಹಿಸಲಾಗುವುದು ಎಂದರು.
ಸಿಆರ್ಸಿ ನಿರ್ದೇಶಕ ಜ್ಞಾನವೇಲ್ ಮಾತನಾಡಿ, ಅಡಿಪ್ ಯೋಜನೆಯಡಿ ರೂ.25 ಸಾವಿರ ವೆಚ್ಚದಲ್ಲಿ ಪ್ರತಿ ವರ್ಷ ವಿವಿಧ ರೀತಿಯ ಅಂಗವಿಕಲರಿಗೆ ಸಾಧನೆ ಸಲಕರಣೆ ವಿತರಿಸಲಾಗುತ್ತಿದೆ ಎಂದರು.
ಸೋಷಿಯಲ್ ಆಡಿಟ್ : ಸ್ಪೂರ್ತಿ ಸಂಸ್ಥೆಯ ರೂಪ್ಲಾನಾಯ್ಕ ಮಾತನಾಡಿ, ಸೌಲಭ್ಯ ಪಡೆದವರೇ ಪ್ರಭಾವ ಬಳಸಿ ಮತ್ತೆ ಸೌಲಭ್ಯ ಪಡೆಯುವುದನ್ನು ತಪ್ಪಿಸಲು ಸೋಷಿಯಲ್ ಆಡಿಟ್ಗೆ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.
ಸಿಇಓ ಡಾ.ವಿಜಯ ಮಹಾಂತೇಶ ದಾನಮ್ಮನವರ್ ಮಾತನಾಡಿ, ಶೇ.5 ರ ಅನುದಾನದಡಿ ಕೆಲವೇ ಅಂಗವಿಕಲರಿಗೆ ಸೌಲಭ್ಯ ನೀಡುತ್ತಿರುವ ಬಗ್ಗೆ ದೂರು ಬಂದಿರುವ ಹಿನ್ನೆಲೆಯಲ್ಲಿ ಕ್ರಿಯಾ ಯೋಜನೆಗೂ ಮುನ್ನ ಬೇಡಿಕೆ ಸಮೀಕ್ಷೆ ನಡೆಸಿ ಕ್ರಿಯಾ ಯೋಜನೆ ತಯಾರಿಸಲಾಗುವುದು. ಸೌಲಭ್ಯ ನಿರ್ವಹಣೆಗೆ ಸೋಷಿಯಲ್ ಆಡಿಟ್ ಮತ್ತು ಗುಣಮಟ್ಟ ಕಾಯ್ದುಕೊಳ್ಳುವ ಬಗ್ಗೆ ಕ್ರಮ ವಹಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಶಶಿಧರ್, ವಿನಾಯಕ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಹೆಚ್.ವಿ.ಗೋಪಾಲಪ್ಪ, ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳು, ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಜಿಲ್ಲಾ ಮಟ್ಟದ ಸಮಿತಿ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.