ಶ್ರೀ ಬಸವಪ್ರಭು ಸ್ವಾಮೀಜಿ
ದಾವಣಗೆರೆ, ಮಾ.3- ನಿತ್ಯ ದುಡಿದ ಹಣವನ್ನು ಕುಡಿತ ಸೇರಿದಂತೆ, ಇತರೆ ದುಶ್ಚಟಗಳಿಗೆ ಹಾಳು ಮಾಡದೇ ಸಾರ್ಥಕ ಜೀವನ ಸಾಗಿಸಿಕೊಂಡು ಹೋಗುವಂತೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಟ್ಯಾಕ್ಸಿ ಚಾಲಕರಿಗೆ ಹಿತ ನುಡಿದರು.
ಕರ್ನಾಟಕ ಚಾಲಕರ ಒಕ್ಕೂಟದ ಜಿಲ್ಲಾ ಘಟಕದ ಪ್ರಾರಂಭೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ದುಶ್ಚಟಗಳಿಗೆ ಬಲಿಯಾಗದೆ, ಕುಡಿದು ವಾಹನ ಚಾಲನೆ ಮಾಡದೇ ತಮ್ಮ ಚಾಲಕ ವೃತ್ತಿ ಗೌರವವನ್ನು ಕಾಪಾಡಿಕೊಂಡು ಹೋಗುವಂತೆ ಸಲಹೆ ನೀಡಿದರು.
ಚಾಲಕ ವೃತ್ತಿ ಪವಿತ್ರವಾದುದು. ಸಮಾಜದಲ್ಲಿ ಚಾಲಕರ ಪಾತ್ರ ವೈದ್ಯರಷ್ಟೇ ಮಹತ್ತರವಾದುದು. ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸುವ ಹೊಣೆಗಾರಿಕೆ ಕೂಡ ಚಾಲಕರದ್ದಾಗಿರುತ್ತದೆ ಎಂದರು.
ಕೆಲವು ಸಂದರ್ಭಗಳಲ್ಲಿ ತಮ್ಮ ಜೀವದ ಹಂಗು ತೊರೆದು ಪ್ರಯಾಣಿಕರ ಜೀವರಕ್ಷಣೆ ಮಾಡಿದ ಅನೇಕ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಸಂಚಾರಕ್ಕೆ ಸಂಬಂಧಿಸಿದ ಅನೇಕ ಕಾನೂನುಗಳಿವೆ. ಆದರೆ ಸರಿಯಾದ ರೀತಿ ಪಾಲನೆಯಾಗುತ್ತಿಲ್ಲ ಎಂದು ಹೇಳಿದರು.
ನಿಮ್ಮ ಜೀವದ ಜೊತೆ ಕುಟುಂಬದ ಜೀವರಕ್ಷಣೆಯ ದೊಡ್ಡ ಜವಾಬ್ದಾರಿ ಕೂಡ ಇದೆ. ನಮ್ಮ ಬದುಕಿನ ಚಾಲಕರು ನಾವಾಗಬೇಕೆಂದರು.
ಚಾಲಕರು ಒಗ್ಗಟ್ಟಾಗಿ ಸರಿಯಾದ ನಿಟ್ಟಿನಲ್ಲಿ ಹೋರಾಟ ನಡೆಸಿದಾಗ ಮಾತ್ರ ಸಿಗಬೇಕಾದ ನ್ಯಾಯಯುತ ಸವಲತ್ತುಗಳು ಸಿಗಲು ಸಾಧ್ಯ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಹಾಪೌರ ಎಸ್.ಟಿ. ವೀರೇಶ್ ಮಾತನಾಡಿ, ನಾವು ಚಾಲಕರೆಂಬ ಕೀಳರಿಮೆ ಬೇಡ. ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು ತನ್ನ ವೃತ್ತಿಯನ್ನು ನಡೆಸಿದಾಗ ಎಲ್ಲರೂ ಅಪ್ಪಿಕೊಳ್ಳು ತ್ತಾರೆ ಮತ್ತು ಒಪ್ಪಿಕೊಳ್ಳುತ್ತಾರೆ ಎಂದರು.
ಮನುಷ್ಯ ಸಂಘಜೀವಿ, ಸಂಘಟನೆ ಕೂಡ ಅವಶ್ಯ. ಚಾಲಕ ವೃತ್ತಿಯಲ್ಲಿ ಎದುರಾಗಬಹು ದಾದ ಸಮಸ್ಯೆಗಳು, ಸವಾಲುಗಳನ್ನು ಸಂಘ ಟನೆ ಇದ್ದರೆ ಸುಲಭವಾಗಿ ಬಗೆಹರಿಸಿಕೊಳ್ಳಬ ಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಎಷ್ಟೋ ಜೀವಗಳನ್ನು ರಕ್ಷಿಸಿದ ಕೀರ್ತಿ ಚಾಲಕರದ್ದು. ಸಮಾಜದಲ್ಲಿ ಚಾಲಕರ ಪಾತ್ರ ಬಹುಮುಖ್ಯವಾದುದು ಎಂದ ಅವರು, ಮಹಾನಗರ ಪಾಲಿಕೆಯಿಂದ ಸಿಗಬಹುದಾದ ಸವಲತ್ತುಗಳನ್ನು ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸವಲತ್ತುಗಳು ಸಿಗಬೇಕೆಂಬ ಹೆಬ್ಬಯಕೆ ನನ್ನದು. ಅವರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದರು.
ಜಿಲ್ಲಾಧ್ಯಕ್ಷ ಡಿ.ಆರ್. ಅರವಿಂದಾಕ್ಷ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಒಕ್ಕೂಟದ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಿ. ನಾರಾಯಣಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕನ್ನಡ ಚಳವಳಿ ಜಿಲ್ಲಾಧ್ಯಕ್ಷ ಟಿ. ಶಿವಕುಮಾರ್, ಒಕ್ಕೂಟದ ಪದಾಧಿಕಾರಿಗಳಾದ ಬಾಳಸಾಹೇಬ್ ಕ. ಉದಗಟ್ಟಿ, ಜಯಣ್ಣ, ಗುರುಮೂರ್ತಿ, ಮೂರ್ತಿ ಗಿರಿನಗರ, ಅಶೋಕಗೌಡ್ರು, ತಿರುವಕ್ಕನರಸು (ಕುಟ್ಟಿ), ಮಹೇಶ್, ಶ್ರೀನಿವಾಸ್, ಮಂಜುನಾಥ ಕ್ರಾಂತಿಕಾರಿ, ನರೇಂದ್ರಬಾಬು, ಉಮೇಶ್, ಶ್ರೀಧರ್, ಶಿವಕುಮಾರ್, ಎಂ.ಡಿ. ಮೊಹಮ್ಮದ್ ಮಸ್ತಾನ್, ಮಣಿಕಂಠ, ಸುಭಾಶ್ಚಂದ್ರ, ಹನುಮಯ್ಯ, ಕಲಾಕುಂಚ ಸಂಸ್ಥೆ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಹಾಗೂ ಬೇಳೂರು ಸಂತೋಷ್ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.